ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಮುಸುಕಿನ ಗುದ್ದಾಟ ಮುಂದುವರೆದಿದೆ. ನೇರವಾಗಿ ಸಿಎಂ ಡಿಸಿಎಂ ತಮ್ಮ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇಲ್ಲ. ಆದರೆ ಪರೋಕ್ಷವಾಗಿ ಇಬ್ಬರೂ ಕಸರತ್ತು ಮಾಡ್ತಾ ಇದ್ದಾರೆ. ತಮ್ಮ ಬೆಂಬಲಿಗರ ಮೂಲಕ ಪಕ್ಷಕ್ಕೆ ಹಾಕಿದ ಶ್ರಮದ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ದಿಲ್ಲದೇ ಹೈ ಕಮಾಂಡ್ ಭೇಟಿಗೂ ಮುಂದಾಗ್ತಾ ಇದ್ದಾರೆ.
ಬಜೆಟ್ ಅಧಿವೇಶನದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕಾಳಗ ತಾರಕಕ್ಕೇರೋ ಮುನ್ಸೂಚನೆ ದಟ್ಟವಾಗಿದೆ. ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶನ ಮಾಡ್ತಿದ್ದಾರೆ. ಆದ್ರೆ ಹೊರಗೆ ಸಿಎಂ ಕುರ್ಚಿಗಾಗಿ ನಡೀತಿರೋ ಮುಸುಕಿನ ಗುದ್ದಾಟ ಇನ್ನೂ ನಿಂತಿಲ್ಲ. ಎರಡೂವರೆ ವರ್ಷಕ್ಕೂ ಮೊದಲೇ ಹೈಕಮಾಂಡ್ ಮುಂದೆ ಹಕ್ಕು ಮಂಡನೆಗೆ ಡಿಕೆಶಿ ಮುಂದಾಗಿದ್ರೆ, ಕುರ್ಚಿ ಭದ್ರಪಡಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೂಡ ತಮ್ಮದೇ ತಂತ್ರಗಾರಿಕೆಯಲ್ಲಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಡುವೆ ಕುರ್ಚಿ ಕಾಳಗ ಇನ್ನೂ ನಿಂತಿಲ್ಲ. ನಿಲ್ಲೋ ಮುನ್ಸೂಚನೆಗೂ ಕಾಣ್ತಿಲ್ಲ. ಬಜೆಟ್ ಅಧಿವೇಶನದಲ್ಲಿ ಜೋಡೆತ್ತುಗಳಂತೆ ಒಗ್ಗಟ್ಟು ಪ್ರದರ್ಶನ ಮಾಡ್ತಿದ್ರೂ ಮುಸುಕಿನ ಗುದ್ದಾಟ ದಿನೇ ದಿನೇ ಜೋರಾಗ್ತಾನೆ ಇದೆ. ತಾವು ತಮ್ಮ ಪಕ್ಷಕ್ಕೆ ಮಾಡಿದ ಕೆಲಸಗಳನ್ನ ಪದೇ ಪದೇ ಉಚ್ಚಾರ ಮಾಡ್ತಾ ಇದ್ದಾರೆ. ಇದರ ಮಧ್ಯೆ ಅವಕಾಶ ಸಿಕ್ಕರೆ ಅನ್ನೋ ಮಾತನ್ನ ಡಿಕೆ ಶಿವಕುಮಾರ್ ಹೇಳ್ತಾನೆ ಇದ್ದಾರೆ. ಇತ್ತ ಸಿಎಂ ಕೂಡ ಐದು ವರ್ಷ ನಾನೇ ಸಿಎಂ ಅಂತ ಹೇಳುತ್ತಲೇ ಇದ್ದಾರೆ.

ಇತ್ತ ಈ ಸಿಎಂ ಬದಲಾವಣೆ ಸದ್ದಿನ ನಡುವೆ ಕೈ ಸರ್ಕಾರ 2 ವರ್ಷ ಪೂರೈಸ್ತಿದೆ. ಮೇ 20ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗುತ್ತೆ. ರಾಜ್ಯಾದ್ಯಂತ ಸಂಭ್ರಮಾಚರಣೆಗೆ ಡಿ.ಕೆ ಶಿವಕುಮಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಹಬ್ಬದ ರೀತಿಯಲ್ಲಿ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಳ್ಳುವಂತೆ ಕರೆ ಕೊಟ್ಟಿದ್ದಾರೆ. ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕಗಳು, ಪದಾಧಿಕಾರಿಗಳ ಜತೆ ಸಭೆ ನಡೆಸಿ, ಹೊಸ ನಾಯಕತ್ವದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಎರಡೂವರೆ ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್ ಗಮನ ಸೆಳೆಯಲು ಡಿಕೆಶಿ ಮುಂದಾಗಿದ್ದಾರೆ. ಇದೆಲ್ಲವೂ ಕುರ್ಚಿಗಾಗಿಯೇ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಈ ಮೂಲಕ ಮತ್ತೊಂದು ಶೀತಲ ಸಮರ ಕಾಂಗ್ರೆಸ್ ನಲ್ಲಿ ಉಂಟಾಗುತ್ತಾ ಅನ್ನೋ ಮಾತು ಜೋರಾಗಿದೆ. ಕಾಂಗ್ರೆಸ್ ನಲ್ಲಿನ ಸದ್ಯದ ಚಟುವಟಿಕೆಗಳನ್ನ ನೋಡ್ತಿದ್ರೆ, ಬಜೆಟ್ ಅಧಿವೇಶನದ ಬಳಿಕ ಕೋಲಾಹಲ ಉಂಟಾಗೋದು ಪಕ್ಕಾ ಅನಿಸ್ತಿದೆ. ಬಜೆಟ್ ಅಧಿವೇಶನದ ಬಳಿಕ ಸಿಎಂ ಕುರ್ಚಿಗಾಗಿ ಹಕ್ಕು ಮಂಡಿಸಲು ಡಿ.ಕೆ ಶಿವಕುಮಾರ್ ತೀರ್ಮಾನ ಮಾಡಿದ್ದಾರಂತೆ. ಎರಡೂವರೆ ವರ್ಷಕ್ಕೂ ಮೊದಲೇ ಹೈಕಮಾಂಡ್ ಬಳಿ ಸಿಎಂ ಕುರ್ಚಿಗೆ ಬೇಡಿಕೆ ಇಡಲು ಮುಂದಾಗಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ಕೂತಿದ್ದಾರೆ. ಎಐಸಿಸಿ ನಾಯಕರ ಬಳಿಯೂ ತಮ್ಮ ಪಟ್ಟು ಸಡಿಲಿಸದಿರಲು ಡಿಕೆ ಶಿವಕುಮಾರ್ ಗಟ್ಟಿ ತೀರ್ಮಾನ ಮಾಡಿದ್ದಾರೆ. ಡಿಕೆಶಿಯ ಈ ನಡೆಯಿಂದ ಸಿಎಂ ಅಂಡ್ ಟೀಂಗೆ ಟೆನ್ಷನ್ ಹೆಚ್ಚಾಗಿದ್ಯಂತೆ. ಇದಕ್ಕೊಂದು ಪ್ರತಿತಂತ್ರ ಮಾಡಲಿ ಸಿಎಂ ಟೀಂ ರೆಡಿಯಾಗಿದೆಯಂತೆ.

ಅದರಂತೆ ಸಿಎಂ ಸಿದ್ದರಾಮಯ್ಯ ಸುಮ್ಮನೆ ಕೂತಿಲ್ಲ. ಸಿಎಂ ಸ್ಥಾನವನ್ನ ಭದ್ರಪಡಿಸಿಕೊಳ್ಳಲು ಭಾರೀ ಕಸರತ್ತು ನಡೆಸ್ತಿದ್ದಾರೆ. ಅದಕ್ಕಾಗಿ ಸಂಪುಟ ಪುನರ್ ರಚನೆ ಮಾಡೋದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರನ್ನ ತಣ್ಣಗಾಗಿಸಲು ಸಂಪುಟ ಪುನರ್ ರಚನೆಯ ಉಪಾಯ ಕಂಡುಕೊಂಡಿದ್ದಾರೆ. ಹೈಕಮಾಂಡ್ ಒಪ್ಪಿದ್ರೆ ಏಪ್ರಿಲ್ ಅಥವಾ ಮೇನಲ್ಲಿ ಸಂಪುಟ ಪುನರ್ ರಚನೆಗೂ ಸಿದ್ದತೆ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ, ಡಿಸಿಎಂ ಆಗಿ ಮುಂದುವರೆಯಲು ಸಿಎಂಗೆ ಯಾವುದೇ ಅಭ್ಯಂತರವಿಲ್ಲ. ಬೆಂಗಳೂರು ಅಭಿವೃದ್ದಿ, ಜಲಸಂಪನ್ಮೂಲ ಎರಡು ಪ್ರಬಲ ಖಾತೆಗಳು ಡಿಕೆಶಿ ಬಳಿ ಇದೆ. ಆದ್ರೆ ಡಿ.ಕೆ ಶಿವಕುಮಾರ್ ಹಾಗೂ ಕೆಲ ಶಾಸಕರಿಗೆ ಸಿದ್ದರಾಮಯ್ಯಗಿಂತಲೂ ಸಚಿವರ ಮೇಲೆ ತೀವ್ರ ಅಸಮಧಾನವಿದೆ. ಹೀಗಾಗಿ ಡಿಕೆಶಿ ಅಸಮಧಾನ ಶಮನ ಮಾಡಲು ಆಪ್ತರನ್ನ ಸಂಪುಟದಿಂದ ಕೈ ಬಿಡಲು ಸಿಎಂ ಮುಂದಾಗಿದ್ದಾರಂತೆ.
ಸಿಎಂ ಸ್ಥಾನದಲ್ಲಿ ಮುಂದುವರೆಯಲು ಶಾಸಕರ ಬೆಂಬಲ ಅತ್ಯಗತ್ಯ. ಹೀಗಾಗಿ ಸಂಪುಟ ಪುನರ್ ರಚನೆ ವೇಳೆ ಕಠಿಣ ನಿರ್ಧಾರ ಕೈಗೊಳ್ಳಲು ಸಿಎಂ ಮುಂದಾಗಿದ್ದಾರಂತೆ. 10-12 ಸಚಿವರನ್ನ ಸಂಪುಟದಿಂದ ಕೈ ಬಿಡುವ ಆಲೋಚನೆಯಲ್ಲಿದ್ದಾರಂತೆ. ಸಿದ್ದರಾಮಯ್ಯನವ್ರೇ ಮುಂದುರಿಯೋದಾದ್ರೆ, ಯಾವುದೇ ತ್ಯಾಗಕ್ಕೂ ಸಿಎಂ ಆಪ್ತರು ಕೂಡ ಸಿದ್ದರಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್, ಮತ್ತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಖರ್ಗೆ ಸೇರಿದಂತೆ ಹೈಕಮಾಂಡ್ ಗೆ ಡಿಕೆಶಿ ತುಂಬಾ ಹತ್ತಿರವಾಗ್ತಿದ್ದಾರೆ. ಇದೇ ಕಾರಣಕ್ಕೆ ಸೈಲೆಂಟಾಗಿದ್ದ ಸಿದ್ದರಾಮಯ್ಯ, ಐದು ವರ್ಷವೂ ನಾನೇ ಸಿಎಂ, ಮುಂದೆಯೂ ನಾನೇ ಇರ್ತೀನಿ ಅಂದಿದ್ದಾರೆ ಅನ್ಸುತ್ತೆ. ಒಟ್ನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಆಗ್ತಿದ್ದಂತೆ, ಸಿಎಂ ಸ್ಥಾನಕ್ಕೆ ಡಿಕೆಶಿ ಡಿಮ್ಯಾಂಡ್ ಇಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.