ದುನಿಯಾ ಸಿನಿಮಾ ಮೂಲಕ ಸ್ಟಾರ್ ನಟ ಎನಿಸಿಕೊಂಡ ನಟ ವಿಜಯ್ ಅವರನ್ನು ಅನಂತರ ಸಾಲು ಸಾಲು ಸಿನಿಮಾಗಳು ಅರಸಿ ಬಂದವು. ಕೇವಲ ಹಿರೋ ಆಗಿ ಮಿಂಚಿದ್ದ ದುನಿಯಾ ವಿಜಯ್ ‘ಸಲಗ’ ಸಿನಿಮಾ ಮೂಲಕ ನಿರ್ದೇಶಕನಾದರು. ಸಲಗ ಚಿತ್ರದ ಯಶಸ್ಸಿನ ಬಳಿಕ ವಿಜಯ್ ಇದೀಗ ‘ಭೀಮ’ ಸಿನಿಮಾ ನಿರ್ದೇಶಿಸಿ, ತಾವೇ ಹಿರೋ ಆಗಿ ನಟಿಸುತ್ತಿದ್ದಾರೆ.

ಭೀಮ ಸಿನಿಮಾದ ಶೂಟಿಂಗ್ ಈಗಾಗಲೇ ನಡೆಯುತ್ತಿದ್ದು, ಸದ್ಯ ಸಿನಿಮಾದ ಕೆಲಸಗಳು ಕೊನೆಯ ಹಂತದಲ್ಲಿದೆ. ಚಿತ್ರತಂಡ ಈಗ ಸಿನಿಮಾ ರಿಲೀಸ್ ಮಾಡು ಡೇಟ್ ಫಿಕ್ಸ್ ಮಾಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ ‘ಭೀಮ’ ಸಿನಿಮಾ ನವೆಂಬರ್ನಲ್ಲಿ ಅಂದರೆ ದೀಪಾವಳಿ ಸಮಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ನವೆಂಬರ್ ಸಮೀಪಿಸುತ್ತಿದ್ದು, ಪ್ರಚಾರಕ್ಕೂ ಚಿತ್ರತಂಡ ಸಿದ್ಧವಾಗುತ್ತಿದೆ ಎನ್ನಲಾಗಿದೆ.
ಸಿನಿಮಾದಲ್ಲಿ ದುನಿಯಾ ವಿಜಯ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಹಾಗೂ ಪ್ರೀಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೊತೆಗೆ ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಮಾಸ್ತಿ ಅವರ ಡೈಲಾಗ್ಸ್ ಚಿತ್ರದಲ್ಲಿರಲಿದೆ. ಇನ್ನು ದೀಪು ಎಸ್ ಕುಮಾರ್ ಸಂಕಲ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಚಿತ್ರಕ್ಕಿದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಭೀಮ’ ಜನರಿಗೆ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.



