ಮಕ್ಕಳಿಗೆ ಸಾಮಾನ್ಯವಾಗಿ ಹೊಸತನ್ನು ಕಲಿಯುವ ತುಡಿತವಿರುತ್ತದೆ. ಈಗಂತೂ ಬಾಹ್ಯಾಕಾಶ ಲೋಕದಲ್ಲಿ ಸಾಧನೆಗೈಯುತ್ತಿರುವ ಇಸ್ರೋ ಸಂಸ್ಥೆಯ ವತಿಯಿಂದ ವಿಶ್ವದ ಕಣ್ಣು ಭಾರತದೆಡೆಗೆ ತಿರುಗಿದೆ. ಅದರಲ್ಲಿಯೂ ಈಗಿನ ಮಕ್ಕಳು ಸ್ಪೇಸ್ ಸೈನ್ಸ್ ಅಂದರೆ ಬಾಹ್ಯಾಕಾಶ ವಿಜ್ಞಾನವನ್ನು ತಮ್ಮ ಮುಂದಿನ ಅಧ್ಯಯನದ ವಿಷಯವನ್ನಾಗಿಸಿಕೊಳ್ಳಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಮಕ್ಕಳಲಿರುವ ಆಸಕ್ತಿಯನ್ನು ಕಂಡು ಇಸ್ರೋ ಸಂಸ್ಥೆ ಅವಕಾಶವೊಂದನ್ನು ಒದಗಿಸಿಕೊಟ್ಟಿದೆ. ಏನೆಂದು ಯೋಚಿಸುತ್ತಿದ್ರೆ ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ಓದಿ…….
ರಾಕೆಟ್, ಉಪಗ್ರಹಗಳ ಬಗೆ ತಿಳಿದುಕೊಳ್ಳಲು ಉತ್ಸಕರಾಗಿರುವ ಮಕ್ಕಳಿಗಾಗಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯುವಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ. 2025ರ ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತಿ ಇರುವ ಮಕ್ಕಳು ತಮ್ಮ ಹೆಸರನ್ನು ಇದಕ್ಕೆ ನೋಂದಾಯಿಸಿಕೊಳ್ಳಬಹುದು.

ಯುವಿಕಾ ಎಂದರೇನು…?
ಯುವಿಕಾ ಎಂದರೆ ಯುವ ವಿಜ್ಞಾನಿ ಕಾರ್ಯಕ್ರಮ. ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವ ಯುವಿಕಾ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸಲು ಅವಕಾಶ ಮಾಡಿಕೊಡುತ್ತದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಡೆಯುವ ಘಟನೆಗಳನ್ನು ಆಸಕ್ತಿ, ಉತ್ಸಾಹ ಹಾಗೂ ಕೌತಕತೆಯಿಂದ ನೋಡುವ ಯುವ ಮನಸ್ಸುಗಳನ್ನು ಪೋಷಿಸಲು ಈ ಯೋಜನೆಯನ್ನು ಇಸ್ರೋ ರೂಪಿಸಿದೆ.
ಯಾರು ಅರ್ಹರು…?
ಭಾರತದ ಯಾವುದೇ ಶಾಲೆಯಲ್ಲಿ 2025ರ ಜನವರಿ 1ನೇ ತಾರೀಖಿಗೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಿಜಿಸ್ಟರ್ ಮಾಡಿಕೊಳ್ಳಬೇಕಿದೆ. ಇನ್ನೂ ಆಯ್ಕೆಯು ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಹಾಗೂ ಪಠ್ಯೇತರ ಚಟುವಟಿಕೆಯನ್ನು ಆಧರಿಸಿರುತ್ತದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಬಾಹ್ಯಾಕಾಶ ತಂತ್ರಜ್ಞಾನವನ್ನು ಮೋಜು ಹಾಗೂ ಸಂವಾದಾತ್ಮಕ ರೀತಿಯಲ್ಲಿ ಪರಿಚಯಿಸುವುದು ಯುವಿಕಾ ಉದ್ದೇಶವಾಗಿದೆ.

ಇಸ್ರೋ ಗುರಿ:
ಭವಿಷ್ಯದಲ್ಲಿ (STEM) ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಹಾಗೂ ಮ್ಯಾಥ್ಸ್ ವಿಷಯಗಳನ್ನು ಅಧ್ಯಯನ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದೇ ಇಸ್ರೋದ ಮುಖ್ಯ ಉದ್ದೇಶವಾಗಿದ್ದು, ಅದಕ್ಕೆ ಪೂರಕವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ.
ಏನೆಲ್ಲಾ ಸೌಲಭ್ಯ ಒಳಗೊಂಡಿದೆ….?
ಯುವಿಕಾ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳ ಸಂಪೂರ್ಣ ಹೊಣೆಯನ್ನು ಇಸ್ರೋ ಹೊರಲಿದೆ. ವಿದ್ಯಾರ್ಥಿಗಳ ವಸತಿ, ಊಟ ಹಾಗೂ ಅಧ್ಯಯನ ಸಾಮಗ್ರಿಗಳ ಪೂರ್ಣ ವೆಚ್ಚವನ್ನು ಇಸ್ರೋ ಭರಿಸಲಿದೆ.

ನೋಂದಾಣಿಗೆ ಕೊನೆ ದಿನಾಂಕ:
ಫೆ.24ರಂದೇ ನೋಂದಣಿ ಕಾರ್ಯಕ್ರಮ ಪ್ರಾರಂಭವಾಗಿದ್ದು, ಮಾರ್ಚ್ 23 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿದೆ. ಮೊದಲ ಆಯ್ಕೆ ಪಟ್ಟಿ ಏಪ್ರಿಲ್ 7ರಂದು ಬಿಡುಗಡೆಗೊಳ್ಳಲಿದ್ದು, ಆಯ್ಕೆಗೊಂಡ ವಿದ್ಯಾರ್ಥಿಗಳು ಮೇ 18ರಂದು ಇಸ್ರೋ ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕಿರುತ್ತದೆ. ಮೇ 19ರಿಂದ 30ರ ವರೆಗೂ ಯುವಿಕಾ ಕಾರ್ಯಕ್ರಮ ನಡೆಯಲಿದೆ.
ಮಾನದಂಡಗಳೇನು….?
ವಿದ್ಯಾರ್ಥಿಯು 8ನೇ ತರಗತಿಯಲ್ಲಿ 50% ಅಂಕ ಗಳಿಸಿರಬೇಕು. ಆನ್ಲೈನ್ ರಸಪ್ರಶ್ನೆಯಲ್ಲಿ 10% ಸಾಧನೆ ಮಾಡಿರಬೇಕು. ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿರಬೇಕು. ಹಾಗೆಯೇ, ಒಲಿಂಪಿಯಾಡ್ಗಳಲ್ಲಿಯೂ ಸಹ ಶ್ರೇಯಾಂಕ ಗಳಿಸಿರಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿ, ಸ್ಕೌಟ್ಸ್/ಗೈಡ್ಸ್/ಎನ್ಸಿಸಿ/ಎನ್ಎಸ್ಎಸ್ನಲ್ಲಿ ಪಾಲ್ಗೊಂಡಿರಬೇಕು. ಗ್ರಾಮೀಣ ಅಥವಾ ಪಂಚಾಯತ್ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಆದ್ಯತೆಯಿರುತ್ತದೆ.
ಕಾರ್ಯಕ್ರಮ ಇಲ್ಲಿ ನಡೆಯಲಿದೆ:
ಡೆಹ್ರಾಡೂನ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್, ತಿರುವನಂತಪುರಂನ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರ, ಹೈದರಾಬಾದ್ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್, ಅಹಮದಾಬಾದ್ನ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ ಹಾಗೂ ಶಿಲ್ಲಾಂಗ್ನ ಈಶಾನ್ಯ ಬಾಹ್ಯಾಕಾಶ ಅನ್ವಯಿಕೆ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಈ 7 ಸ್ಥಳಗಳಲ್ಲಿ ಒಂದೆಡೆಗೆ ಭೇಟಿ ನೀಡುವ ಅವಕಾಶ ಸಿಗಲಿದೆ.