ಬೆಂಗಳೂರಿನ ಜೆ.ಪಿ.ಪಾರ್ಕ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಮ್ಮಿಕೊಂಡಿದ್ದ “ಬೆಂಗಳೂರು ನಡಿಗೆ” ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ಬಿಜೆಪಿ ಶಾಸಕ ಮುನಿರತ್ನ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. . ಆರ್ಎಸ್ಎಸ್ ವಸ್ತ್ರದಲ್ಲಿ ಮುನಿರತ್ನ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಈ ವೇಳೆ ಡಿಸಿಎಂ ಹಾಗೂ ಮುನಿರತ್ನ ನಡುವೆ ಮಾತಿನ ಚಕಮಕಿ ನಡೆದಿದೆ, ಆಗ ಏಯ್, ಕರಿ ಟೋಪಿ ಎಂಎಲ್ಎ ಬಾ ಇಲ್ಲಿ ಎಂದು ಡಿಕೆ ಶಿವಕುಮಾರ್ ವೇದಿಕೆಗೆ ಕರೆದಿದ್ದಾರೆ.

ವೇದಿಕೆಗೆ ಬಂದ ಮುನಿರತ್ನ ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ, ಜನರೊಡನೆ ಇರುತ್ತೇನೆ ಎಂದಿದ್ದಾರೆ. ಪರವಾಗಿಲ್ಲ ಇಲ್ಲಿ ಕುಳಿತುಕೋ ಎಂದು ಡಿಸಿಎಂ ಹೇಳಿದ್ದು, ಈ ಮಧ್ಯೆ ಅವರ ಮೈಕ್ ಕಸಿದು ಮುನಿರತ್ನ ಹೈಡ್ರಾಮ ಮಾಡಿದ್ದಾರೆ. ಈ ವೇಳೆ ಅಲ್ಲಿ ಗದ್ದಲ ಸೃಷ್ಟಿಯಾಗಿದ್ದು, ರಾಜಕೀಯ ಕಿತ್ತಾಟದ ವೇದಿಕೆಯಾಗಿ ಈ ಕಾರ್ಯಕ್ರಮ ಬದಲಾಯ್ತು.
ಕಾರ್ಯಕ್ರಮದಲ್ಲಿ ನಿರೂಪಕರು ಮುನಿರತ್ನ ಅವರನ್ನು ಸ್ವಾಗಿಸಿ ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ವೇದಿಕೆ ಏರಿದ ಮುನಿರತ್ನ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿಸಿದ್ದೀರಿ. ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನವೂ ಕೊಟ್ಟಿಲ್ಲ ಎಂದು ಮುನಿರತ್ನ ಗರಂ ಆಗಿದ್ದಾರೆ. ಮುನಿರತ್ನ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದರು., ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿದ್ದಾರೆ. ಗಲಾಟೆ ಹೆಚ್ಚಾದ ಕಾರಣ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದೊಯ್ದರು.

ಕಾಂಗ್ರೆಸ್ ಕಾರ್ಯಕರ್ತರು ನನಗೆ ಒದ್ದು, ಹಲ್ಲೆ ನಡೆಸಿದ್ದಾರೆ ಎಂದು ಮುನಿರತ್ನ ಆರೋಪ ಮಾಡಿದ್ದು, ಜೆಪಿ ಪಾರ್ಕ್ ಕಾರ್ಯಕ್ರಮದಲ್ಲಿ ಶಾಸಕರನ್ನು ಹೊಡೆಯಲು ಕನಕಪುರದಿಂದ ರೌಡಿಗಳು ಬಂದಿದ್ದಾರೆ ಎಂದು ದೂರಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜನಪ್ರತಿನಿಧಿಯನ್ನು ಅಪಮಾನಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಸ್ಥ ಳೀಯ ಶಾಸಕರಿಗೆ ತಾಳ್ಮೆ ಇಲ್ಲ. ಕಾರ್ಯಕ್ರಮ ಹಾಳು ಮಾಡಲೆಂದೇ ಆಗಮಿಸಿದ್ದರು. ಇಂತವರನ್ನು ಗೆಲ್ಲಿಸಿದ್ದು ನಿಮ್ಮ ತಪ್ಪು. ಮುಂದೆಯಾದರೂ ಸರಿಪಡಿಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮುನಿರತ್ನ ಅವರಿಗೆ ಟಾಂಗ್ ನೀಡಿದ್ದಾರೆ.



