ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಷ್ಟವಿರುತ್ತದೆ. ಕೆಲವರು ತಮ್ಮ ಕೈಯಾರೆ ತಾವೇ ಕಷ್ಟಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಕಷ್ಟ ಬಂತು ಎಂದರೆ ಕುಗ್ಗಿ ಹೋಗುತ್ತಾರೆ. ಇನ್ನೂ ಕೆಲವರು ಏನೇ ಕಷ್ಟ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತಾರೆ. ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ಕಷ್ಟಗಳು ಬಂದಾಗ ದೇವರ ಮೊರೆ ಹೋಗುವುದನ್ನಂತೂ ಮರೆಯುವುದಿಲ್ಲ. ಕೆಲವರು ಜ್ಯೋತಿಷಿಗಳ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾರೆ. ಕೆಲವೊಮ್ಮೆ ಮನೆ ವಾಸ್ತು ಸರಿ ಇಲ್ಲದಿದ್ದರೂ ಸಮಸ್ಯೆಗಳು ಹೆಚ್ಚಾಗುತ್ತವೆ. ಇದನ್ನು ಪರಿಹರಿಸಲು ನಾನಾ ಮಾರ್ಗಗಳಿವೆ. ಆಮೆ ಉಂಗುರ ಧರಿಸುವುದು, ವಾಸ್ತು ಪರಿಹಾರಗಳಲ್ಲಿ ಒಂದು.
ಆಮೆಯನ್ನು ಕೂರ್ಮ ಎಂದು ಕರೆಯುತ್ತಾರೆ. ಕೂರ್ಮಾವತಾರವು ಭಗವಾನ್ ವಿಷ್ಣುವಿನ 2ನೇ ಅವತಾರ. ಆದ್ದರಿಂದ ನೀವು ಆಮೆ ಉಂಗುರವನ್ನು ಧರಿಸಿದಲ್ಲಿ ವಿಷ್ಣು ಭಗವಂತನೇ ನಿಮ್ಮ ಮನೆಯಲ್ಲಿ ನೆಲೆಸಿದಂತೆ, ಅವನು ಸದಾ ನಿಮ್ಮ ಜೊತೆಗೆ ಇದ್ದು ನಿಮ್ಮನ್ನು ಹರಸಿದಂತೆ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಮೆ ಉಂಗುರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಕೆಲವರು ಆಮೆಯನ್ನು ತಂದು ಮನೆಯಲ್ಲಿ ಪುಟ್ಟ ಆಕ್ವೇರಿಯಂ ಇಟ್ಟು ಸಾಕುತ್ತಾರೆ. ಆದರೆ ಆಮೆಯನ್ನು ಮನೆಯಲ್ಲಿಟ್ಟುಕೊಳ್ಳಲು ನೀವು ಕಾನೂನು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಬಹಳಷ್ಟು ಜನರು ಆಮೆ ಉಂಗುರವನ್ನು ಧರಿಸುತ್ತಾರೆ. ಭಾರತದ ವಾಸ್ತು ಪ್ರಕಾರ ಮಾತ್ರವಲ್ಲದೆ, ಚೀನಾ ಫೆಂಗ್ಶೂಯಿಯಲ್ಲೂ ಆಮೆಗೆ ವಿಶೇಷ ಪ್ರಾಮುಖ್ಯತೆ ಇದೆ. ಆಮೆ ಉಂಗುರ ಧರಿಸಿದರೆ ಜೀವನದಲ್ಲಿ ಕಷ್ಟ, ವಾಸ್ತು ಸಮಸ್ಯೆಗಳು ಕಡಿಮೆಯಾಗಿ ಸುಖ, ಸಂತೋಷ, ಸಮೃದ್ಧಿ ಉಂಟಾಗುತ್ತದೆ. ಆದರೆ ಆಮೆ ಉಂಗುರ ಖರೀದಿಸುವ ಮುನ್ನ, ಧರಿಸುವಾಗ ಕೆಲವೊಂದು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಸಮಸ್ಯೆ ಪರಿಹಾರವಾಗುವುದಕ್ಕಿಂತ ಹೆಚ್ಚುತ್ತದೆ ಎನ್ನುವುದನ್ನು ನೆನಪಿಡಿ.

- ಯಾವಾಗ ಬೇಕಾದರೆ ಆಗ ಆಮೆ ಉಂಗುರ ಖರೀದಿಸುವಂತಿಲ್ಲ, ನೀವು ಶುಕ್ರವಾರದ ದಿನವೇ ಆಮೆ ಉಂಗುರವನ್ನು ಖರೀದಿಸಿ ಮನೆಗೆ ತರಬೇಕು.
- ಉಂಗುರ ಧರಿಸುವ ಮುನ್ನ ಅದನ್ನು ಹಾಲು ಅಥವಾ ಗಂಗಾಜಲದಲ್ಲಿ ಸ್ವಲ್ಪ ಹೊತ್ತು ಬಿಡಬೇಕು. ನಂತರ ಶುದ್ಧ ಬಟ್ಟೆಯಲ್ಲಿ ಒರೆಸಿ ಲಕ್ಷ್ಮೀ ಫೋಟೋ ಅಥವಾ ವಿಗ್ರಹದ ಮುಂದಿಟ್ಟು ಲಕ್ಷ್ಮೀ ಸ್ತೋತ್ರ, ವಿಷ್ಣು ಸ್ತೋತ್ರ, ಕೂರ್ಮಾವತಾರ ಸ್ತೋತ್ರವನ್ನು ಜಪಿಸಿ ಪೂಜೆ ಮಾಡಬೇಕು
- ಗುರುವಾರ ಅಥವಾ ಶುಕ್ರವಾರ ಆಮೆ ಉಂಗುರವನ್ನು ಬೆರಳಿಗೆ ಧರಿಸುವುದು ಶುಭ.
- ಉಂಗುರವನ್ನು ಬಲಗೈ ತೋರು ಬೆರಳು ಅಥವಾ ಮಧ್ಯದ ಬೆರಳಿಗೆ ಮಾತ್ರವೇ ಧರಿಸಬೇಕು, ಹಾಗೆ ಆಮೆಯು ನಿಮ್ಮ ಕಡೆಗೆ ಮುಖ ಮಾಡಿರುವಂಥ ಉಂಗುರವನ್ನು ಖರೀದಿಸಿ
- ಬೆಳ್ಳಿಯಿಂದ ತಯಾರಿಸಿದ ಆಮೆ ಉಂಗುರವನ್ನು ಧರಿಸುವುದು ಮಂಗಳಕರ.
- ಉಂಗುರ ಖರೀದಿಸುವ ಮುನ್ನ ಸೂಕ್ತ ಜ್ಯೋತಿಷಿಗಳನ್ನು ಸಂಪರ್ಕಿಸಿ ನಿಮ್ಮ ಜನ್ಮ ದಿನಾಂಕ, ಹೆಸರಿನ ಆಧಾರದ ಮೇಲೆ ಆಮೆ ಉಂಗುರವನ್ನು ಧರಿಸಬೇಕೋ ಇಲ್ಲವೋ, ಧರಿಸುವಾಗ ಏನೆಲ್ಲಾ ಮುನ್ನೆಚರಿಕೆ ವಹಿಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.
- ಮೇಷ, ಕನ್ಯಾ, ಕರ್ಕಾಟಕ, ವೃಶ್ಚಿಕ, ಮೀನ ರಾಶಿಯವರು ಆಮೆ ಉಂಗುರವನ್ನು ಧರಿಸಕೂಡದು.
ಆಮೆ ಉಂಗುರ ಧರಿಸುವುದರಿಂದ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿ ಆವರಿಸುತ್ತದೆ. ಆಮೆಯು ವಿಷ್ಣುವಿನ ಅವತಾರಗಳಲ್ಲಿ ಒಂದಾಗಿದ್ದು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ನೀವು ಜೀವನದಲ್ಲಿ ಅಂದುಕೊಂಡಂತೆ ಗುರಿ ಸಾಧಿಸಬಹುದು. ಈ ಉಂಗುರವನ್ನು ಧರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದು ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಕುಟುಂಬದ ಸದಸ್ಯರು ಸೇರಿದಂತೆ ಎಲ್ಲರೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ವೃತ್ತಿ, ಹಣಕಾಸು, ಪ್ರೇಮ, ವೈವಾಹಿಕ, ಆರೋಗ್ಯ ಎಲ್ಲಾ ವಿಚಾರದಲ್ಲೂ ನಿಮಗೆ ಜಯ ದೊರೆಯುತ್ತದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆ, ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.