ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ ಹೊಸ ವರ್ಷದಂದು ತಮ್ಮ ಬಹುಕಾಲದ ಗೆಳತಿ ಸ್ವಾತಿ ಅವರನ್ನು ವಿವಾಹವಾಗಿದ್ದಾರೆ. ಸಾಂಪ್ರದಾಯಿಕವಾಗಿ ನಡೆದ ಈ ವಿವಾಹದಲ್ಲಿ ಹಿತೇಶ್ ಮತ್ತು ಸ್ವಾತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಲ್ಲಿ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಹಿತೇಶ್ ಬಿಳಿ ರೇಷ್ಮೆ ಶರ್ಟ್ ಮತ್ತು ಮುಂಡು ಧರಿಸಿ ಮಿಂಚಿದರೆ, ಸ್ವಾತಿ ರಿಚ್ ಆಗಿರುವ ಕೆಂಪು ಬಣ್ಣದ ರೇಷ್ಮೆ ಸೀರೆ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಹಿತೇಶ್ ಮತ್ತು ಸ್ವಾತಿ ಕಳೆದ ಒಂದು ದಶಕದಿಂದ ಪರಸ್ಪರ ಪರಿಚಿತರು. ಹಿತೇಶ್ ಅವರು ಸ್ವಾತಿಯನ್ನು ತಮ್ಮ ಊರಿನ ಸಮೀಪದ ದೇವಸ್ಥಾನದಲ್ಲಿ ಭೇಟಿಯಾದರು.

ಮೊದಲು ಸ್ನೇಹಿತರಾಗಿದ್ದ ಇವರು ಆ ನಂತರ ಪ್ರೀತಿಸತೊಡಗಿದರು. ಹಿತೇಶ್ ಮತ್ತು ಸ್ವಾತಿ ತಮ್ಮ ನಿಶ್ಚಿತಾರ್ಥದ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಹಿತೇಶ್ ಕಾಪಿನಡ್ಕ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸ್ಪರ್ಧಿಗಳಲ್ಲಿ ಒಬ್ಬರಾಗಿ ಖ್ಯಾತಿಯನ್ನು ಗಳಿಸಿದರು. ಬಹುತೇಕರು ಹಿತೇಶ್ ಅವರನ್ನು ‘ಪ್ಯಾಕು ಪ್ಯಾಕು’ ಎಂಬ ಪದದಿದಂಲೇ ಗುರುತಿಸಲು ಪ್ರಾರಂಭಿಸಿದರು.
ಹಿತೇಶ್ ಪ್ರಸ್ತುತ ಕೆಲವು ಚಲನಚಿತ್ರಗಳಲ್ಲಿ ನಟಿಸುತ್ತಿದ್ದು, ಅವು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಆಗಿದ್ದ ಹಿತೇಶ್. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಹಲವು ಬಾರಿ ಲೇಡಿ ಗೆಟಪ್ ಹಾಕಿಕೊಂಡು ವೀಕ್ಷಕರನ್ನು ರಂಜಿಸಿದ್ದರು. ಹಿತೇಶ್ಗೆ ಸ್ಯಾಂಡಲ್ವುಡ್ನಿಂದ ಅನೇಕ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದ್ದು, ಗೋವಿಂದೇ ಗೌಡ ಅವರ ‘ಜಂತರ್ ಮಂತರ್’, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಗೀತಾ’, ಮನೋರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ ಪೇಟೆ’, ‘ಯಾಜಮಾನ’ ‘ಕ್ರಾಂತಿ’, ‘ಏಕ್ ಲವ್ ಯಾ’, ‘ಕಿರಾತಕ 2’ ಸಿನಿಮಾಗಳಲ್ಲೂ ಹಿತೇಶ್ ಕಾಣಿಸಿಕೊಂಡಿದ್ದಾರೆ.
ಹಿತೇಶ್ ಮೂಲತಃ ಕಾಪಿನಡ್ಕ ಎಂಬ ಊರಿನವರು. ತಂದೆಯ ಹೆಸರು ಮುತ್ತಪ್ಪ ಪೂಜಾರಿ, ತಾಯಿ – ರತ್ನಾವತಿ. ಇವರಿಗೆ ನಿತೇಶ್ ಮತ್ತು ಸುಖೇಶ್ ಎಂಬ ಇಬ್ಬರು ಅಣ್ಣಂದಿರು ಇದ್ದಾರೆ. ಬಿ.ಕಾಂ ಮಾಡಿರುವ ಹಿತೇಶ್ ಅವರು ಮೊದಮೊದಲು ರಿಚಾರ್ಜ್ ಶಾಪ್, ಟಿವಿ ಶಾಪ್ ಗಳಲ್ಲಿ ಸಹ ಕೆಲಸ ಮಾಡಿದ್ದಾರೆ. ಹೀಗೆ ಕೆಲಸ ಮಾಡುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಹಿತೇಶ್ ಅವರ ತಂದೆ ಕೂಡ ಹಾಸ್ಯ ಮಾಡುತ್ತಿದ್ದರು, ಭಜನೆ ಮಾಡುತ್ತಿದ್ದರು. ಯಕ್ಷಗಾನಕ್ಕೆಲ್ಲ ಹಾಡುತ್ತಿದ್ದರು. ತಾಯಿ ಕೂಡ ತುಂಬಾ ತಮಾಷೆ ಮಾಡುತ್ತಾರೆ. ಹೀಗಾಗಿ ಹಾಸ್ಯ ಮಾಡುವುದು ಅವರಿಗೆ ರಕ್ತದಲ್ಲೇ ಬಂದಿದೆ.
ಅಂಗನವಾಡಿಗೆ ಹೋಗುವಾಗಲೇ ಕಥೆ ಕೇಳುವ ಕಾಂಪಿಟೇಷನ್ ಗೆ ಹೋಗುತ್ತಿದ್ದ ಹಿತೇಶ್, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲಿ ತುಂಬಾ ಬಹುಮಾನಗಳು ಬರುತ್ತಿದ್ದವು. ಕಾಲೇಜು ದಿನಗಳಲ್ಲಿ ಮಿಮಿಕ್ರಿ ಮಾಡುತ್ತಿದ್ದಾಗ, ಅಲ್ಲಿ ಅವರ ಪ್ರತಿಭೆಯನ್ನ ಗುರುತಿಸಿದರು. ಆಗ ಅವರಿಗೆ ಮಂಗಳೂರು ಆಕಾಶವಾಣಿಯಲ್ಲಿ ಮೊದಲು ಮಿಮಿಕ್ರಿ ಮಾಡುವ ಅವಕಾಶ ಸಿಕ್ಕಿತು. ಉಪೇಂದ್ರ ರವರನ್ನ ಮಿಮಿಕ್ರಿ ಮಾಡಿದ್ದ ಹಿತೇಶ್ ಅವರಿಗೆ ಮಾಸ್ಟರ್ ಆನಂದ್ ಹಾಗೂ ಡಾ.ರಾಜಕುಮಾರ್ ರವರನ್ನ ಮಿಮಿಕ್ರಿ ಮಾಡುವಾಗ ತುಂಬಾ ಭಯ ಆಗಿತ್ತು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.