ಭಾರತದ ಅತಿ ದೊಡ್ಡ ಹಗರಣದಲ್ಲಿ ಒಂದಾದ ಛಾಪಾ ಕಾಗದ ಹಗರಣ ಪ್ರಕರಣ ಇದೀಗ ವೆಬ್ ಸರಣಿ ಆಗಿ ನಿರ್ಮಾಣವಾಗಿದೆ. ಈ ವೆಬ್ ಸರಣಿಯ ಟ್ರೈಲರ್ ಆಗಸ್ಟ್ 5ಕ್ಕೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 02ಕ್ಕೆ ಸೋನಿ ಲಿವ್ ನಲ್ಲಿ ಬಿಡುಗಡೆ ಆಗುತ್ತಿದೆ. ಹರ್ಷದ್ ಮೆಹ್ತಾ, ವಿಜಯ್ ಮಲ್ಯ, ನೀರವ್ ಮೋದಿ ಇವರೆಲ್ಲರ ಹಗರಣಗಳಂತೆ ಛಾಪಾ ಕಾಗದ ಹಗರಣವು ಕೂಡ ಭಾರತದ ಅತಿದೊಡ್ಡ ಹಗರಣಗಳಲ್ಲಿ ಒಂದು. ಈ ಹಿಂದೆ ಹರ್ಷದ್ ಮೆಹ್ತಾ ಹಗರಣವನ್ನು ವೆಬ್ ಸರಣಿಯಾಗಿ ನಿರ್ದೇಶನ ಮಾಡಿದ್ದ ಹನ್ಸಲ್ ಮೆಹ್ತಾ ಅವರೇ ಛಾಪಾ ಕಾಗದ ಹಗರಣದ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಹರ್ಷದ್ ಮೆಹ್ತಾ ಹಗರಣಕ್ಕೆ ‘ಸ್ಕ್ಯಾಮ್ 1992’ ಹೆಸರಿಡಲಾಗಿತ್ತು. ಇದೀಗ ಛಾಪಾ ಕಾಗದ ಹಗರಣಕ್ಕೆ ‘ಸ್ಕ್ಯಾಮ್ 2003’ ಎಂದು ಹೆಸರಿಡಲಾಗಿದೆ.

ಛಾಪಾ ಕಾಗದ ಹಗರಣದ ರೂವಾರಿ ಅದ್ಬುಲ್ ಕರೀಂ ತೆಲಗಿಯ ಪಾತ್ರದಲ್ಲಿ ಮುಖೇಶ್ ತಿವಾರಿ ನಟಿಸಿದ್ದಾರೆ. ಆದರೆ ಈಗಾಗಲೇ ಬಿಡುಗಡೆಯಾದ ‘ಸ್ಕ್ಯಾಮ್ 2003’ ಟ್ರೈಲರ್ ನಲ್ಲಿ ಮುಖೇಶ್ ತಿವಾರಿ ಅವರ ಮುಖವನ್ನು ತೋರಿಸಲಾಗಿಲ್ಲ ಬದಲಿಗೆ ಕೆಲವು ಸನ್ನಿವೇಶಗಳನ್ನು, ಅವರ ಡೈಲಾಗ್ ಗಳನ್ನಷ್ಟೇ ತೋರಿಸಲಾಗಿದೆ. ಇನ್ನು ವೆಬ್ ಸರಣಿಯಲ್ಲಿ ತೆಲಗಿಯ ಬಾಲ್ಯ, ಯೌವನದ ಕುರಿತಾದ ಕತೆ ಇರುವ ಸುಳಿವನ್ನು ಟ್ರೈಲರ್ ನೀಡಿದ್ದು, ಕೆಲವು ಡೈಲಾಗ್ ಗಳು ಜನರ ಗಮನ ಸೆಳೆದಿದೆ.
ಛಾಪಾ ಕಾಗದ ಹಗರಣದ ಮೂಲಕ ದೇಶದ ಆರ್ಥಿಕ ಹಾಗೂ ರೆವಿನ್ಯೂ ವ್ಯವಸ್ಥೆಯನ್ನೇ ಅಲುಗಾಡಿಸಿದ್ದ ರೈಲ್ವೆ ಇಲಾಖೆಯ ನಾಲ್ಕನೇ ದರ್ಜೆಯ ನೌಕರನ ಮಗನಾಗಿದ್ದ, ಬೆಳಗಾವಿ ಮೂಲದ ಅದ್ಬುಲ್ ಕರೀಂ ತೆಲಗಿಯ ಕತೆ ಇದಾಗಿದೆ. 18 ರಾಜ್ಯಗಳಲ್ಲಿ ತಮ್ಮ ಜಾಲ ವಿಸ್ತರಿಸಿ ಪ್ರತಿನಿತ್ಯ ಕೋಟಿಗಟ್ಟಲೆ ಹಣವನ್ನು ಅಕ್ರಮವಾಗಿ ಗಳಿಸುತ್ತಿದ್ದ 32 ಸಾವಿರ ಕೋಟಿ ಮೊತ್ತದ ಹಗಣರ ಇದಾಗಿದೆ. ಇನ್ನು ಹಣದುಬ್ಬರಕ್ಕೆ ಹೊಂದಿಸಿದರೆ ಈಗ ಆ 32 ಸಾವಿರ ಕೋಟಿ ಮೊತ್ತವು ಮೂರು ಲಕ್ಷ ಕೋಟಿಗಳನ್ನು ದಾಟಲಿದೆ.
ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 19 ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು ಜನರ ಮನಸ್ಸನ್ನು ಗೆದ್ದಿದೆ. ಇನ್ನು ‘ಸ್ಕ್ಯಾಮ್ 1992’ ವೆಬ್ ಸರಣಿಯಲ್ಲಿ ಬಳಸಲಾಗಿದ್ದ ಹಿನ್ನೆಲೆ ಸಂಗೀತದ ಬಿಟ್ ಅನ್ನೇ ‘ಸ್ಕ್ಯಾಮ್ 2003’ ವೆಬ್ ಸರಣಿಯಲ್ಲೂ ಬಳಸಲಾಗಿರುವುದು ವಿಶೇಷ. ಈ ಬಿಜಿಎಮ್ ಇಂದಲೇ ‘ಸ್ಕ್ಯಾಮ್ 2003’ ವೆಬ್ ಸರಣಿ ಮೇಲಿನ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿರುವುದಂತೂ ಸುಳ್ಳಲ್ಲ.ತೆಲಗಿ ಕರ್ನಾಟಕದ ಬೆಳಗಾವಿಯವನಾಗಿದ್ದು, ಈತನನ್ನು ಬೆಂಗಳೂರಿನ ಪೊಲೀಸರೇ ಬಂಧಿಸಿ ವಿಚಾರಣೆ ನಡೆಸಿರುವುದರಿಂದ ಕರ್ನಾಟಕದ ಒಟಿಟಿ ಪ್ರೇಕ್ಷಕರನ್ನ ಹೆಚ್ಚಾಗಿ ಸೆಳೆಯಲಿದೆ.
ಇಷ್ಟು ದೊಡ್ಡ ಹಗರಣ ಮಾಡಿ ತೆಲಗಿ ಬಂಧನಕ್ಕೊಳಗಾದ ನಂತರವೂ ಜೈಲಿನಲ್ಲಿ ಐಶಾರಾಮಿ ಜೀವನದೊಂದಿಗೆ ದಂದೆ ಮುಂದುವರೆಸುತ್ತಲೇ ಇದ್ದ. ಇನ್ನು ತೆಲಗಿಗೆ ಸಹಾಯ ಮಾಡಿದ ಹಲವು ಪೊಲೀಸ್ ಅಧಿಕಾರಿಗಳು ಕೆಲಸವನ್ನೂ ಕಳೆದುಕೊಂಡಿದ್ದಾರೆ. ಇದರೊಂದಿಗೆ ಈ ಹಗರಣದಲ್ಲಿ ಭಾಗಿಯಾದ ಹಲವು ರಾಜ್ಯಗಳ ಮಂತ್ರಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು, ಪತ್ರಕರ್ತರು ಹಾಗೂ ತೆಲಗಿ ಬಂಧನಕ್ಕೆ ಕಾರಣವಾದ ವ್ಯಕ್ತಿಯ ಪಾತ್ರಗಳು ಈ ವೆಬ್ ಸರಣಿಯಲ್ಲಿ ಹೇಗೆ ಮೂಡಿಬಂದಿದೆ ಎಂದು ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಒಟ್ಟಾರೆ ಪ್ರೇಕ್ಷಕರು ಈ ವೆಬ್ ಸರಣಿಯ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.