ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ ಸಿಹಿತಿಂಡಿಗಳ ಜೊತೆಗೆ 2.5 ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳ ತನಕ ನಗದು ಹಣ ಹಂಚಿಕೆಯಾಗಿರುವ ಆರೋಪ ಕೇಳಿ ಬಂದಿದ್ದು ರಾಜಕೀಯ ಮತ್ತು ಮಾಧ್ಯಮ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ.
ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ವರದಿಗಾರರಿಗೂ ಈ ಗಿಫ್ಟ್ ಬಾಕ್ಸ್ ಕೊಡಲಾಗಿದ್ದು, ಕೂಡಲೇ ಈ ವರದಿಗಾರರು ಹಣವನ್ನು ಹಿಂದಿರುಗಿಸಿ ತಮ್ಮ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ಈ ವಿಷಯವನ್ನು ತಂದಿದ್ದರು.
ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ನೆಪದಲ್ಲಿ ತಲಾ 2.5 ಲಕ್ಷ ರುಪಾಯಿ ನಗದು ನೀಡಿದ ಕ್ರಮವನ್ನು ಖಂಡಿಸಿ ಕನ್ನಡದ ಪ್ರತಿಷ್ಠಿತ ಪತ್ರಿಕಾ ಸಂಸ್ಥೆಯೊಂದು ಸಿಎಂ ಕಚೇರಿಗೆ ಪತ್ರ ಬರೆದಿದ್ದು, ಅಸಮಾಧಾನ ವ್ಯಕ್ತಪಡಿಸಿದೆ.
ಈ ಎಲ್ಲ ಬೆಳವಣಿಗೆಗಳ ಕುರಿತು ಹಿರಿಯ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಸರಿಯಾದ ತನಿಖೆಯಾಗಲಿ, ಭ್ರಷ್ಟ ಪತ್ರಕರ್ತರಿಂದಾಗಿ ಪ್ರಾಮಾಣಿಕ ಪತ್ರಕರ್ತರೂ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.