ಬಹುತೇಕ ಹಿಂದೂಗಳಲ್ಲಿ ಆಷಾಢ ಮಾಸ ಅಶುಭ ಮಾಸ ಎಂಬ ಕಲ್ಪನೆ ಬೇರೂರಿ ಬಿಟ್ಟಿದೆ. ಆದರೆ ಆಷಾಢ ಮಾಸ ಅಶುಭ ಮಾಸ ಎಂದು ಯಾವ ಶಾಸ್ತ್ರಗಳಲ್ಲೂ ಉಲ್ಲೇಖಿಸಿಲ್ಲ. ಆಷಾಢ ಬಂತೆಂದರೆ ಮಳೆಗಾಲ ಪ್ರಾರಂಭವಾಗುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸುವುದು ಕಷ್ಟ. ಕೃಷಿಯ ಕಡೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆದ್ದರಿಂದ ಬೇರೆ ಕಾರ್ಯಗಳನ್ನು ಬದಿಗೊತ್ತಬೇಕಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ಆಷಾಢದಲ್ಲಿ ತವರಿಗೆ ಕಳಿಸುವ ಪದ್ಧತಿಯೂ ಇದೆ. ಪತಿಯು ಕೃಷಿ ಕೆಲಸ ಅಥವಾ ತನ್ನ ನಿರ್ದಿಷ್ಟ ಕಾರ್ಯದತ್ತ ಹೆಚ್ಚು ಗಮನ ಕೊಡಲಿ ಎಂಬುದು ಇದರ ಹಿಂದಿನ ಉದ್ದೇಶ. ಮುಹೂರ್ತಗಳು ನಿಷೇಧವಾಗಿವೆ ಎಂದ ಮಾತ್ರಕ್ಕೆ ಆಷಾಢ ಒಳ್ಳೆಯದಲ್ಲ ಎಂದೇನಲ್ಲ.

ಆಷಾಢ ಮಾಸದ ಮಹತ್ವ
- ಈ ಮಾಸದಲ್ಲೇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು
- ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.
- ಅನುಸೂಯದೇವಿ ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು.
- ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ
- ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ.
- ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಮೈಸೂರು ಪ್ರಾಂತ್ಯಗಳಲ್ಲಿ ಈ ಆಚರಣೆ ನಡೆಯುತ್ತದೆ.
ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು
- ಇಂದ್ರನು ಗೌತಮರಿಂದ ಶಾಪ ಪಡೆದ. ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.
- ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
- ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.