ನಾಗಪೂಜೆಯಲ್ಲಿ ಅಕ್ರಮವಾಗಿ ಜೀವಂತ ಹಾವನ್ನು ಹಿಡಿದು ಪೂಜೆ ಸಲ್ಲಿಸಿದ್ದ ಜಗ್ಗಿ ವಾಸುದೇವ್ ವಿರುದ್ಧ ಈಗ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.ಬೆಳಕಿನಲ್ಲಿ ಲಕ್ಷಾಂತರ ಜನಸ್ತೋಮದ ಮಧ್ಯೆ ಜಿವಂತ ಹಾವನ್ನು ಹಿಡಿದು ಹಿಂಸೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ದೂರು ದಾಖಲಿಸಲಾಗಿದೆ.
ಕೇರೆ ಹಾವು ಕೈಯಲ್ಲಿ ಹಿಡಿದು ಪ್ರದರ್ಶಿಸಿದ ಈಶಾ ಫೌಂಡೇಶನ್ನ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ (ಎಸ್ಪಿಸಿಎ) ಜಿಲ್ಲಾ ಸಮಿತಿ ಸದಸ್ಯ ಸಿ.ಎನ್.ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿದರು.
ಜಗ್ಗಿ ವಾಸುದೇವ್ ಮೇಲೆ ಗೌರವವಿದೆ. ಆದರೆ, ಯಾರೇ ಆಗಲಿ ಯಾವುದೇ ಪ್ರಾಣಿ ಪಕ್ಷಿಗಳನ್ನು ಹಿಡಿದು ಪ್ರದರ್ಶನ ಮಾಡಬಾರದು ಎನ್ನುವುದು ನಮ್ಮ ಉದ್ದೇಶ’ ಎಂದು ಸಿ.ಎನ್.ಪೃಥ್ವಿರಾಜ್ ತಿಳಿಸಿದ್ದಾರೆ.

ತಾಲ್ಲೂಕಿನ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ಬಳಿಯ ಈಶಾ ಯೋಗ ಕೇಂದ್ರದಲ್ಲಿ ಅ.9 ಮತ್ತು 10ರಂದು ನಡೆದ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಕೇರೆ ಹಾವನ್ನು ಅಕ್ರಮವಾಗಿ ಹಿಡಿದು ಪ್ರದರ್ಶಿಸಿದ್ದಾರೆ. ಈ ವೇದಿಕೆಯ ಮುಂಭಾಗದಲ್ಲಿ ಅಪಾರ ಸಂಖ್ಯೆಯ ಜನರು ಸೇರಿದ್ದರು. ವೇದಿಕೆಯಲ್ಲಿ ಕಣ್ಣು ಕೋರೈಸುವ ವಿದ್ಯುತ್ ಇತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಇವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಕೋರಿದ್ದಾರೆ.