ಲಡ್ಡುಮುತ್ಯಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರಿಗೆ ಈ ಲಡ್ಡು ಮುತ್ಯಾ ಯಾರು ಎಂಬ ಪ್ರಶ್ನೆಯೂ ಮೂಡಿದೆ. ಅದ್ಯಾವುದೋ ವ್ಯಕ್ತಿ ತಿರುಗುವ ಫ್ಯಾನ್ ಗೆ ಕೈ ಹಾಕಿ ನಿಲ್ಲಿಸುತ್ತಾನೆ, ‘ ಲಡ್ಡು ಮುತ್ಯಾನ ಅವತಾರ’ ಅಂತ ಹಾಡು ಬರುತ್ತದೆ. ಅದು ತಮಾಷೆಯ ವಸ್ತುವಂತೆ ರೀಲ್ಸ್ ನ ತುಂಬ ಹರಿದಾಡುತ್ತದೆ. ಆದರೆ ನಿಜವಾಗಿ ಲಡ್ಡು ಮುತ್ಯಾ ಎಂದರೆ ಯಾರು ಗೊತ್ತೆ ?
ಗುರುರಾಜ್ ಕೊಡ್ಕಣಿ ಸೋಷಿಯಲ್ ಮೀಡಿಯಾ ಪೋಸ್ಟ್ ಇಲ್ಲಿ ನೀಡಲಾಗಿದೆ. “ಉತ್ತರ ಕರ್ನಾಟಕದಲ್ಲಿ ‘ಮುತ್ಯಾ’ ಎಂದರೆ ಅಜ್ಜ ,ತಾತ ಅಂತರ್ಥ. ಅಜ್ಜ ಎನ್ನುವ ಪದ , ಜ್ಞಾನಿ , ಅವಧೂತ ಎನ್ನುವ ಪದಕ್ಕೆ ಪರ್ಯಾಯ ಅರ್ಥವಾಗಿಯೂ ಬಳಕೆಯಿದೆ. ಶಿಶುನಾಳ ಶರೀಫರನ್ನು ತುಂಬ ಜನ ‘ಶರೀಫಜ್ಜಾ’ ಎಂದು ಕರೆಯುವುದನ್ನು ಗಮನಿಸಬಹುದು. ನಾನು ಲಡ್ಡು ಮುತ್ಯಾನ ಹೆಸರನ್ನು ಕೇಳಿದ್ದು ಬಹುಶಃ 2004 – 05 ರಲ್ಲಿ. ಬಾಗಲಕೋಟೆಯ ಸ್ನೇಹಿತನೊಬ್ಬ ‘ ಲಡ್ಡು ಮುತ್ಯಾ ನಮಗ ದೇವರಿದ್ದಂಗಲೇ ‘ ಎಂದಿದ್ದ ಕಾರಣಕ್ಕೆ ಅವರ ಕುರಿತು ನನಗೆ ಗೊತ್ತಾಗಿತ್ತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ದೇಶಕಂಡ ಸಾವಿರಾರು ಸಂತರ, ಅವತಾರಪುರುಷರ ಪೈಕಿ ಒಬ್ಬಾತ ಲಡ್ಡು ಮುತ್ಯಾ. ಸಾಂಸಾರಿಕ ಗೊಂದಲಗಳ ನಂತರ, ಉಟ್ಟುಡುಗೆಯನ್ನೂ ದಾನವಾಗಿ ಕೊಟ್ಟು , ಗೋಣಿಚೀಲವನ್ನುಟ್ಟು ನಡೆದ ಯೋಗಿಯಾತ. ಯಾರೋ ಕೊಟ್ಟರೇ ತಿನ್ನುತ್ತಿದ್ದ, ಎಲ್ಲಿಯೋ ಮಲಗುತ್ತಿದ್ದ ಅಲೆಮಾರಿ ಸಂತ. ಆದರೆ ಹಾಗಿದ್ದವನಲ್ಲೊಂದು ದೈವೀಕ ಶಕ್ತಿಯಿತ್ತು ಎನ್ನುವುದು ಸ್ಥಳೀಯರ ಅನುಭವ. ಆತ ಯಾವುದಾದರೊಂದು ಅಂಗಡಿ ಹೊಕ್ಕು ಅಲ್ಲಿ ತಿಂಡಿಯನ್ನೆತ್ತಿಕೊಳ್ಳುತ್ತಿದ್ದ. ಯಾರಿಗೋ ಬೆನ್ನ ಮೇಲೆ ರಪ್ಪನೇ ಗುದ್ದುತ್ತಿದ್ದ. ಆತನನ್ನೂ ಯಾರೂ ತಡೆಯುತ್ತಿರಲಿಲ್ಲ. ಏಕೆಂದರೆ ಆತ ಕಾಲಿಡುತ್ತಿದ್ದ ಅಂಗಡಿಗಳು ಉದ್ಧಾರವಾಗಿಬಿಡುತ್ತಿದ್ದವು. ಆತನ ಕೈಯಲ್ಲಿ ಏಟು ತಿಂದವನ ಬಡತನ ತೀರಿ ಹೋಗುತ್ತಿತ್ತು. ಮಕ್ಕಳಿಲ್ಲದ ಸಿರಿವಂತ ದಂಪತಿಗಳು ಆತನ ಕೈಯಲ್ಲಿ ಹಣ್ಣೊಂದನ್ನು ಪ್ರಸಾದವಾಗಿ ಸ್ವೀಕರಿಸಿ ಮಕ್ಕಳು ಹೊಂದಿದ್ದರು ಎನ್ನುವ ಪ್ರತೀತಿಯೂ ಇದೆ. ಬಾಗಲಕೋಟೆಯಲ್ಲಿರುವ ನನ್ನ ಮಾವನಹೊಟೆಲ್ಲಿನ ಗೋಡೆಯ ಮೇಲೆ ಇಂದಿಗೂ ಮುತ್ಯಾನ ಪಟವೊಂದು ರಾರಾಜಿಸುತ್ತಿದೆ.
ವಾಸ್ತವಿಕವಾಗಿ ಲಡ್ಡು ಅಲ್ಲ… ಅದು ಲಡ್ಡ ( ಲಡ್ಡ ಅಂದರೆ ಯಾವುದಾದರೂ ಬಟ್ಟೆ ಅಥವಾ ಹಗ್ಗವನ್ನು ಸುರುಳಿಯಾಗಿ ಸುತ್ತಿದಾಗ ಕಾಣುವುದಕ್ಕೆ ಲಡ್ಡ ಎನ್ನುವುದು) ಇವರು ಗೋಣಿ ಚೀಲದ ತಟ್ಟನ್ನು ಉದ್ದವಾಗಿ ಸುರುಳಿ ಸುತ್ತಿ ಸೊಂಟದಲ್ಲಿ ಸುತ್ತಿಕೊಳ್ಳುತ್ತಿದ್ದರು ಹಾಗೂ ಅದೇ ತಟ್ಟು ಅಥವಾ ಒಮ್ಮೊಮ್ಮೆ ಬಟ್ಟೆಯನ್ನು ತಲೆಗೆ ಸುತ್ತಿ ಕೊಳ್ಳುತ್ತಿದ್ದರು. ಇಡೀ ಬಾಗಲಕೋಟೆಯ ಜನರು ಮುತ್ಯಾ ರವರು ಬೆತ್ತಲೆ ಕಂಡರೂ ಪೂಜ್ಯ ಭಾವನೆಯಿಂದ ಅವರೆದುರು ಬಗ್ಗಿ ನಮಸ್ಕರಿಸುತ್ತಿದ್ದರು. ಅವರು ಅಕಸ್ಮಾತ್ ಯಾವುದೇ ಅಂಗಡಿಯಲ್ಲಿ ಹೋದರೂ ಅವರು ಅಂಗಡಿಯಲ್ಲಿ ಪಾದಾರ್ಪಣೆ ಮಾಡಿದರೆ ಸಾಕು ಧನ್ಯರಾದೆವು ಎಂಬ ಭಾವನೆ ಇತ್ತು.