ಕನ್ನಡ ಚಿತ್ರರಂಗವೊಂದು ಸಾಗರವಿದ್ದಂತೆ. ಇಲ್ಲಿ ಬಿಡುವಿಲ್ಲದಂತೆ ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ.ಅದರಲ್ಲೂ ಕರಾವಳಿಯ ಹತ್ತಾರು ಪ್ರತಿಭೆಗಳು ಸೇರಿಕೊಂಡು ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಹವಾ ಸೃಷ್ಟಿಸುತ್ತಿವೆ. ಈವರೆಗೆ ಬಿಡುಗಡೆಯಾದ ಕಾಂತಾರ, ಉಳಿದವರು ಕಂಡಂತೆ, ಗರುಡ ಗಮನ ಸಿನಿಮಾಗಳು ದೇಶದಾದ್ಯಂತ ಜನರ ಮನ ಗೆದ್ದಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಇದೀಗ ಕರಾವಳಿಯ ಹೊಸ ಪ್ರತಿಭೆಗಳು ಸೇರಿಕೊಂಡು ಒಂದೊಳ್ಳೆ ಕಥೆಯ ಮೂಲಕ “ದಾಮಾಯಣ “ಎಂಬ ಸಿನಿಮಾವನ್ನು ತಂದು ಜನರ ಮನಸ್ಸನ್ನು ಗೆದ್ದಿದೆ.

ಹೌದು ಇದು ಅಪ್ಪಟ ತುಳುನಾಡಿನ ಒಬ್ಬ ಮುಗ್ದ, ಪೆದ್ದು ಹುಡುಗನ ಕಥೆಯಾಗಿದ್ದು, ಆತ ಪಟ್ಟಣದಲ್ಲಿ ಯಾವೆಲ್ಲಾ ರೀತಿಯ ಕಷ್ಟಗಳನ್ನು ಎದುರಿಸುತ್ತಾನೆ ಹಾಗೂ ಹೇಗೆ ತನ್ನ ಸ್ನೇಹಿತನಿಂದಲೇ ಮೋಸ ಹೋಗುತ್ತಾನೆ ಎಂಬುದರ ಸಾಕ್ಶ್ಯ ಚಿತ್ರವನ್ನು ಜನರ ಮುಂದಿಡುವ ಪ್ರಯತ್ನವನ್ನು ಮಾಡಿದ್ದಾರೆ. ಈ ಸಿನಿಮಾವನ್ನು ಶ್ರೀಮುಖ ಅವರು ನಿರ್ದೇಶಿಸಿದ್ದಾರೆ ಹಾಗೂ ಇವರೇ ನಾಯಕನ ಪಾತ್ರವನ್ನೂ ಸಹ ನಿಭಾಯಿಸಿದ್ದಾರೆ. ಇದೊಂದು ಅರ್ಥಪೂರ್ಣವಾದ ಸಿನಿಮಾವಾಗಿದ್ದು, ಇಂದಿನ ಪೀಳಿಗೆಯ ಜನರಿಗೆ ತುಂಬಾ ಹತ್ತಿರವಾಗಿದೆ.
ಈ ಸಿನಿಮಾ ಜುಲೈ 14ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಈ ಸಿನಿಮಾದ ಶೂಟಿಂಗ್ 4 ವರ್ಷಗಳ ಹಿಂದೆಯೇ ನಡೆದಿದೆ. ಈ ಸಿನಿಮಾವನ್ನು ನೋಡಿದರೆ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ ಎಂದು ತಿಳಿಯುವುದೇ ಇಲ್ಲ. ಏಕೆಂದರೆ ಎಲ್ಲರೂ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಅಷ್ಟೆ ಅಲ್ಲದೆ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಬಳಸದೆ ಒಳ್ಳೆಯ ಮಾತಿನ ಮೂಲಕವೇ ಕಾಮಿಡಿಯನ್ನು ಮಾಡಿದ್ದಾರೆ.
ಇದು ಒಂದು ಮನರಂಜನಾತ್ಮಕ ಸಿನಿಮಾ ಜೊತೆಗೆ ಒಂದೊಳ್ಳೆ ಸಂದೇಶವನ್ನು ಸಾರುವ ಸಿನಿಮಾವೂ ಆಗಿದೆ. ಇದು ಟ್ರೈಲರ್ ಮೂಲಕವೇ ತಿಳಿದು ಬಂದಿದೆ. ಇದರ ಪ್ರೀಮಿಯರ್ ಶೋ ಮಂಗಳವಾರ ನಡೆದಿದೆ. ದಾಮಾಯಣ ಸಿನಿಮಾವನ್ನು ವೀಕ್ಷಿಸಲು ಕರಾವಳಿಯ ಜನರಂತೂ ತುದಿಗಾಲಿನಲ್ಲಿ ನಿಂತಿದ್ದಾರೆ. ದಾಮೋದರ ಈ ಸಿನಿಮಾದ ನಾಯಕ. ಬಿ. ಎ. ಫೇಲಾದ ದಾಮೋದರ ಮನೆಯವರ ಮೇಲೆ ಸವಾಲು ಮಾಡಿ ಪಟ್ಟಣದಲ್ಲಿ ಹಣ ಸಂಪಾದಿಸಿಕೊಂಡು ಬರುವುದಾಗಿ ತೆರಳುತ್ತಾನೆ.
ಮನೆಯವರಿಗೆ ಮಾಡಿದ ಸವಾಲನ್ನು ಹೇಗಾದರೂ ಮಾಡಿ ಗೆಲ್ಲಬೇಕು ಎಂದು ಛಲ ತೊಟ್ಟು ಪಟ್ಟಣಕ್ಕೆ ಸಾಗುತ್ತಾನೆ. ಪಟ್ಟಣವು ಹಣ ಸಂಪಾದಿಸಲು ಸುಲಭದ ದಾರಿ ಎಂದುಕೊಂಡಿದ್ದ ದಾಮೋದರನಿಗೆ ಅದು ಸುಳ್ಳೆಂದು ತಿಳಿಯುತ್ತದೆ.ಹಣ ಸಂಪಾದಿಸಲು ಹೋಗಿ ಇದ್ದ ಹಣವನ್ನೂ ಕಳೆದುಕೊಳ್ಳುತ್ತಾನೆ. ತಾನು ನಂಬಿದ ತನ್ನ ಆಪ್ತನಿಂದಲೇ ಮೋಸ ಹೋಗುತ್ತಾನೆ ದಡ್ಡ ದಾಮೋದರ.ಇವನಿಗೆ ಮೋಸ ಆಗಿದೆ ಎಂದು ತಿಳಿಯದೆ ಮನೆಯವರೂ ಇವನನ್ನು ದ್ವೇಷಿಸುತ್ತಾರೆ.
ಆ ಮೋಸದಿಂದ ಹೇಗೆ ದಾಮೋದರ ಹೊರಗೆ ಬರುತ್ತಾನೆ ಎಂಬುವುದು ಈ ಸಿನಿಮಾದ ಕಥಾಹಂದರವಾಗಿದೆ. ಪ್ರಸ್ತುತ ಸಮಾಜದಲ್ಲಿ ಮುಗ್ದ ಜನರು ಯಾವ ರೀತಿ ಬೇರೆಯವರಿಂದ ಮೋಸ ಹೋಗುತ್ತಾರೆ ಹಾಗೂ ಅದರಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ಈ ಸಿನಿಮಾ ತಿಳಿಸಿಕೊಟ್ಟಿದೆ. ಹೊಸ ಪ್ರತಿಭೆಗಳೂ ಸಹ ಸಿನಿಮಾವನ್ನು ನಿರ್ದೇಶಿಸಿ, ಆಕ್ಟಿಂಗ್ ಮಾಡಬಹುದು ಎಂದು ನಿರ್ದೇಶಕ ಶ್ರೀಮುಖ ತಿಳಿಸಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವ ಸಿನಿಮಾವಾಗಿದೆ.