ಇತ್ತೀಚಿನ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ. ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲದೆ, ದಿನ ನಿತ್ಯ ಬೆಳಗ್ಗೆ-ಸಂಜೆ ವಾಕ್ ಮಾಡುವವರು ಹೋಗುತ್ತಾರೆ. ಏಕೆಂದರೆ ಬೆಳಗ್ಗೆ ಮತ್ತು ಸಂಜೆ ಪಾರ್ಕ್ನಲ್ಲಿ ನಡೆಯಲು ವೈದ್ಯರು ಶಿಫಾರಸು ಮಾಡುತ್ತಾರೆ. ಇದರಿಂದ ದೇಹಕ್ಕೆ ಶುದ್ಧವಾದ ಗಾಳಿ ದೊರೆಯುತ್ತದೆ ಮತ್ತು ಉತ್ತಮ ಆರೋಗ್ಯವನ್ನೂ ಕಾಪಾಡುತ್ತದೆ. ಆದರೆ ಇಲ್ಲೊಂದು ಪಾರ್ಕ್ ಇದೆ. ಇಲ್ಲಿಗೆ ಹೋಗುವ ಮೊದಲು ನೀವು ಹತ್ತು ಬಾರಿ ಯೋಚಿಸಬೇಕಾಗುತ್ತದೆ. ಹೌದು, ಇಲ್ಲಿರುವ ಸಸ್ಯಗಳು ಆಕ್ಸಿಜನ್ ಕೊಡಲ್ಲ, ಬದಲಾಗಿ ವ್ಯಕ್ತಿಯ ಜೀವವನ್ನೇ ತೆಗೆದುಕೊಳ್ಳುತ್ತವೆ. ಅಪ್ಪಿ ತಪ್ಪಿ ಈ ಪಾರ್ಕ್ಗೆ ಪ್ರವೇಶಿಸಿದರೆ ತಕ್ಷಣ ಪ್ರಜ್ಞೆ ತಪ್ಪುತ್ತದೆ. ಈ ಪಾರ್ಕ್ನಲ್ಲಿ ಯಾವುದೇ ಸಸ್ಯವನ್ನು ಮುಟ್ಟಲು ನಿಷೇಧಿಸಲಾಗಿದೆ.
ಅಂದಹಾಗೆ ಈ ಪಾರ್ಕ್ ಇರುವುದು ಇಂಗ್ಲೆಂಡ್ನ ನಾರ್ತಂಬರ್ಲ್ಯಾಂಡ್ ನಗರದಲ್ಲಿ. ಪಾರ್ಕ್ ಹೆಸರು ಅಲ್ನ್ವಿಕ್ ಪಾಯಿಸನ್ ಗಾರ್ಡನ್. ಗೈಡ್ ಇಲ್ಲದೆ ಜನರನ್ನು ಒಳಗೆ ಬಿಡುವುದು ಅತ್ಯಂತ ಅಪಾಯಕಾರಿ. ಈ ಪಾರ್ಕ್ನಲ್ಲಿ 100 ಕ್ಕೂ ಹೆಚ್ಚು ಜಾತಿಯ ವಿಷಕಾರಿ ಸಸ್ಯಗಳಿವೆ. ಈ ಸಸ್ಯಗಳು ನಿಮ್ಮನ್ನು ಕೊಲ್ಲಬಹುದು ಎಂದು ಸ್ಪಷ್ಟವಾಗಿ ಬರೆದಿರುವ ಎಚ್ಚರಿಕೆಯ ಫಲಕಗಳನ್ನು ನೀವು ವಿವಿಧ ಸ್ಥಳಗಳಲ್ಲಿ ಕಾಣಬಹುದು. ಈ ಉದ್ಯಾನದ ಹೊರಗೆ ಕಪ್ಪು ಗೇಟ್ ಇದ್ದು ಅದರ ಮೇಲೆ ಎಚ್ಚರಿಕೆ ಫಲಕವಿದೆ.

ವಿಷಕಾರಿ ಪಾರ್ಕ್ ನಿರ್ಮಿಸಲು ಕಾರಣ
ಈ ಪಾಯ್ಸನ್ ಗಾರ್ಡನ್ ಅನ್ನು 2005 ರಲ್ಲಿ ನಿರ್ಮಿಸಲಾಯಿತು. ಅಪಾಯಕಾರಿ ಸಸ್ಯಗಳ ಬಗ್ಗೆ ಜನರು ಮಾಹಿತಿ ಪಡೆಯಲು ಈ ಉದ್ಯಾನವನ್ನು ರಚಿಸಲಾಗಿದೆ. ಇಂತಹ ಸಸ್ಯಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಜನರು ಅವುಗಳಿಂದ ದೂರ ಉಳಿಯುತ್ತಾರೆ ಎಂಬುದು ಪಾರ್ಕ್ ಕ್ರಿಯೇಟ್ ಮಾಡಿದವರ ಅಭಿಪ್ರಾಯ. ಇಲ್ಲಿಗೆ ಭೇಟಿ ನೀಡುವ ಜನರಿಗೆ ಸುರಕ್ಷತೆಯ ಬಗ್ಗೆ ಮೊದಲು ತಿಳಿಸಲಾಗುತ್ತದೆ. ಈ ಉದ್ಯಾನದಲ್ಲಿ ಯಾವುದನ್ನೂ ಮುಟ್ಟಬೇಡಿ ಅಥವಾ ವಾಸನೆ ಅಥವಾ ರುಚಿ ನೋಡಲು ಪ್ರಯತ್ನಿಸಬೇಡಿ ಎಂದು ಹೇಳಲಾಗುತ್ತದೆ.
ಹೇಗೆ ಮತ್ತು ಎಷ್ಟು ಸಮಯದಲ್ಲಿ ಸಾಯುತ್ತಾರೆ? ವಿಶೇಷವೆಂದರೆ ಈ ಪಾರ್ಕ್ನಲ್ಲಿ ಕೆಲವು ಸಸ್ಯಗಳು ತುಂಬಾ ಸುಂದರವಾಗಿವೆ. ಆದರೆ ಅವು ಅಷ್ಟೇ ಮಾರಕವಾಗಿವೆ. ಹೂಗಳ ಸೌಂದರ್ಯವನ್ನು ನೋಡಿದರೆ ಜನರಿಗೆ ಮುಂದಾಗುವ ಅಪಾಯವನ್ನು ಊಹಿಸಲೂ ಸಾಧ್ಯವಿಲ್ಲ. ಕೋಕಾ, ಅಫೀಮು ಗಸಗಸೆ, ಸೆಣಬು, ಸೋಮ್ನಿಫೆರಮ್, ಕ್ಯಾಸ್ಟರ್ ಮುಂತಾದ ಅನೇಕ ಸಸ್ಯಗಳನ್ನು ಸಹ ಇಲ್ಲಿ ನೆಡಲಾಗಿದೆ. ಈ ಉದ್ಯಾನದ ಸಂಸ್ಥಾಪಕ, ಡಚೆಸ್ ಆಫ್ ನಾರ್ತ್ಲ್ಯಾಂಡ್. ಇವರ ಪ್ರಕಾರ, ಇಲ್ಲಿನ ಅನೇಕ ಸಸ್ಯಗಳು ತಮ್ಮ ಔಷಧೀಯ ಗುಣಗಳಿಗೂ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ ಇಲ್ಲಿ ಕೆಲವು ಸಸ್ಯಗಳನ್ನು ತಿಂದರೆ ಜನರು ಹೇಗೆ ಮತ್ತು ಎಷ್ಟು ಸಮಯದಲ್ಲಿ ಸಾಯುತ್ತಾರೆ ಎಂಬುದನ್ನು ತಿಳಿಯಲು ಜನರು ಆಸಕ್ತಿ ವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ವಿಷಕಾರಿ ಸಸ್ಯಗಳಿದ್ದರೂ ವರ್ಷವಿಡೀ 8 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಪಾರ್ಕ್ ಸುಮಾರು 14 ಎಕರೆ ಪ್ರದೇಶದಲ್ಲಿ ಹರಡಿದೆ. ಇಲ್ಲಿ ಸುಮಾರು 7000 ಸಸ್ಯಗಳಿವೆ. ಇದು 100 ಕ್ಕೂ ಹೆಚ್ಚು ವಿಷಕಾರಿ ಸಸ್ಯಗಳನ್ನು ಒಳಗೊಂಡಿದೆ. ಅವುಗಳ ವಾಸನೆ ತೆಗೆದುಕೊಳ್ಳುವುದಾಗಲೀ ಅಥವಾ ಮುರಿಯಲು ನಿಷೇಧಿಸಲಾಗಿದೆ.