ತನಗೆ ಮತ ಹಾಕಿ ಗೆಲ್ಲಿಸಿದ ಜನರ ಬೇಡಿಕೆಗಳನ್ನು ಈಡೇಸಲಾಗದ ಕಾರ್ಪೊರೇಟರ್ ಒಬ್ಬ ಸಭೆಯ ನಡುವೆ ತನ್ನದೇ ಚಪ್ಪಲಿಯಿಂದ ತನ್ನ ಕೆನ್ನೆಗೆ ಹೊಡೆದುಕೊಂಡ ಘಟನೆ ಆಂಧ್ರಪ್ರದೇಶದ ಅನಕಪಲ್ಲಿಯ ನರಸಿಪಟ್ಟಣ ಪುರಸಭೆಯಲ್ಲಿ ನಡೆದಿದೆ. ಅಲ್ಲಿನ ಕೌನ್ಸಿಲರ್ ಆಗಿರುವ ಮುಲಪರ್ತಿ ರಾಮರಾಜು ಈ ರೀತಿ ಚಪ್ಪಲಿಯಿಂದ ತನಗೆ ತಾನೆ ಹೊಡೆದುಕೊಂಡಿದ್ದು ವಿಡಿಯೋ ವೈರಲ್ ಆಗಿದೆ.
ಸಭೆಯಲ್ಲಿ ಮಾತನಾಡಿದ ಕೌನ್ಸಿಲರ್ ರಾಮರಾಜು, ‘ನಾನು ಕೌನ್ಸಿಲರ್ ಆಗಿ ಆಯ್ಕೆಯಾಗಿ 31 ತಿಂಗಳಾಗಿದೆ ಆದರೆ ನನ್ನ ವಾರ್ಡ್ನಲ್ಲಿನ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಸೇರಿದಂತೆ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ನನಗೆ ಸಾಧ್ಯವಾಗುತ್ತಿಲ್ಲ, ”ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳು ಬೇರೆ ಎಲ್ಲ ವಾರ್ಡ್ ನ ಸಮಸ್ಯೆಗಳಿಗೆ ಗಮನ ಕೊಟ್ಟಿದ್ದಾರೆ ಕೇವಲ ನನ್ನ ವಾರ್ಡಿನ ಸಮಸ್ಯೆಗಳನ್ನು ಮಾತ್ರ ಈಡೇರಿಸಲಿಲ್ಲ, ಇದೆ ಬೇಸರದಲ್ಲಿದ್ದ ಕೌನ್ಸಿಲರ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ತನ್ನ ಅಳಲನ್ನು ತೋಡಿಕೊಂಡು ತನ್ನದೇ ಚಪ್ಪಲಿಯಿಂದ ಕೆನ್ನೆಗೆ ಹೊಡೆದುಕೊಂಡಿದ್ದಾರೆ.
ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿರುವ 40 ವರ್ಷ ವಯಸ್ಸಿನ ಕೌನ್ಸಿಲರ್ ಊರಿನ ಜನರ ಒಮ್ಮತದ ಮೇಲೆ ಕೌನ್ಸಿಲರ್ ಆಗಿ ನೇಮಕಗೊಂಡಿದ್ದರು ಆದರೆ ಕೌನ್ಸಿಲರ್ ಆಗಿ ನೇಮಕವಾದಾಗಿನಿಂದ ಇಂದಿನ ವರೆಗೆ ನನ್ನ ವಾರ್ಡಿನ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದು ಕೊರಗಿದ್ದಾರೆ. ಸದ್ಯ, ಚಪ್ಪಲಿಯಿಂದ ಕೆನ್ನೆಗೆ ಹೊಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.