ಕನ್ನಡ ಚಿತ್ರರಂಗದ ಜನಪ್ರಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್, ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅಮೇರಿಕಾದ ಫ್ಲೋರಿಡಾದ ಯೋಗ – ಸಂಸ್ಕೃತಂ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸೋಮವಾರ, ಮಂತ್ರಾಲಯದಲ್ಲಿ ಸುಧೀಂದ್ರ ವೆಂಕಟೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನವಾಗಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸುಧೀಂದ್ರ ವೆಂಟಕೇಶ್ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ನೀಡಲಾಗಿದೆ.

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕಳೆದ 50 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಇತಿಹಾಸವಿರುವ ಮತ್ತು ಇನ್ನೂ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿ ಶ್ರೀ ರಾಘವೇಂದ್ರ ಚಿತ್ರವಾಣಿ ಗುರುತಿಸಿಕೊಂಡಿದೆ.
ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಚಿತ್ರಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ಈಶ್ವರಿ ಪ್ರೊಡಕ್ಷನ್ಸ್, ಕೆ.ಸಿ.ಎನ್ ಎಂಟರ್ ಪ್ರೈಸಸ್, ರಾಕ್ಲೈನ್ ಪ್ರೊಡಕ್ಷನ್ಸ್, ಹೊಂಬಾಳೆ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್, ರಿಷಭ್ ಶೆಟ್ಟಿ ಫಿಲ್ಮ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಕೆಲಸ ಮಾಡಿರುವ ವೆಂಕಟೇಶ್, ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಧೀಂದ್ರ ಅವರ ನಿಧನದ ನಂತರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ



