ಅದ್ಯಾಕೋ ಡಿಕೆ ಶಿವಕುಮಾರ್ ಟೈಂ ಸರಿ ಇಲ್ವಾ ಅಂತ. ಯಾಕಂದ್ರೆ ತಾವು ಏನೇ ಮಾಡಿದರೂ ಅದು ಉಲ್ಟಾ ಹೊಡೀತಾ ಇದೆ. ಅದ್ಯಾವುದೇ ವಿಚಾರಕ್ಕೆ ಕೈ ಹಾಕಿದರೂ ವಾಪಸ್ ಅವರಿಗೇ ಬಂದು ತಾಕ್ತಾ ಇದೆ. ಯಾವುದೋ ಉದ್ದೇಶ ಇಟ್ಟುಕೊಂಡು ಹೇಳಿಕೆ ನೀಡಿದರೂ ಅದು ಮತ್ತೊಂದು ರೂಪ ಪಡೆಯುತ್ತಿದೆ. ಈಗ ಅಂತದ್ದೇ ಒಂದು ಹೇಳಿಕೆ ನೀಡಿ ವಿಪಕ್ಷಗಳಷ್ಟೆ ಅಲ್ಲ ಸ್ವಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈ ಕಮಾಂಡ್ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಅಮಿತ್ ಷಾ ಜೊತೆ ವೇದಿಕೆ ಹಂಚಿಕೊಂಡಿದ್ದು, ಇದೆಲ್ಲವೂ ಡಿಕೆ ಶಿವಕುಮಾರ್ ಮೇಲಿನ ಭಾವನೆ ಬದಲಾಗುವಂತೆ ಮಾಡಿದೆ. ಈಗ ತಮ್ಮಿಂದಲೇ ಮತ್ತೊಂದು ಎಡವಟ್ಟು ಮಾಡಿಕೊಂಡು ಪಕ್ಷದ ಜೊತೆ ತಮಗೂ ಡ್ಯಾಮೇಜ್ ಆಗುವಂತೆ ಮಾಡಿಕೊಂಡಿದ್ದಾರೆ.

ಹೌದು, ಅಲ್ಪಸಂಖ್ಯಾತರಿಗೆ ಕೋಟಾ ನೀಡಲು ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು ಎಂಬ ಡಿಕೆ ಶಿವಕುಮಾರ್ ಹೇಳಿಕೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ದೊಡ್ಡ ಮಟ್ಟಿನ ಡ್ಯಾಮೇಜ್ ಆಗಿರೋದಂತೂ ಸತ್ಯ. ಈ ಹೇಳಿಕ ಸದ್ಯ ವಿವಾದವನ್ನು ಹುಟ್ಟುಹಾಕಿದೆ. ಡ್ಯಾಮೇಜಿಂಗ್ ಸ್ಟೇಟ್ಮೆಂಟ್ ಬೆನ್ನಲ್ಲೇ ಸ್ಪಷ್ಟನೆ ಕೊಡೋದಕ್ಕೆ ಮುಂದಾಗಿದ್ದಾರೆ ಡಿಕೆ ಶಿವಕುಮಾರ್.
ಹೌದು, ಕೆ ಶಿವಕುಮಾರ್ ನೀಡಿದ್ದ ಒಂದು ಹೇಳಿಕೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಗೆ ಸಂದರ್ಶನದಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್ ಹೇಳಿಕೆ ವೈರಲ್ ಆಗಿದೆ. ಅಲ್ಪಸಂಖ್ಯಾತರಿಗೆ ಕೋಟಾ ನೀಡಲು ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕಾನೂನಾತ್ಮಕವಾಗಿ ರಿಸಲ್ಟ್ ಬರುವವರೆಗೆ ತಡ ಆಗುತ್ತದೆ. ಆದರೆ ಒಳ್ಳೆಯ ರಿಸಲ್ಟ್ ಬರುತ್ತದೆ. ಆದರೆ ಸಂವಿಧಾನದಲ್ಲಿ ಬದಲಾದರೆ ಒಳ್ಳೆಯದು ಅನ್ನೊ ಅರ್ಥದಲ್ಲಿ ಮಾತನಾಡಿದ್ದರು. ಈ ವಿಚಾರ ಚರ್ಚೆಯ ಜೊತೆಗೆ ವಿರೋಧಕ್ಕೂ ಕಾರಣವಾಗಿದೆ.
ಸದ್ಯ ವಿವಾದಾತ್ಮಕ ಹೇಳಿಕೆಯ ಸುಳಿಯಲ್ಲಿ ಈಗ ಡಿಕೆ ಶಿವಕುಮಾರ್ ಸಿಲುಕಿದ್ದಾರೆ. ಸಂದರ್ಶನದಲ್ಲಿ ಕೊಟ್ಟ ಒಂದು ಹೇಳಿಕೆ ಈಗ ಡಿಕೆಯನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ವಿಚಾರವಾಗಿ ವಿಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಡಿಕೆ ಹೇಳಿಕೆಯನ್ನ ಖಂಡನೆ ಮಾಡ್ತಾ ಇವೆ. ಈ ವಿಚಾರವಾಗಿ ಇಂದು ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿಕೆ ಕೊಟ್ಟು ಈಗ ಇಲ್ಲ ನಾವು ತಿರುಚುತ್ತಿದ್ದೇವೆ ಅಂತಿದ್ದಾರೆ. ಇದೆಲ್ಲ ನಡೆಯೋದಿಲ್ಲ. ಈ ಬಗ್ಗೆ ಮಾತನಾಡಿದ್ದವರ ವಿರುದ್ದ ನಾವು ನಾವು ಕ್ರಮ ಕೈಗೊಂಡ್ವಿ. ಈಗ ಇವರು ರಾಜಿನಾಮೆ ಕೊಡಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಚಾರ ಹೆಚ್ಚು ಡ್ಯಾಮೇಜ್ ಆಗ್ತಾ ಇದ್ದಂತೆ ಎಚ್ಚೆತ್ತ ಕಾಂಗ್ರೆಸ್ ಹೈ ಕಮಾಂಡ್ ಡಿಸಿಎಂ ಡಿಕೆ ಶಿವಕುಮಾರ್ ಬಳಿ ವಿವರಣೆ ಕೇಳಿದೆ. ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರು, ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ, ಸಂವಿಧಾನ ಬದಲಿಸುವ ಬಗ್ಗೆ ನಾನು ಮಾತನಾಡಲಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಎಂದರು. ಇನ್ನು ಹೈ ಕಮಾಂಡ್ ಸ್ಪಷ್ಟನೆ ಕೇಳಿರುವ ಬಗ್ಗೆ ಮಾತನಾಡಿದ ಅವರು ಸಹಜವಾಗಿ ಕೇಳಿದ್ದಾರೆ. ನಡೆದುದ್ದರ ಬಗ್ಗೆ ವಿವರಣೆ ಕೊಟ್ಟಿದ್ದೇನೆ ಎಂದಿದ್ದಾರೆ.
ಸದ್ಯ ಹನಿಟ್ರ್ಯಾಪ್ ನಿಂದ ಮುಜುಗರಕ್ಕೆ ಈಡಾಗಿದ್ದ ಸರ್ಕಾರ ಈಗ ಡಿಕೆ ಹೇಳಿಕೆಯಿಂದ ಮತ್ತೊಮ್ಮೆ ಮುಜುಗರಕ್ಕೆ ಈಡಾಗಿದೆ. ಇದು ಕೇವಲ ಡಿಕೆಗಷ್ಟೆ ಅಲ್ಲ ರಾಷ್ಟ್ರ ನಾಯಕರು ಮುಜುಗರಕ್ಕೆ ಈಡಾಗುವಂತೆ ಮಾಡಿದೆ. ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡ ವಿಚಾರವಾಗಿ ಹೈ ಕಮಾಂಡ್ ಡಿಕೆ ಶಿವಕುಮಾರ್ ಮೇಲೆ ಮುನಿಸಿಕೊಂಡಿದೆ. ಈಗ ಈ ರೀತಿಯ ಹೇಳಿಕೆ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಈ ವಿಚಾರ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಸದ್ಯ ಡಿಕೆ ಶಿವಕುಮಾರ್ ಇದನ್ನ ಯಾವ ರೀತಿ ಸರಿ ಮಾಡ್ತಾರೆ ಅಂತ ಕಾದು ನೋಡಬೇಕು.