ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಇಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನಂಜಯ್ ಮದುವೆ ಚರ್ಚೆ ಚಿತ್ರರಂಗದಲ್ಲಿ ದೊಡ್ಡ ಸಂಭ್ರಮ ಮೂಡಿಸಿದೆ. ಡಾಲಿ-ಧನ್ಯತಾ ಮದುವೆಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಧ್ರುವಾ ಸರ್ಜಾ, ಭಾರತಿ ವಿಷ್ಣುವರ್ಧನ್, ಉಮಾಶ್ರೀ, ಗಿರಿಜಾ ಲೋಕೇಶ್, ಇಂದ್ರಜಿತ್ ಲಂಕೇಶ್, ರಮ್ಯಾ ದೊಡ್ಡಣ್ಣ, ಸಪ್ತಮಿ ಗೌಡ, ಅಮೂಲ್ಯ, ಬಿಗ್ಬಾಸ್ ಖ್ಯಾತಿಯ ಪ್ರಥಮ್, ಅನುಶ್ರೀ, ದಿವ್ಯಾ ಉರುಡುಗ, ಅರವಿಂದ್ ಸೇರಿದಂತೆ ಚಿತ್ರರಂಗ-ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿ ನವ ವಧು ವರರಿಗೆ ಶುಭ ಕೋರಿದ್ದಾರೆ. ಡಾಲಿ ಆಪ್ತ ಸ್ನೇಹಿತ ವಸಿಷ್ಠ ಸಿಂಹ ಕೂಡಾ ಮದುವೆಗೆ ಬಂದು ಗೆಳೆಯನಿಗೆ ಚಿನ್ನದ ಸರ ಗಿಫ್ಟ್ ಮಾಡಿದ್ದಾರೆ.
ಸೆಲೆಬ್ರಿಟಿಗಳು ಮಾತ್ರವಲ್ಲದೆ ಧನಂಜಯ್ ತಮ್ಮ ಮದುವೆಗೆ ಅಭಿಮಾನಿಗಳನ್ನು ಕೂಡಾ ಆಹ್ವಾನಿಸಿದ್ದಾರೆ. ಮೈಸೂರಿನ ದೊಡ್ಡಕೆರೆ ಮೈದಾನದ ಆವರಣದಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ಹಾಗೂ ತಂಡ ಹಾಕಿದ್ದ ಬೃಹತ್ ಸೆಟ್ನಲ್ಲಿ ಶನಿವಾರ ಬೆಳಗಿನಿಂದಲೇ ಮದುವೆ ಶಾಸ್ತ್ರ ಆರಂಭವಾಗಿತ್ತು. ಸಂಜೆ ನಡೆದ ಆರತಕ್ಷತೆಗೆ ಕೂಡಾ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಭಾನುವಾರ ಬೆಳಗ್ಗೆ ಧನಂಜಯ್, ತಾವು ಮೆಚ್ಚಿದ ಹುಡುಗಿ ಧನ್ಯತಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಮದುವೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧನಂಜಯ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳು ಮದುವೆಗೆ ಬಂದು ಆಶೀರ್ವದಿಸಿದ್ದು ಖುಷಿ ಎನಿಸಿತು. ಎಲ್ಲಿ ತಳ್ಳಾಟ ಆಗಿ ಏನಾದರೂ ಹೆಚ್ಚು ಕಡಿಮೆ ಆಗುವುದೋ ಎಂದು ಹೆದರಿದ್ದೆ, ಆದರೆ ಎಲ್ಲಾ ಸುಸೂತ್ರವಾಗಿ ನಡೆಯಿತು ಎಂದು ಖುಷಿ ಪಟ್ಟರು. ಧನ್ಯತಾ ಹಾಗೂ ಡಾಲಿ ಇಬ್ಬರೂ ಅಭಿಮಾನಿಗಳಿಗೆ ನೆಲದ ಮುಂದೆ ಬಿದ್ದು ನಮಸ್ಕರಿಸಿದರು.
ಇಷ್ಟೆಲ್ಲಾ ಸಂಭ್ರಮದ ನಡುವೆ ನಟ ಧನಂಜಯ್ ಮದುವೆ ಚರ್ಚೆ ಭಾರೀ ಟ್ರೋಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮದುವೆ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಡಾಲಿ ಯಾವಾಗಲೂ ಬಡವರ ಮಕ್ಕಳು ಬೆಳೆಯಬೇಕು ಎನ್ನುತ್ತಿದ್ದರು. ಆದರೆ ಈಗ ಇಷ್ಟು ಅದ್ಧೂರಿಯಾಗಿ ಮದುವೆ ಆಯೋಜಿಸುವ ಅವಶ್ಯಕತೆ ಏನಿತ್ತು? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮೊದಲೆಲ್ಲಾ ಸರಳ ಮಂತ್ರ ಮಾಂಗಲ್ಯದ ಮಾತು ಮಾಡುತ್ತಿದ್ದವರು ಈಗ ಏಕೆ ಭಾರಿ ಖರ್ಚು ಮಾಡಿ ಮದುವೆ ಆಯೋಜಿಸಿದರು? ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.
ಇದೇ ವೇಳೆ ಮದುವೆ ಶಾಸ್ತ್ರದ ವೇಳೆ ಪತ್ನಿ ಧನ್ಯತಾ, ಧನಂಜಯ್ ಕಾಲಿಗೆ ನಮಸ್ಕರಿಸುತ್ತಿರುವ ಫೋಟೋ ವೈರಲ್ ಆಗಿದ್ದು, ಈ ಫೋಟೋ ನೋಡಿದವರು “ಬುದ್ಧ, ಬಸವನ ಆದರ್ಶದ ಬಗ್ಗೆ ಮಾತನಾಡುವ ಧನಂಜಯ್ ಪತ್ನಿಯ ನಮಸ್ಕಾರವನ್ನು ತಡೆಯಲಿಲ್ಲ” ಎಂದು ಕೇಳುತ್ತಿದ್ದಾರೆ.
ಒಂದು ಕಡೆ ಜನರು ಧನಂಜಯ್ ಅವರನ್ನು ಟ್ರೋಲ್ ಮಾಡುತ್ತಿದ್ದರೆ ಉಳಿದವರು, ಬಡವರ ಮಕ್ಕಳು ಬಡವರಾಗೇ ಉಳಿಯಬೇಕಾ? ಅದ್ಧೂರಿಯಾಗಿ ಮದುವೆ ಆಗಬಾರದಾ? ಎಂದು ಟ್ರೋಲ್ ಮಾಡುವವರನ್ನು ಪ್ರಶ್ನಿಸುತ್ತಿದ್ದಾರೆ. ನಾನು ರಿಜಿಸ್ಟರ್ ಮದುವೆ ಆಗಬೇಕು ಎಂದುಕೊಂಡಿದ್ದೆ, ಆದರೆ ಮನೆಯವರು, ಸಂಬಂಧಿಕರ ಬಲವಂತದಿಂದ ಅದ್ದೂರಿ ಮದುವೆ ಆಗಬೇಕಿತ್ತು. ಜೊತೆಗೆ ನಾನು ಇಷ್ಟು ಬೆಳೆಯಲು ಕಾರಣ ನನ್ನ ಅಭಿಮಾನಿಗಳು, ಅವರನ್ನೂ ಕೂಡಾ ಮದುವೆಗೆ ಆಹ್ವಾನಿಸಬೇಕಿತ್ತು. ಆದ್ದರಿಂದ ಮದುವೆ ಗ್ರ್ಯಾಂಡ್ ಆಗಿ ಆಗಬೇಕಿತ್ತು ಎಂದು ಸ್ವತ: ಧನಂಜಯ್ ಹೇಳಿದ್ದಾರೆ. ದುಡ್ಡು ಅವರದ್ದು, ಅವರು ಹೇಗಾದರೂ ಮದುವೆ ಆಗುತ್ತಾರೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಧನಂಜಯ ಅಭಿಮಾನಿಗಳು , ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.
ಡಾ ವಿಷ್ಣುವರ್ಧನ್ ಅವರ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಕೂಡಾ ಪೋಸ್ಟ್ ಒಂದನ್ನು ಹಂಚಿಕೊಂಡು ಟ್ರೋಲ್ ಮಾಡುವವರನ್ನು ಪ್ರಶ್ನಿಸಿದ್ದಾರೆ. ಬಡವರ ಮಕ್ಕಳು ಖರ್ಚು ಮಾಡಬಾರದಾ? ದುಡಿದಿದ್ದೆಲ್ಲವನ್ನೂ ಬ್ಯಾಂಕ್ ಅಕೌಂಟಿನಲ್ಲೋ, ಬ್ಲಾಕ್ ಮನಿಯಾಗಿಸಿಕೊಂಡೋ ಕೂತಿರಬೇಕಿತ್ತಾ? ಅಯ್ಯೋ ನಾನು ಬಡವನಾಗಿದ್ದೆ. ಆದ್ದರಿಂದ ನಾನು ಶ್ರೀಮಂತನಾದ್ರೂ ಶ್ರೀಮಂತನಂತೆ ವರ್ತಿಸಬಾರದು. ಬಡವನಾಗಿಯೇ ಬದುಕಬೇಕು ಅಂತ ಯೋಚಿಸಬೇಕಿತ್ತಾ? ಅಷ್ಟಕ್ಕೂ ಡಾಲಿ ದುಡಿದ ಹಣ, ಎಲ್ಲಿಗೆ ಹೋಗ್ತಿದೆ? ಅದಕ್ಕೂ ಮೊದಲು ಇದೊಂದು ವಿಷ್ಯ ಓದಿಬಿಡಿ. ಕೇಂದ್ರ ಸರ್ಕಾರ ಪ್ರತಿ 4 ವರ್ಷಕ್ಕೊಮ್ಮೆ ತನ್ನ ನೌಕರರಿಗೆ ಎಲ್ಟಿಸಿ ಸ್ಕೀಮ್ ಒದಗಿಸುತ್ತೆ. ಅದರ ಅಡಿಯಲ್ಲಿ ನೌಕರ ಮತ್ತವರ ಕುಟುಂಬ ಪ್ರವಾಸ ಹೋಗಿ ಬರಲು ಆಗುವ ಟಿಕೆಟ್ ಖರ್ಚನ್ನು ಕೇಂದ್ರ ಸರ್ಕಾರವೇ ಭರಿಸುತ್ತೆ. ಸಂಬಳ ಕೊಟ್ಮೇಲೆ, ಇದೆಲ್ಲಾ ಯಾಕೆ ಕೊಡಬೇಕು? ಸರ್ಕಾರಕ್ಕೆ ತಲೆ ಕೆಟ್ಟಿದೆಯಾ? ಇಲ್ಲ, ಸರ್ಕಾರ ಹೇಗೆ ಯೋಚನೆ ಮಾಡುತ್ತೆ ಅಂದ್ರೆ, ನೀವು ನಾಲ್ಕು ವರ್ಷ ಕೂಡಿಟ್ಟ ಹಣವನ್ನು ಬೇರೊಂದು ಕಡೆಗೆ ಪ್ರವಾಸ ಮಾಡಿ ಖರ್ಚು ಮಾಡಿ ಅನ್ನುತ್ತೆ. ಆ ನಿಮ್ಮ ಕೂಡಿಟ್ಟ ಹಣ ಆ ದೂರದೂರಿನ ಒಬ್ಬ ಟ್ಯಾಕ್ಸಿಯವನಿಗೆ, ಲಾಡ್ಜ್ ಅವನಿಗೆ, ಗೈಡಿಗೆ, ಬಟ್ಟೆ ಅಂಗಡಿಯವನಿಗೆ, ಅವರಿಗೆ, ಇವರಿಗೆ ಸೇರಲಿ ಅನ್ನುತ್ತೆ. ಅಂದರೆ ದೇಶದ ಪ್ರತಿ ಪ್ರಜೆಗೂ ಎಷ್ಟೋ ಅಷ್ಟು ಆದಾಯ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ.
ಇದು ಧನಂಜಯ್ ಅವರ ಮದುವೆಯಲ್ಲಿಯೂ ಆಗಿದೆ. ಪೆಂಡಾಲ್ ಹಾಕೋರಿಗೆ, ಕಸ ಗುಡಿಸೋರಿಗೆ, ಊಟ ಬಡಿಸೋರಿಗೆ, ಹೂ ಮಾರೋರಿಗೆ, ತರಕಾರಿಗೆ, ದವಸ ಧಾನ್ಯಕ್ಕೆ, ಪ್ರಿಂಟಿಂಗ್ ಪ್ರೆಸ್, ಫೋಟೋ, ವಿಡಿಯೋ, ಬೌನ್ಸರ್, ಟ್ರಾವೆಲ್ಸ್, ಹೋಟೆಲ್ಗಳು ಹೀಗೆ ಧನಂಜಯ್ ದುಡಿದ ಹಣ ನೂರಾರು ಬಡವರಿಗೆ ತಲುಪಿದೆ. ಈ ಎಲ್ಲದರ ಗುತ್ತಿಗೆ ಪಡೆದವರ ಕುಟುಂಬಗಳು ಚೆನ್ನಾಗಿರುತ್ತವೆ. ಅಂದ್ರೆ ಬೇಸರವೇಕೆ? ಬಡವನ ಮಗ ಬೆಳೆದ ಮತ್ತು ರಾಜ್ಯವೇ ನೋಡುವಂತೆ ಮದುವೆಯಾದ ಅನ್ನೋದು ಬೇಸರಕ್ಕೆ ಕಾರಣವಾಗಬಾರದು. ಬಡವರ ಮಕ್ಕಳಿಗೆ ಮಾದರಿಯಾಗಬೇಕು. ಆದ್ರೆ ಡಾಲಿ ತರ ಮದ್ವೆಯಾಗ್ತೀನಿ ಅಂತ ಹಠತೊಟ್ಟು ಸಾಧಿಸಬೇಕು.
ಬಡವರ ಮಕ್ಕಳು ಡಾಲಿ ತರ ಆಗಲಿ. ಡಾಲಿ ಅವರ ವೈವಾಹಿಕ ಜೀವನಕ್ಕೆ ಶುಭಾಶಯಗಳು ಎಂದು ವೀರಕಪುತ್ರ ಶ್ರೀನಿವಾಸ್ ಡಾಲಿ ಪರ ಮಾತನಾಡಿದ್ದಾರೆ.