ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಎಂದರೆ, ಕಲಾವಿದರು ಪ್ರತಿಭಾವಂತರಾಗಿರುವುದು ಮಾತ್ರವಲ್ಲ. ಅವರಿಗೆ ಜನರ ಬೆಂಬಲ ಸಿಗಬೇಕು, ಆಗ ಮಾತ್ರ ಒಬ್ಬ ಕಲಾವಿದ ಬೆಳೆದು ಹೆಸರು ಮಾಡಲು ಸಾಧ್ಯ. ಇಲ್ಲದೇ ಹೋದರೆ, ಅವರ ಕೆರಿಯರ್ ಕನಸುಗಳು ಎಲ್ಲವೂ ಅರ್ಧಕ್ಕೆ ನಿಂತ ಹಾಗೆ. ಮತ್ತೆ ಹೆಸರು ಮಾಡಲು ಕಷ್ಟಸಾಧ್ಯ. ಇದು ಈಗಿನ ಕಾಲಕ್ಕೂ, ಆಗಿನ ಕಾಲಕ್ಕೂ ಎಲ್ಲಾ ಕಾಲಕ್ಕೂ ಸಲ್ಲುವ ವಿಚಾರ. ಹಲವು ಕಲಾವಿದರ ಬದುಕು ಇದೇ ರೀತಿ ಆಗಿದೆ. ನಟ ಅಶೋಕ್ ಅವರು ಈ ವಿಚಾರದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.

ಹಿರಿಯ ನಟ ಅಶೋಕ್ ಅವರನ್ನು ನಾವು ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಮುಖ್ಯ ಪಾತ್ರಗಳಲ್ಲಿ ನಟಿಸಿರುವುದನ್ನು ನೋಡಿದ್ದೇವೆ. ಪುಟ್ಟಣ್ಣ ಕಣಗಾಲ್ ಅವರ ರಂಗನಾಯಕಿ ಅಂಥ ಶ್ರೇಷ್ಠ ಸಿನಿಮಾಗಳಲ್ಲಿ ಅಶೋಕ್ ಅವರು ಹೀರೋ ಆಗಿ ನಟಿಸಿ, ಹೆಸರು ಮಾಡಿದವರು. ನೋಡಲು ಸುಂದರವಾಗಿದ್ದ ಅಶೋಕ್ ಅವರು ಹೀರೋ ಆಗಿ ಬೆಳೆದು, ಹೆಚ್ಚು ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಡಾ. ರಾಜ್ ಕುಮಾರ್ ಅವರ ಎದುರು ವಿಲ್ಲನ್ ಆಗಿ ನಟಿಸಿದ ಆ ಒಂದು ಪಾತ್ರ. ಈ ವಿಷಯವನ್ನು ಅಶೋಕ್ ಅವರು ತಿಳಿಸಿದ್ದಾರೆ..
ನಟ ಅಶೋಕ್ ಅವರು ಡಾ. ರಾಜ್ ಕುಮಾರ್ ಅವರ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಕಾದಂಬರಿ ಓದಿದಾಗ ಅವರಿಗೆ ಪಾತ್ರ ಮಾಡುವುದು ಬೇಡ ಅನ್ನಿಸಿತ್ತಂತೆ. ಅಣ್ಣಾವ್ರ ಜೊತೆಗೆ ಈ ವಿಚಾರ ಹಂಚಿಕೊಂಡಾಗ, ನಿಮಗೆ ಬೇಡ ಎನ್ನಿಸಿದರೆ ಬೇಡ ಬಿಡಿ ಎಂದು ಹೇಳಿದ್ದರಂತೆ. ಆದರೆ ನಿರ್ಮಾಪಕ ವೀರಾಸ್ವಾಮಿ ಅವರು, ನಿರ್ದೇಶಕ ದೊರೈ ಭಗವಾನ್ ಅವರು ಹಾಗು ಇನ್ನಿತರರು ನಮಗೆಲ್ಲಾ ಹೇಳದೆ ಅದು ಹೇಗೆ ಬಿಟ್ಟುಬಿಡ್ತೀರಾ ಅಂದರಂತೆ. ಅವರೆಲ್ಲರ ಮಾತು ಕೇಳಿ ಅಶೋಕ್ ಅವರು ಪಾತ್ರ ಮಾಡೋದಾಗಿ ಒಪ್ಪಿದರಂತೆ.

ಇಂಡಸ್ಟ್ರಿಯಲ್ಲಿ ದೊಡ್ಡವರನ್ನ ಎದುರು ಹಾಕಿಕೊಂಡು ಬದುಕೋದು ಕಷ್ಟ ಎಂದು ಒಪ್ಪಿಕೊಂಡರಂತೆ. ಆದರೆ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಬೈದಿದ್ದಕ್ಕೆ, ಅವರ ಅಭಿಮಾನಿಗಳು ಕೋಪಗೊಂಡರಂತೆ. ಅಶೋಕ್ ಅವರನ್ನು ವಿಲ್ಲನ್ ಥರ ನೋಡೋದಕ್ಕೆ ಶುರು ಮಾಡಿದರಂತೆ. ಪರಿಸ್ಥಿತಿ ಹೇಗಾಯ್ತು ಎಂದರೆ ಅಶೋಕ್ ಅವರು ತಲೆಗೆ ಹೆಲ್ಮೆಟ್ ಹಾಕೊಂಡು ಸಿನಿಮಾ ನೋಡೋಕೆ ಹೋಗುವ ಹಾಗೆ ಆಗಿ ಹೋಯ್ತಂತೆ. ಒಂದು ಪಾತ್ರವಾಗಿ ಅವರು ಗೆದ್ದಿದ್ದರು, ಆದರೆ ಒಬ್ಬ ವ್ಯಕ್ತಿಯಾಗಿ ಸೋತಿದ್ದರು. ಸನಾದಿ ಅಪ್ಪಣ್ಣ ನಂತರ ಅವರಿಗೆ ಹೇಳಿಕೊಳ್ಳುವಂಥ ಒಳ್ಳೆಯ ಪಾತ್ರಗಳು ಬರಲೇ ಇಲ್ಲವಂತೆ.
ಹೌದು, ಅಶೋಕ್ ಅವರಿಗೆ ಈ ಸಿನಿಮಾ ನಂತರ ಅವಕಾಶಗಳು ಕಡಿಮೆ ಆಯಿತು. ಬಳಿಕ ಪೋಷಕ ಪಾತ್ರಗಳು ಬರುವುದಕ್ಕೆ ಶುರುವಾಯಿತು. ಇದರಿಂದ ಅವರ ಕೆರಿಯರ್ ಗೆ ತೊಂದರೆ ಆಯಿತು. ಇದಕ್ಕೆ ಕಾರಣ ಅಭಿಮಾನಿಗಳ ಮುಗ್ಧತೆ ಹಾಗೂ ವ್ಯಕ್ತಿಪೂಜೆ ಎಂದು ಹೇಳುತ್ತಾರೆ ಹಿರಿಯ ನಟ ಅಶೋಕ್. ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳು ಇರುವಾಗ ಬೇರೆ ಕಲಾವಿದರಿಗೆ ಈ ಥರ ಆಗುತ್ತದೆ. ಹೀಗೆ ಕೆರಿಯರ್ ಹಾಳು ಮಾಡಿಕೊಂಡ ಕಲಾವಿದರಲ್ಲಿ ಅಶೋಕ್ ಅವರು ಒಬ್ಬರು. ಇದು ನಿಜಕ್ಕೂ ಬೇಸರದ ವಿಷಯ.