ಇತ್ತೀಚಿನ ದಿನಗಳಲ್ಲಿ ಅದರಲ್ಲಂತೂ ಅಧಿವೇಶನ ಪ್ರಾರಂಭ ಅದ ಬಳಿಕವಂತೂ ಡಿನ್ನರ್ ಮೀಟಿಂಗ್ ಗಳು ಜೋರಾಗಿಯೇ ನಡೆಯುತ್ತಿವೆ. ಇತ್ತೀಚೆಗೆ ಹೊಸ ಶಾಸಕರ ಊಟಕ್ಕೆ ಸೇರಿದ್ದು ದೊಡ್ಡ ಮಟ್ಟಿಗೆ ಚರ್ಚೆಗೆ ಕಾರಣವಾಗಿತ್ತು. ಮೊದಲ ಬಾರಿ ಆಯ್ಕೆಯಾದ ಶಾಸಕರು ಡಿನ್ನರ್ ಮೀಟಿಂಗ್ ಮಾಡಿದ್ರು. ಮೂರೂ ಪಕ್ಷಗಳ ಶಾಸಕರ ಡಿನ್ನರ್ ಸಭೆಯಲ್ಲಿ ವಿಜಯೇಂದ್ರ ಹಾಗೂ ಸಂತೋಷ್ ಲಾಡ್ ಭಾಗಿಯಾಗಿದ್ರು ಅನ್ನೋದು ಎಲ್ಲರ ತಲೆಯಲ್ಲೂ ಉಳ ಬಿಡುವಂತೆ ಮಾಡಿತ್ತು. ಈಗ ಮತ್ತೊಂದು ಔತಣ ಕೂಟ ಸದ್ದು ಮಾಡ್ತಾ ಇದೆ. ಈ ಔತಣ ಕೂಟದಲ್ಲಿ ಇಡೀ ಸರ್ಕಾರವೇ ಭಾಗಿಯಾಗ್ತಾ ಇರೋದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ಹೌದು, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿರುಸಿನ ಬೆಳವಣಿಗೆಗಳು ನಿತ್ಯವೂ ನಡೆಯುತ್ತಿವೆ. ಅದರಲ್ಲೂ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳ ನಡುವೆ ಶಾಸಕರು, ಸಚಿವರಿಗೆ ಡಿ.ಕೆ ಶಿವಕುಮಾರ್, ಡಿನ್ನರ್ ಪಾರ್ಟಿ ಆಯೋಜನೆಗಳು ಹೊಸ ಹೊಸ ಚರ್ಚೆಗಳನ್ನ ಹುಟ್ಟು ಹಾಕ್ತಿವೆ. ಈ ಮಧ್ಯೆ ಮತ್ತೊಂದು ಎನ್ನುವಂತೆ ಡಿಕೆ ಶಿವಕುಮಾರ್ ಕೂಡ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಭರ್ಜರಿ ಪಾರ್ಟಿಗೆ ವ್ಯವಸ್ಥೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲಾ ಸಚಿವರನ್ನ ಪರ್ಸನಲ್ ಆಗಿ ಇನ್ವೈಟ್ ಮಾಡಿದ್ದಾರೆ..

ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಗದ್ದುಗೆ ಗುದ್ದಾಟ ಜೋರಾಗಿದೆ. ಬಜೆಟ್ ಅಧಿವೇಶನದಲ್ಲೂ ಇದು ಸೌಂಡ್ ಮಾಡ್ತಿದೆ. ಐದು ವರ್ಷ ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಇರ್ತೀನಿ ಅಂತಾ ಸದನದಲ್ಲೇ ಸಿದ್ದರಾಮಯ್ಯ ಹೇಳಿದ್ರು. ಈ ಸಂದೇಶ ಕೇವಲ ವಿಪಕ್ಷಗಳಿಗೆ ಅಲ್ಲ. ವಿಪಕ್ಷಗಳಿಗೆ ಕೌಂಟರ್ ಕೊಡೋ ನೆಪದಲ್ಲಿ ಡಿಕೆಶಿಗೂ ಸಂದೇಶ ರವಾನೆ ಮಾಡಿದಂಗೆ ಇತ್ತು. ಇದೆಲ್ಲದರ ಮಧ್ಯೆ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ ಅನ್ನೋದನ್ನ ತೋರಿಸೋಕೆ ಆಗ್ಗಾಗ್ಗೆ ಶಕ್ತಿ ಪ್ರದರ್ಶನಕ್ಕೂ ಮುಂದಾಗ್ತಾ ಇದ್ದಾರೆ ನಾಯಕರು.
ಇದೇ ಹೊತ್ತಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಶಾಸಕರಿಗೆ ಭರ್ಜರಿ ಡಿನ್ನರ್ ಪಾರ್ಟಿ ಏರ್ಪಾಡು ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸಿಎಂ ಸೇರಿದಂತೆ ಎಲ್ಲಾ ಸಚಿವರು, ಎಲ್ಲಾ ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಸಂಜೆ ಏಳು ಮೂವತ್ತಕ್ಕೆ ಪಾರ್ಟಿ ಶುರುವಾಗಲಿದ್ದು, ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಪಾರ್ಟಿ ಕೊಡ್ತಾ ಇರೋದು ಐದು ವರ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಧಿಕಾರ ಪೂರೈಸಿದ್ದಕ್ಕೋ ಅಥವಾ ಕೆಪಿಸಿಸಿ ಸ್ಥಾನ ಬಿಡುವ ಮುನ್ಸೂಚನೆಯೋ ಗೊತ್ತಿಲ್ಲ.
ಹೌದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಅಂತಾ ಸಿಎಂ ಆಪ್ತರು ಪದೇ ಪದೇ ಹೈಕಮಾಂಡ್ ಮೇಲೆ ಒತ್ತಡ ಏರುತ್ತಿದ್ದಾರೆ. ಬದಲಾವಣೆ ಚರ್ಚೆ ನಡುವೆಯೇ ಡಿ ಕೆ ಶಿವಕುಮಾರ್, ಔತಣಕೂಟ ಆಯೋಜನೆ ಮಾಡಿರೋದ್ರಿಂದ ಭಾರಿ ಮಹತ್ವ ಪಡೆದುಕೊಂಡಿದೆ. ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದನ್ನೇ ನೆಪವಾಗಿಟ್ಟುಕೊಂಡು ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ ಎನ್ನಲಾಗ್ತಿದೆ. ಪ್ರತೀ ಅಧಿವೇಶನ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಡಿನ್ನರ್ ಆಯೋಜನೆ ಮಾಡುತ್ತಿದ್ರು. ಆದ್ರೆ ಇವತ್ತಿನ ಪಾರ್ಟಿ ಬೇರೆ ಲೆವೆಲ್ ಗೆ ಇದೆ ಎನ್ನಲಾಗ್ತಿದೆ..

ಇತ್ತ ಪರೋಕ್ಷವಾಗಿಯೇ ರಾಜಕೀಯ ವಿರೋಧಿಗಳ ರೀತಿ ವರ್ತನೆ ಮಾಡುವ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನೇರಾ ನೇರಾ ಎಂದೂ ಮತನಾಡಿಲ್ಲ. ಈಗ ಡಿಕೆ ಡಿನ್ನರ್ ಪಾರ್ಟಿಗೆ ಹೋಗೋದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು. ನಮ್ಮ ಅಧ್ಯಕ್ಷರು ಕರೆದ ಮೇಲೆ ಹೋಗಲೇಬೇಕಲ್ವಾ ಅಂತ ಹೇಳಿದ್ದಾರೆ. ಇದೆಲ್ಲವೂ ಕೂಡ ಹಲವಾರು ಚರ್ಚೆಗೆ ಕಾರಣವಾಗಿದೆ.
ಇನ್ನು ದಿಕ್ಕುತಪ್ಪಿದ್ದ ಪಕ್ಷ ಸಂಘಟನೆಯನ್ನ ಡಿಕೆ ಶಿವಕುಮಾರ್ ಟ್ರ್ಯಾಕ್ ಗೆ ತಂದಿದ್ರು. ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತರಲು ಪ್ರಮುಖ ಪಾತ್ರ ವಹಿಸಿದ್ರು. ಈಗಲೂ ಕೂಡ ಅದೇ ಉತ್ಸಾಹದಲ್ಲಿ ಸಂಘಟನೆಯಲ್ಲಿ ಡಿಕೆಶಿ ತೊಡಗಿದ್ದಾರೆ. ಮಾರ್ಚ್ 15 ರಂದು ಕೆಪಿಸಿಸಿ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರುಗಳ, ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆ ಕರೆದಿದ್ದಾರೆ. ಈ ಮೂಲಕ ಶಾಸಕರ ವಿಶ್ವಾಸದ ಜೊತೆಗೆ, ಪಕ್ಷದ ಪ್ರಮುಖರ ವಿಶ್ವಾಸ ಹೆಚ್ಚಿಸಿಕೊಳ್ಳಲು ಡಿ ಕೆ ಶಿವಕಿಮಾರ್ ತಂತ್ರ ಹೂಡಿದ್ದಾರೆ. ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿಯೇ ಮುಂದುವರೆಯಲು ಡಿಕೆಶಿ ತೀರ್ಮಾನಿಸಿದ್ದಾರೆ. ಅಧ್ಯಕ್ಷ ಸ್ಥಾನವನ್ನ ಬಿಟ್ಟುಕೊಡದೇ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು, ಹೈಕಮಾಂಡ್ ನಾಯಕರನ್ನ ಎಚ್ಚರಿಸುತ್ತಿದ್ದಾರೆ ಎನ್ನಲಾಗತ್ತಿದೆ.
ಇದೆಲ್ಲದರ ಮಧ್ಯೆ ತಮ್ಮ ಸರ್ಕಾರದ ವಿರುದ್ದವೇ ಶಾಸಕರು ಅಸಮಾಧಾನ ಹೊರ ಹಾಕ್ತಾ ಇದ್ದಾರೆ. ಹೊಸ ಶಾಸಕರ ಕ್ಷೇತ್ರಗಳಿಗೆ ಅನುದಾನ ಸಿಗ್ತಿಲ್ಲ. ಸದನದಲ್ಲೂ ಹೊಸ ಶಾಸಕರಿಗೆ ಮಾತನಾಡಲು ಅವಕಾಶ ಸಿಗ್ತಿಲ್ಲ ಅಂತಾ ಸಭೆಯಲ್ಲಿ ಅಸಮಧಾನ ಹೊರಹಾಕಿದ್ರು. ಗ್ಯಾರಂಟಿ ಅನುಷ್ಟಾನ ಸಮಿತಿಳಿಗೆ ಕಾರ್ಯಕರ್ತರು, ಮುಖಂಡರ ನೇಮಕಕ್ಕೂ ಕೆಲ ಕೈ ಶಾಸಕರಿಂದಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕೆಶಿ ಮುಂದಾದಂತೆ ಕಾಣ್ತಿದೆ.