ದುಡ್ಡು ಸಂಪಾದಿಸಿ ಸಾಲದವರಿಗೆ ಕೊಟ್ಟು, ನಿಮಗೂ ಕೊಟ್ಟು ಅದೇ ರಾತ್ರಿ ಸಾಯುತ್ತೇನೆ; ಪತ್ನಿ ಜೊತೆ ಮಾತನಾಡಿರುವ ನಿರ್ದೇಶಕ ಗುರುಪ್ರಸಾದ್ ಆಡಿಯೋ ವೈರಲ್
ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಪ್ರತಿಭಾನ್ವಿತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ನೇಣಿಗೆ ಶರಣಾಗಿದ್ದಾರೆ ಎಂಬ ಸುದ್ದಿ ಕೇಳಿ ಎಷ್ಟೋ ಜನರಿಗೆ ನಂಬಲಾಗಲಿಲ್ಲ. ತನ್ನ ಕೈಯಾರೆ ಜೀವನವನ್ನು ಕೊನೆಗೊಳಿಸಿಕೊಳ್ಳುವ ನಿರ್ಧಾರವನ್ನು ಅವರು ಮಾಡಿದ್ದಾರೆ ಎಂದರೆ ನಂಬುವುದು ಕಷ್ಟವಾಗಿತ್ತು. ಆದರೆ ಆಶ್ಚರ್ಯ ಎನಿಸಿದರೂ ಗುರುಪ್ರಸಾದ್ ದುರಂತ ಅಂತ್ಯ ಕಂಡಿದ್ದರು. ಮೆಲ್ನೋಟಕ್ಕೆ ಗುರುಪ್ರಸಾದ್ ಅವರ ಸಾ*ವಿಗೆ ಆರ್ಥಿಕ ಸಮಸ್ಯೆಯೇ ಕಾರಣ ಎನ್ನಲಾಗಿತ್ತು. ಇದೀಗ ಅವರು ಪತ್ನಿ ಜೊತೆ ಮಾತನಾಡಿರುವ ಆಡಿಯೋವೊಂದು ವೈರಲ್ ಆಗುತ್ತಿದೆ.
ಗುರುಪ್ರಸಾದ್, ಮೊದಲ ಪತ್ನಿಯಿಂದ ದೂರಾಗಿದ್ದು ಕೆಲವು ದಿನಗಳ ನಂತರ ಸುಮಿತ್ರಾ ಎಂಬುವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಇತ್ತು. ಸಾವನ್ನಪ್ಪುವ ಕೆಲವು ತಿಂಗಳ ಹಿಂದೆ, ತಾವು ಮೊದಲು ಇದ್ದ ಮನೆಯಿಂದ ಹೆಂಡತಿಯನ್ನು ತವರು ಮನೆಗೆ ಕಳಿಸಿದ ನಂತರ ಗುರುಪ್ರಸಾದ್ ಕೂಡಾ ಆ ಮನೆಯನ್ನು ಖಾಲಿ ಮಾಡಿ ಅಪಾರ್ಟ್ಮೆಂಟ್ ಒಂದರಲ್ಲಿ ಉಳಿದುಕೊಂಡಿದ್ದರು. ಆಗ ಪತ್ನಿ ಸುಮಿತ್ರಾ ಜೊತೆ ಮಾತನಾಡಿರುವ ಫೋನ್ ಕಾಲ್ ಅದು. ಪತ್ನಿ ಕರೆ ಮಾಡಿ ಮಗಳನ್ನು ಮಾತನಾಡಿಸಿ ಎಂದು ನಿಮಗೆ ಹೇಳಿದ್ದೆ ಎನ್ನುತ್ತಾರೆ. ಗುರುಪ್ರಸಾದ್, ತಮ್ಮ ಪತ್ನಿಗೆ ಬಹುವಚನದಲ್ಲೇ ಮಾತನಾಡುತ್ತಾ, ನಿಮಗೆ ನನ್ನ ಪರಿಸ್ಥಿತಿ ಗೊತ್ತಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ನೀವು ನಿಮ್ಮನ್ನು ಬಹಳ ಕಿಲಾಡಿ ಎಂದುಕೊಂಡಿದ್ದೀರ.

ನನಗೆ ತಿನ್ನಲು ಊಟ ಕೂಡಾ ಇಲ್ಲ, ಅಂಥಹ ಪರಿಸ್ಥಿತಿಗೆ ಬಂದಿದ್ದೇನೆ. ಸಾಯುವ ಮುನ್ನ ಒಂದಷ್ಟು ದುಡ್ಡು ಮಾಡಿ ಎಲ್ಲರಿಗೂ ಕೊಡುತ್ತೇನೆ. ನಾನು ಕೆಲವರಿಗೆ ಮೆಸೇಜ್ ಕಳಿಸಬೇಕು, ಆದರೆ ಅದು ಸಾಧ್ಯವಾಗುತ್ತಿಲ್ಲ. ನಾನು ದರ್ಶನ್ ರೀತಿ ಅಲ್ಲ, ನನ್ನ ಬಳಿ ದುಡ್ಡು ಇದ್ದಿದ್ದರೂ ನಾನು ಆ ರೀತಿ ಮಾಡುತ್ತಿರಲಿಲ್ಲ. ದುಡ್ಡು ಮಾಡಿ, ಕೊಡಬೇಕಾದವರಿಗೆ ಕೊಟ್ಟು, ನಿಮಗೂ ಕೊಟ್ಟು ಅದೇ ದಿನ ರಾತ್ರಿ ಸಾಯಲು ನಿರ್ಧರಿಸಿದ್ದೇನೆ, ನನ್ನ ಬಿಪಿ ರೈಸ್ ಮಾಡಿಸಬೇಡಿ, ಸುಸ್ತಾಗಿದ್ದೇನೆ, ಬದುಕಲೂ ಆಗದೆ, ಸಾಯಲೂ ಆಗದಂಥ ಪರಿಸ್ಥಿತಿಯಲ್ಲಿದ್ದೀನಿ, ಗಂಡ ಕಷ್ಟದಲ್ಲಿದ್ದಾಗ ಏನು ಜವಾಬ್ದಾರಿ ತೆಗೆದುಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳಬೇಕು, ನಾಳೆ ಮಾತಾಡ್ತೀನಿ ಎಂದು ಗುರುಪ್ರಸಾದ್ ಹೇಳುತ್ತಾರೆ.
ನಾನು ನಿಮಗೆ ತೊಂದರೆ ಕೊಡಬಾರದು, ನೀವು ಫ್ರೀ ಇರಲಿ ಎಂಬ ಕಾರಣಕ್ಕೆ ನಾನು ನಿಮ್ಮನ್ನು ಬಿಟ್ಟು ಬಂದಿದ್ದೇನೆ, ನನಗೆ ಗೊತ್ತಾಯ್ತು, ನಿಮಗೆ ನನ್ನನ್ನು ಕಂಡರೆ ಆಗುವುದಿಲ್ಲ ಎಂದು. ನಾನು ಬೇಡ ಸರಿ, ಆದರೆ ಮಗಳ ಕಡೆಗಾದರೂ ಗಮನ ಕೊಡಿ ಎಂದು ಸುಮಿತ್ರಾ, ಪತಿ ಗುರುಪ್ರಸಾದ್ ಬಳಿ ಮನವಿ ಮಾಡುತ್ತಾರೆ. ಗಂಡ ನೆಮ್ಮದಿಯಾಗಿರುವಂತೆ ನೋಡಿಕೊಳ್ಳಬೇಕಾದದ್ದು ಹೆಂಡತಿ ಕರ್ತವ್ಯ, ಬಹಳ ಸುಸ್ತಾಗಿದ್ದೀನಿ ನಾಳೆ ಮಾತನಾಡುವೆ ಎಂದು ಗುರುಪ್ರಸಾದ್ ಫೋನ್ ಡಿಸ್ಕನೆಕ್ಟ್ ಮಾಡುತ್ತಾರೆ. ಈ ಆಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವೆಂಬರ್ 3 ರಂದು ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತಯಾಗಿತ್ತು. ಅವರ ರೂಮ್ನಿಂದ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಬಂದು ಪರಿಶೀಲಿಸಿದಾಗ ಪ್ರಕರಣ ಪತ್ತೆಯಾಗಿದೆ. ಬಹಳ ದಿನಗಳಿಂದ ಅವರು ಅಪಾರ್ಟ್ಮೆಂಟ್ನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮೃ*ತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗುರುಪ್ರಸಾದ್ 2006 ರಲ್ಲಿ ಮಠ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದರು. ಇದಾದ ನಂತರ 2009ರಲ್ಲಿ ಎದ್ದೇಳು ಮಂಜುನಾಥ ಸಿನಿಮಾ ಮಾಡಿದ್ದರು. ಈ ಸಿನಿಮಾ ಚಿತ್ರಕಥೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿತ್ತು. ಆದರೆ ಇದಾದ ನಂತರ ಅವರು ನಿರ್ದೇಶನ ಮಾಡಿದ ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ, ರಂಗನಾಯ ಕ ಸಿನಿಮಾ ಸೋಲು ಕಂಡಿದ್ದವು. ನಿರ್ದೇಶಕನಾಗಿ ಮಾತ್ರವಲ್ಲ, ನಟನಾಗಿ ಕೂಡಾ ಗುರುಪ್ರಸಾದ್ ಗುರುತಿಸಿಕೊಂಡಿದ್ದರು. ಮಠ, ಎದ್ದೇಳು ಮಂಜುನಾಥ, ಮೈಲಾರಿ, ಕಳ್ ಮಂಜ, ಹುಡುಗರು, ಜಿಗರ್ಥಂಡ, ಖುಷ್ಕ, ಬಡವ ರಾಸ್ಕಲ್, ಬಾಡಿಗಾರ್ಡ್, ಯುಐ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗುರುಪ್ರಸಾದ್ ನಟಿಸಿದ್ದರು. ಕಿರುತೆರೆಯ ಕೆಲವೊಂದು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಕೂಡಾ ಕಾಣಿಸಿಕೊಂಡಿದ್ದರು.
ಗುರುಪ್ರಸಾದ್ ಪ್ರತಿಭಾವಂತ ನಿರ್ದೇಶಕ, ಆದರೆ ಕೆಲವರ ಸಹವಾಸಕ್ಕೆ ಬಿದ್ದು ಆತ ಹಾಳಾದ. ಮೊದಲೆಲ್ಲಾ ಶೂಟಿಂಗ್ ಸೆಟ್ಗೆ ಪುಸ್ತಕ ಹಿಡಿದು ಬರುತ್ತಿದ್ದವ ಕ್ರಮೇಣ ಬಿಯರ್ ಬಾಟಲ್ ಹಿಡಿದು ಬರುತ್ತಿದ್ದ, ಬಹಳ ತಡವಾಗಿ ಬರುತ್ತಿದ್ದ, ನಾವು ಊಟ ಮಾಡುತ್ತಿದ್ದಾಗ ಹೇಳದೆ ಕೇಳದೆ ತಟ್ಟೆಗೆ ಕೈ ಹಾಕಿಬಿಡುತ್ತಿದ್ದ ಎಂದು ಜಗ್ಗೇಶ್, ಗುರುಪ್ರಸಾದ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಜಗ್ಗೇಶ್ ಅವರ ಮಾತಿಗೆ ವಿರೋಧ ವ್ಯಕ್ತವಾಗಿತ್ತು.