ಪ್ರತಿ ಶುಕ್ರವಾರ ಬಂತೆಂದರೆ ಸಿನಿಪ್ರಿಯರಿಗೆ ಹಬ್ಬ. ಒಂದು ವೇಳೆ ಆ ದಿನ ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆಯ್ತು ಅಂದ್ರೆ ಸಾಕು ಅಭಿಮಾನಿಗಳು ಮೆಚ್ಚಿನ ನಟರ ಆಳೆತ್ತರದ ಕಟೌಟ್ ನಿರ್ಮಿಸುವುದು, ಹಾರ ಹಾಕುವುದು, ಹಾಲಿನ ಅಭಿಷೇಕ ಮಾಡುವುದು, ಥಿಯೇಟರ್ ಮುಂದೆ ಪಟಾಕಿ ಹಚ್ಚುವುದು, ಜನರಿಗೆ ಸಿಹಿ ಹಂಚುವುದು ಮಾಡುತ್ತಾರೆ. ಹಾಗೇ ನಟರ ಹೊಸ ಸಿನಿಮಾ ಅನೌನ್ಸ್ ಆದಾಗ ಅವರಿಗೆ ಯಾವ ನಟಿ, ನಾಯಕಿಯಾಗಿ ನಟಿಸಬಹುದು ಎಂದು ತಿಳಿಯಲು ಕುತೂಹಲದಿಂದ ಕಾಯುತ್ತಿರುತ್ತಾರೆ.
ಸಿನಿಮಾಗಳಲ್ಲಿ ನಾಯಕನಷ್ಟೇ , ನಾಯಕಿ ಪಾತ್ರಕ್ಕೂ ಪ್ರಾಧ್ಯಾನತೆ ಇರುತ್ತದೆ. ಬಹುತೇಕ ಸಿನಿಮಾಗಳಲ್ಲಿ ನಾಯಕಿಯನ್ನು ತೆರೆ ಮೇಲೆ ಸುಂದರವಾಗಿ ತೋರಿಸುತ್ತಾರೆ. ಅವರ ಕಾಸ್ಟ್ಯೂಮ್, ಹೇರ್ಸ್ಟೈಲ್, ಮೇಕಪ್ ಎಲ್ಲವೂ ಬಹಳ ಆಕರ್ಷಕವಾಗಿರುತ್ತದೆ. ಎಷ್ಟೋ ಸಿನಿಮಾಗಳಲ್ಲಿ ಹಾಡುಗಳು, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಾಯಕಿಯರ ಹೊಟ್ಟೆ ಮೇಲೆ ಹೂವು ಇಡುವುದು, ಸೇಬು-ದ್ರಾಕ್ಷಿಯಂಥ ಹಣ್ಣುಗಳನ್ನು ಎಸೆಯುವುದು, ಹೊಕ್ಕಳಿಗೆ ಮುತ್ತು ಇಡುವುದನ್ನು ತೋರಿಸಲಾಗುತ್ತದೆ. ಈ ದೃಶ್ಯ ನೋಡುತ್ತಿದ್ದರೆ ಹುಡುಗರ ಎದೆಬಡಿತ ಹೆಚ್ಚಾಗದೆ ಇರದು. ಅಂದ ಹಾಗೆ ಸಿನಿಮಾಗಳಲ್ಲಿ ಈ ರೀತಿ ನಾಯಕಿಯರ ಅಂದಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡುವುದು, ಹೊಟ್ಟೆ ಮೇಲೆ ಹಣ್ಣು, ಹೂಗಳನ್ನು ಎಸೆಯುವ ಟ್ರೆಂಡ್ ಶುರುವಾಗಿದ್ದು ತೆಲುಗು ಚಿತ್ರರಂಗದಿಂದ.
ಟಾಲಿವುಡ್ನ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಮೊದಲ ಬಾರಿಗೆ ಈ ಪ್ರಯೋಗ ಶುರು ಮಾಡಿದ್ದು. ತೆಲುಗು ಮಾತ್ರವಲ್ಲ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಡಾ ಇಂತಹ ದೃಶ್ಯಗಳನ್ನು ನೋಡಬಹುದು. 1988 ರಲ್ಲಿ ತೆರೆ ಕಂಡ ಚಿರಂಜೀವಿ, ವಿಜಯಶಾಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಂಚಿದೊಂಗ ಸಿನಿಮಾದಲ್ಲಿ ಮೊದಲ ಬಾರಿಗೆ ಈ ರೀತಿಯ ದೃಶ್ಯವನ್ನು ಅಳವಡಿಸಿಕೊಳ್ಳಲಾಯ್ತು. ಆ ಸಿನಿಮಾದ ಬೆಟ್ ಲೈಟ್ ತಗ್ಗಿಂಚನಾ…. ಎಂಬ ಫಸ್ಟ್ ನೈಟ್ ಹಾಡಿನ ದೃಶ್ಯವೊಂದರಲ್ಲಿ ನಾಯಕಿ ವಿಜಯಶಾಂತಿ ಹೊಟ್ಟೆ ಮೇಲೆ ಹಣ್ಣುಗಳನ್ನು ಎಸೆಯಲಾಗುತ್ತದೆ. ಅಲ್ಲಿಂದ ಶುರುವಾದ ಆ ಟ್ರೆಂಡ್ ಇದುವರೆಗೂ ಮುಂದುವರೆದಿದೆ.

ಕನ್ನಡದಲ್ಲೂ ನ್ಯೂಸ್ ಚಿತ್ರದಲ್ಲಿ ನಾನು ಜಿತೇಂದ್ರ..ನೀನು ಶ್ರೀದೇವಿ ಹಾಡು ಸೇರಿದಂತೆ ಬಹುತೇಕ ಸಿನಿಮಾಗಳ ಹಾಡಿನಲ್ಲಿ ನಾಯಕಿಯ ಹೊಟ್ಟೆ ಮೇಲೆ ಹಣ್ಣುಗಳನ್ನು ಎಸೆಯೋ ದೃಶ್ಯವಿದೆ. ಅಲ್ಲರಿ ಪ್ರಿಯುಡು ತೆಲುಗು ಚಿತ್ರದಲ್ಲಿ ನಾಯಕಿ ರಮ್ಯಕೃಷ್ಣಗೆ ಹೂ, ಹಣ್ಣುಗಳಿಂದಲೇ ಕಾಸ್ಟ್ಯೂಮ್ ರೆಡಿ ಮಾಡಲಾಗಿದೆ. ಸಾಹಸವೀರುಡು ಸಾಗರ ಕನ್ಯಾ ಚಿತ್ರದಲ್ಲಿ ನಾಯಕಿ ಶಿಲ್ಪಾಶೆಟ್ಟಿ ಹೊಕ್ಕಳ ಮೇಲೆ ನಾಯಕ ವಿಕ್ಟರಿ ವೆಂಕಟೇಶ್ ಶಂಕುವನ್ನು ಎಸೆಯುತ್ತಾರೆ. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಇಂಥಹ ದೃಶ್ಯಗಳಿವೆ. ತಮ್ಮನ್ನು ಇಷ್ಟು ಸುಂದರವಾಗಿ ಚಿತ್ರಿಸುವ ಕಾರಣಕ್ಕೆ ನಾಯಕಿಯರು ರಾಘವೇಂದ್ರ ರಾವ್ ಅವರ ನಿರ್ದೇಶನದ ಸಿನಿಮಾದಲ್ಲಿ ಒಂದು ಅವಕಾಶಕ್ಕಾಗಿ ಕಾದು ನಿಂತ ಉದಾಹರಣೆಗಳಿವೆ.
ರಾಘವೇಂದ್ರ ರಾವ್ ಅವರ ಪೂರ್ತಿ ಹೆಸರು ಕೊವೆಲಮುಡಿ ರಾಘವೇಂದ್ರ ರಾವ್. ಮೂಲತ: ಆಂಧ್ರಪ್ರದೇಶಕ್ಕೆ ಸೇರಿದವರು. ಇವರ ತಂದೆ ಕೆಎಸ್ ಪ್ರಕಾಶ್ ರಾವ್ ತೆಲುಗು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ತಂದೆ, ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದರಿಂದ ರಾಘವೇಂದ್ರ ರಾವ್ ಕೂಡಾ ಬಹಳ ಚಿಕ್ಕ ವಯಸ್ಸಿನಲ್ಲೇ ಟಾಲಿವುಡ್ಗೆ ಎಂಟ್ರಿ ಕೊಟ್ಟು ತೆರೆ ಹಿಂದೆ ಕೆಲಸ ಮಾಡಿದರು. 1975ರಲ್ಲಿ ಬಾಬು ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡರು. ಈ ಚಿತ್ರದಲ್ಲಿ ಶೋಭನ್ ಬಾಬು ನಾಯಕನಾಗಿ ನಟಿಸಿದ್ದರು. ಅಡವಿ ರಾಮುಡು, ಕೆಡಿ ನಂ 1, ವೇಟಗಾಡು, ಸತ್ಯಂ ಶಿವಂ, ಪ್ರೇಮ ಕಾನುಕ, ಕೊಂಡವೀಟಿ ಸಿಂಹಂ, ಕಲಿಯುಗ ಪಾಂಡವುಲು, ಜಗದೇಕವೀರುಡು ಅತಿಲೋಕ ಸುಂದರಿ, ಮಂಚಿ ದೊಂಗ ಸೇರಿ ಅನೇಕ ಸಿನಿಮಾಗಳನ್ನು ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ದಾರೆ.
ಕನ್ನಡದ ಶ್ರೀ ಮಂಜುನಾಥ ಹಾಗೂ ಹಿಂದಿಯ ಕೆಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ರಾಘವೇಂದ್ರ ರಾವ್ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ತೆರೆ ಕಂಡ ಪೆಳ್ಳಿ ಸಂದಡಿ ಚಿತ್ರದಲ್ಲಿ ನಟಿಸಿ ನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆಗೆ ಅನೇಕ ಧಾರಾವಾಹಿಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. 2017ರಲ್ಲಿ ತೆರೆ ಕಂಡ ಓಂ ನಮ: ಶಿವಾಯ ಸಿನಿಮಾ ನಂತರ ಇವರು ಹೊಸ ಸಿನಿಮಾ ನಿರ್ದೇಶನ ಮಾಡಿಲ್ಲ.