ನೀವು ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಬಯಸುತ್ತಿದ್ದೀರಾ…? ಹಾಗಾದ್ರೆ, ನಿಮಗೆ ಇಲ್ಲೊಂದು ಸುವರ್ಣಾವಕಾಶವಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ವಿವಿಧ ಟ್ರೇಡ್ಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಕೇವಲ 10ನೇ ತರಗತಿ ಪಾಸಾಗಿದ್ರೆ ಸಾಕು ಈ ಹುದ್ದೆಗೆ ನೀವೂ ಅರ್ಜಿ ಸಲ್ಲಿಸಬಹುದು. ಯಾವ ಹುದ್ದೆ…? ಹುದ್ದೆಯ ಮಾನದಂಡಗಳೇನು…? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ಒಮ್ಮೆ ನೋಡಿ….
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾನ್ಸೆಟೇಬಲ್ ಟ್ರೇಡ್ಸ್ಮನ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ದೇಶದ ಪ್ಯಾರಾಮಿಲಿಟರಿ ಪಡೆಗೆ ಸೇರಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ.
2025ನೇ ಸಾಲಿನ CISF ಕಾನ್ಸ್ಟೇಬಲ್ ಟ್ರೇಡ್ಸ್ಮನ್ನ 1161 ಹುದ್ದೆಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ. SSLC ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಸಂಬಂಧಿತ ವ್ಯಾಪಾರದಲ್ಲಿ ಅನುಭವ ಇರುವವರು ಅಥವಾ ಐಟಿಐ ಪ್ರಮಾಣಪತ್ರ ಹೊಂದಿರುವವರು ಅರ್ಜಿ ಸಲ್ಲಿಕೆಗೆ ಅರ್ಹರು. ಕೈ ತುಂಬ ಸಂಬಳ ಹಾಗೂ ವಿವಿಧ ಸವಲತ್ತಿನ ಸರ್ಕಾರಿ ಕೆಲಸ ಪಡೆಯಬಹುದಾಗಿದೆ.

ಏಪ್ರಿಲ್ 3 ಕೊನೇ ದಿನ:
ಮಾರ್ಚ್ 5ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 3ರೊಳಗೆ ಅರ್ಜಿ ತುಂಬಬೇಕಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಇತರೆ ಯಾವುದೇ ಮಾರ್ಗದಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಎಲ್ಲೆಲ್ಲಿಗೆ ನೇಮಕಾತಿ…?
ಪ್ಯಾರಾಮಿಲಿಟರಿ ಪಡೆಯಾದ ಸಿಐಎಸ್ಎಫ್ ದೇಶದ ವಿವಿಧ ವಿಭಾಗಗಳಲ್ಲಿ ರಕ್ಷಣೆ ನೀಡುವ ಹೊಣೆ ಹೊತ್ತಿದೆ. ವಿಮಾನ ನಿಲ್ದಾಣಗಳು, ಬದರುಗಳು ಹಾಗೂ ಕೈಗಾರಿಕಾ ಘಟಕಗಳಲ್ಲಿ ಮೂಲಸೌಕರ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಿಐಎಸ್ಎಫ್ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ದೇಶದ ಯಾವುದೇ ಭಾಗದಲ್ಲಿ ನೇಮಕಗೊಂಡರು ಸಮರ್ಥವಾಗಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ ಹೀಗಿರಬೇಕು:
ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಂದರೆ 10ನೇ ತರಗತಿಯನ್ನು ಪಾಸ್ ಮಾಡಿಕೊಂಡಿರಬೇಕಾಗಿರುವುದು ಕಡ್ಡಾಯವಾಗಿದೆ. ಕೌಶಲ್ಯ ಆಧಾರಿತ ಹುದ್ದೆಗಳು ಅಂದರೆ ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಪ್ಲಭರ್ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಹೊಂದಿರುವ ವಿಶ್ವಿವಿದ್ಯಾಲಯ ಅಥವಾ ಕಾಲೇಜಿನಿಂದ ITI ಪೂರ್ಣಗೊಳಿಸಿರುವುದು ಕಡ್ಡಾಯವಲ್ಲದಿದ್ದರೂ, ITI ಮಾಡಿಕೊಂಡಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ ಮಾನದಂಡ:
ಸರ್ಕಾರಿ ಕೆಲಸವಾಗಿದ್ದು SSLC ಪೂರ್ಣಗೊಳಿಸಿರುವ ಯಾರೂ ಬೇಕಾದರು ಅರ್ಜಿ ಸಲ್ಲಿಸಬಹುದು ಎಂದಿಲ್ಲ. ಕನಿಷ್ಠ 18 ವರ್ಷ ತುಂಬಿರುವ ಹಾಗೂ ಗರಿಷ್ಠ 23 ವರ್ಷ ಮೀರದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಇನ್ನೂ ಸರ್ಕಾರಿ ನಿಯಮದನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗದವರು, ಅಂಗವಿಕಲ ಅಭ್ಯರ್ಥಿಗಳು ಹಾಗೂ ಸೈನಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆರಲಿದೆ….?
ದೈಹಿಕ ದಕ್ಷತೆ ಪರೀಕ್ಷೆ(PET) ಹಾಗೂ ದೈಹಿಕ ಗುಣಮಟ್ಟ ಪರೀಕ್ಷೆ(PST) ಮೂಲಕ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹಾಗೆಯೇ, ಲಿಖಿತ ಪರೀಕ್ಷೆಯು ಇರಲಿದ್ದು, ಒಟ್ಟು 100 ಅಂಕಕ್ಕೆ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿರುತ್ತದೆ. ಇನ್ನೂ ವ್ಯಾಪಾರ ಪರೀಕ್ಷೆಯೂ ಇರಲಿದ್ದು, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿರುವ ಹುದ್ದೆಗೆ ಸಂಬಂಧಿಸಿ ಮೂಲಭೂತ ಕೌಶಲ್ಯವನ್ನು ಇಲ್ಲಿ ಸಾಬೀತು ಪಡಿಸಬೇಕಿರುತ್ತದೆ. ಈ ಎಲ್ಲಾ ಪರೀಕ್ಷೆಯ ಜೊತೆಗೆ ಅಭ್ಯರ್ಥಿಯು ವೈದ್ಯಕೀಯ ಪರೀಕ್ಷೆಯನ್ನು ಸಹ ಎದುರಿಸಬೇಕಿರುತ್ತದೆ.
CISF ಕಾನ್ಸೆಟೇಬಲ್ ಟ್ರೇಡ್ಸ್ಮನ್ಗಳ ಕಾರ್ಯವ್ಯಾಪ್ತಿ:
ಆಯ್ಕೆಗೊಂಡ ಅಭ್ಯರ್ಥಿಗಳು ಭದ್ರತೆ ಹಾಗೂ ಕಾರ್ಯಾಚರಣೆ ಚಟುವಟಿಕೆಯಲ್ಲಿ ಸಹಾಯ ಮಾಡಬೇಕಿರುತ್ತದೆ. ಪ್ರತಿದಿನದ ನಿರ್ವಹಣಾ ಕಾರ್ಯಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಬೇಕು. ಸಿಐಎಸ್ಎಫ್ ಆವರಣದಲ್ಲಿ ನೈರ್ಮಲ್ಯ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಹಾಗೆಯೇ, ತುರ್ತು ಕರ್ತವ್ಯಗಳು ಒದಗಿಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಿರುತ್ತದೆ.
ವೇತನ ವಿವರ:
ಮೂಲ ವೇತನ ಶ್ರೇಣಿ ಪ್ರತಿ ತಿಂಗಳಿಗೆ 21,700 ರೂ.-69,100
ರೂಪಾಯಿ ಇರಲಿದೆ.
ಅರ್ಜಿ ಇಲ್ಲಿ ಸಲ್ಲಿಸಿ:
cisfrectt.cist.gov.in