ಡಿಕೆ ಶಿವಕುಮಾರ್ ಸಿಎಂ ಆಗುವ ಸನ್ನಿಹಿತ ಆಗ್ತಾ ಇದ್ಯಾ ಅನ್ನೋ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಪ್ರಾರಂಭವಾಗಿದೆ. ರಾಜಕೀಯ ಏಳು ಬೀಳುಗಳ ನಡುವೆ ಶತಾಯ ಗತಾಯ ಸಿಎಂ ಆಗಲೇ ಬೇಕು ಅನ್ನೋ ಕನಸು ಹೊತ್ತಿದ್ದಾರೆ ಡಿಕೆ ಶಿವಕುಮಾರ್. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಅಷ್ಟೆ ಅಲ್ಲ ಹೈ ಕಮಾಂಡ್ ಲೆವೆಲ್ ನಲ್ಲೂ ಒತ್ತಡ ಹಾಕುತ್ತಿದ್ದಾರೆ. ಆದರೆ ಅವರ ಕನಸು ಯಾವಾಗ ನನಸಾಗುತ್ತೋ ಗೊತ್ತಿಲ್ಲ. ಆದರೆ ಚರ್ಚೆಯಂತೂ ಆಗ್ತಾ ಇದೆ.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಅನ್ನೋ ಚರ್ಚೆ ಹೆಚ್ಚು ಕೇಳಿ ಬರ್ತಾ ಇದೆ. ಸಿಎಂ ಆಗಲು ತುದಿಗಾಲಿನಲ್ಲಿ ನಿಂತಿರುವ ಡಿಕೆ ಶಿವಕುಮಾರ್ ಗೆ ಹಲವಾರು ಅಡ್ಡಿ ಆತಂಕಗಳು ಇದ್ದೇ ಇವೆ. ರಾಜಕೀಯದಲ್ಲಿ ಯಾವುದೂ ಅಷ್ಟು ಸುಲಭಕ್ಕೆ ದಕ್ಕಲ್ಲ ಅನ್ನೋದು ಕೂಡ ಗೊತ್ತಿರೋ ವಿಚಾರವೇ. ಸಿಎಂ ಬದಲಾವಣೆ ಅನ್ನೋದನ್ನ ಆಗಿಂದಾಗ್ಲೇ ಮುನ್ನಲೆಗೆ ತರ್ತಾ ಇರೋದೆ ಬಿಜೆಪಿ ನಾಯಕರು. ಸಚಿವರ ಒಂದೊಂದೇ ಹೇಳಿಕೆ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಕಾಲೆಳೆಯುತ್ತಲೇ ಇರುತ್ತಾರೆ ಬಿಜೆಪಿ ನಾಯಕರು.

ಈಗಲೂ ಕೂಡ ಅಂತಹದ್ದೇ ಘಟನೆಯೊಂದು ನಡೆಸಿದೆ. ಡಿಕೆ ಶಿವಕುಮಾರ್ ಐದು ವರ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪೂರೈಸಿದ ಬೆನ್ನಲ್ಲೇ ಡಿನ್ನರ್ ಪಾರ್ಟಿ ಕೊಟ್ಟಿದ್ದರು. ಇಡೀ ಸಿಎಂ ಹಾದಿಯಾಗಿ ಸಚಿವರು, ಶಾಸಕರು ಈ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಮೂರ್ನಾಲ್ಕು ಜನ ಸಚಿವರು ಹೊರತು ಪಡಿಸಿದ್ರೆ ಬಹುತೇಕ ಜನ ಇದರಲ್ಲಿ ಭಾಗಿಯಾಗಿದ್ದಾರೆ. ಈ ಔತನಕೂಟ ಪರಿಷತ್ ಸದನದಲ್ಲಿ ಸದ್ದು ಮಾಡಿದ್ದೇ ಆಶ್ಚರ್ಯದ ಸಂಗತಿ. ಅದರಲ್ಲೂ ಔತನ ಕೂಟದ ವಿಚಾರ ಇಟ್ಟುಕೊಂಡು ಡಿಕೆ ಕಾಲೆಳೆದಿದ್ದಾರೆ ಬಿಜೆಪಿ, ಜೆಡಿಎಸ್ ಸದಸ್ಯರು.
ಪರಿಷತ್ ಸದನದಲ್ಲಿ ಶೂನ್ಯ ವೇಳೆಯಲ್ಲಿ ಉತ್ತರ ನೀಡುತ್ತಾ ನಿಂತಿದ್ದ ಡಿಕೆ ಶಿವಕುಮಾರ್ ಗೆ ಬಿಜೆಪಿ ಸದಸ್ಯ ಸಿ.ಟಿ ರವಿ ನೀವು ಬಹಳ ಪ್ರಸನ್ನರಾಗಿದ್ದು, ಬಹಳ ಲವಲವಿಕೆಯಿಂದ ಶುಭ ಶಕುನ ಏನಾದರೂ ಸಿಕ್ಕಿದೆಯೇ ಎಂದರು. ಈ ಮಧ್ಯೆ ಎದ್ದು ನಿಂತ ರವಿ ಕುಮಾರ್, ಸರವಣ, ಹಾಗೂ ಭೊಜೇಗೌಡ ನಿನ್ನೆಯಷ್ಟೇ ಭೋಜನ ಕೂಟ ಏರ್ಪಡಿಸಿದ್ದು ಶುಭ ಸುದ್ದಿ ಸಿಕ್ಕಿದೆಯೇ ಎಂದರು. ಇದೇ ವೇಳೆ ನಮ್ಮನ್ನು ಕರೆದಿದ್ದರೆ ಆಗ್ತಾ ಇತ್ತು ಅಂತ ಸರವಣ ಹೇಳಿದರು. ನೀವು ಬರ್ತಿರಾ ಅಂದಿದ್ದರೆ ಕರೆಯಬಹುದಿತ್ತು. ನಿಮಗೂ ಶುಭಸುದ್ದಿ ಸಿಗುತ್ತಿತ್ತು ಎಂದು ನಗೆ ಚಟಾಕಿ ಹಾರಿಸಿದರು. ಈ ವೇಳೆ ರವಿ ಕುಮಾರ್ ಮಾತನಾಡಿ ಇಷ್ಟರಲ್ಲೇ ಊಟ ಹಾಕಿಸುತ್ತೀರ ಅನ್ನಿಸುತ್ತಿದೆ ಎಂದರು.

ಈ ವೇಳೆ ಸದಸ್ಯರ ಮಾತಿಗೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಸಂತೋಷಂ ಜನೇತ್ ಪ್ರಾಜ್ಞಃ ತದೈವ ಈಶ್ವರಂ ಪೂಜ್ಯಂ ಎಂಬ ಶ್ಲೋಕ ಹೇಳಿ, ಜನರನ್ನು ಸಂತೋಪಡಿಸುವುದೇ ನಿಜವಾದ ಈಶ್ವರನ ಪೂಜೆ ಎಂಬ ಸಂದೇಶ. ಅದೇ ರೀತಿ ನಿಮಗೆ ಸಂತೋಷಪಡಿಸಿದರೆ ನಾನು ಸಂತೋಷ ಪಟ್ಟಂತೆ. ಆ ಪ್ರಯತ್ನದಲ್ಲಿ ನಾನಿದ್ದೇನೆ ಎಂದರು. ನಿಮಗೆ ಸಂತೋಷವಾಗುವ ಸುದ್ದಿ ಬರುವುದು ಯಾವಾಗ ಎಂದು ರವಿಕುಮಾರ್ ಮರು ಪ್ರಶ್ನೆ ಹಾಕಿದರು. ಈ ವೇಳೆ ನಾಜೂಕಾಗೆ ವಿಪಕ್ಷಗಳಿಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್ ನಾನು 1984ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಅಂದಿನಿಂದ ಇಲ್ಲಿಯವರೆಗೂ ಹಂತ ಹಂತವಾಗಿ ಮೇಲೇರುತ್ತಿದ್ದೇನೆ. ನಿಮ್ಮ ಸಹಕಾರ, ಶುಭಹಾರೈಕೆ ಇರಲಿ. ನಿಮ್ಮ ಕಾಟದಿಂದಲೇ ನಾನು ಸ್ವಲ್ಪ ಕೆಳಗೆ ಕುಸಿದಿದ್ದೇನೆ. ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿ ಈಗ ಈ ರೀತಿ ಕೇಳುತ್ತಿದ್ದಾರೆ ಎಂದರು.
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಏನಾದ್ರೂ ಆದ್ರೆ ನಮಗೇನಾದ್ರೂ ಸಹಾಯ ಆಗುತ್ತೆ ಅಂತ ಬಿಜೆಪಿ ನಾಯಕರು ಕಾಯ್ತಾ ಇದ್ದಾರೆ. ಹಾಗಾಗಿಯೇ ಹೀಗೆಲ್ಲಾ ಕಾಲೆಳೆದ್ದೂ ಇದೆ. ಆದರೆ ಡಿಕೆ ಶಿವಕುಮಾರ್ ಮನಸ್ಸಿನ ಮಾತನ್ನ ಬಿಜೆಪಿ ನಾಯಕರು ಬಾಯಲ್ಲಿ ಬಂದಿದೆ. ಅವರೆಲ್ಲಾ ಮಾತನಾಡುವ ವೇಳೆ ಖುಷಿಯಿಂದಲೇ ಉತ್ತರಿಸುವ ಪ್ರಯತ್ನ ಮಾಡಿದ್ದಂತೂ ಸತ್ಯ.