ಸಿ.ಟಿ. ರವಿ ಅವರು ಬುಧವಾರ ಹಾಸನಾಂಬೆ ದೇವಸ್ಥಾನಕ್ಕೆ ಹೋಗಿದ್ದರು. ಬುಧವಾರ ದೇವಸ್ಥಾನಕ್ಕೆ ಹೋಗಿ ಹೊರಗೆರ ಬರುತ್ತಿದ್ದಂತೆಯೇ ಅವರಿಗೆ ಒಬ್ಬ ಶಾಸ್ತ್ರ ಹೇಳುವವನು ಕಾಣಿಸಿದ.
ಒಮ್ಮೆ ಕಾರು ಹತ್ತಿದ್ದ ರವಿ ಅವರು ರಸ್ತೆ ಪಕ್ಕದಲ್ಲಿ ಕುಳಿತಿದ್ದ ಶಾಸ್ತ್ರದವನನ್ನು ನೋಡಿದ ಕೂಡಲೇ ಕಾರಿನಿಂದ ಇಳಿದು ಅವನಲ್ಲಿಗೆ ಹೋದರು. ಅವರ ಬೆಂಬಲಿಗರೂ ಜತೆಗಿದ್ದರು. ಪಕ್ಕದಲ್ಲಿದ್ದ ನಾಯಕರು ಕಾಣಿಕೆ ಇಡಲು ಮುಂದಾದರೂ ರವಿ ಅವರು ಬಿಡಲಿಲ್ಲ. ತಾನೇ ಕಾಣಿಕೆ ಇಟ್ಟರು.
ಶಾಸ್ತ್ರ ಕೇಳುವ ಮುನ್ನ ಶಾಸ್ತ್ರ ಹೇಳುವವನ ಹೆಸರು, ಊರು, ಎಷ್ಟು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ತಾನು ರಾಯಚೂರಿನ ಮಾನ್ವಿ ತಾಲೂಕಿನವನು, ೨೫ ವರ್ಷದಿಂದ ಶಾಸ್ತ್ರ ಹೇಳುತ್ತಿದ್ದೇನೆ ಎಂದು ಆತನೂ ಹೇಳಿದ.
ಬಳಿಕ ಕಾರ್ಡ್ ಒಂದನ್ನು ತೆಗೆಯಲು ಹೇಳಿ, ಅದರ ಆಧಾರದಲ್ಲಿ ಮತ್ತು ಹಸ್ತ ರೇಖೆ ನೋಡಿ ಶಾಸ್ತ್ರ ಹೇಳಿದ. ʻʻನಿಮ್ಮ ಹಸ್ತ ರೇಖೆ ಚೆನ್ನಾಗಿದೆ, ಎಲ್ಲೇ ಹೋದರೂ ಅನ್ನ ಸಿಗುತ್ತದೆ, ಬಟ್ಟೆ ಅನ್ನಕ್ಕೆ ನಿಮಗೆ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆʼʼ ಎಂದಿದ್ದಾನೆ ಶಾಸ್ತ್ರದವನು.
ʻʻನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲಸದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ದಾನ ಧರ್ಮ ಮಾಡೋದ್ರಲ್ಲಿ ಉದಾರತೆ ಬೇಡ, ತಿಥಿ ಊಟ ಮಾಡೋದಕ್ಕೆ ಹೋಗಬೇಡಿʼʼ ಎನ್ನುವುದು ಶಾಸ್ತ್ರದವನು ನೀಡಿದ ಎಚ್ಚರಿಕೆ. ಈಗ ಹಣದ ವಿಚಾರಕ್ಕೆ ಕೈ ಹಾಕಿದ್ದೀರಿ. ಅದರಲ್ಲಿ ಒಳ್ಳೆಯದಾಗುತ್ತದೆ ಎಂದೂ ಹೇಳಿದ್ದಾರೆ. ಇದನ್ನೆಲ್ಲ ಕೇಳಿಕೊಂಡು ನಗುತ್ತಲೇ ಹೊರಟಿದ್ದಾರೆ ಸಿ.ಟಿ. ರವಿ.