ನಟ ಭುವನ್ ಹಾಗೂ ಹರ್ಷಿಕಾ ವಿವಾಹ ನಿನ್ನೆಯಷ್ಟೇ ಕೊಡವ ಸಂಪ್ರದಾಯದಂತೆ ಅದ್ದೂರಿಗಿ ನೆರವೇರಿದೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಇದೀಗ ಅಧಿಕೃತವಾಗಿ ಹಸೆಮಣೆ ಏರಿದೆ. ಸಿನಿಮಾ ನಟನಟಿಯರು, ರಾಜಕಾರಣಿಗಳು ಸೇರಿದಂತೆ ಗಣ್ಯರು ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ಇದರೊಂದಿಗೆ ಮದುವೆಗೆ ಕೂರ್ಗ್ ಶೈಲಿಯ ಭರ್ಜರಿ ಬಾಡೂಟ ಬಡಿಸಲಾಗಿದ್ದು, ಊಟದ ಮೆನುವಿನಲ್ಲಿ ಏನೇನಿತ್ತು ಎಂಬ ಮಾಹಿತಿ ಇಲ್ಲಿದೆ ನೋಡಿ.

ವಿವಾಹ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ವೆಜ್ ಹಾಗೂ ನಾನ್ ವೆಜ್ ಶೈಲಿಯ ವಿವಿಧ ಆಹಾರ ಖಾದ್ಯಗಳನ್ನು ಬಡಿಸಲಾಗಿತ್ತು. ವೆಜ್ ಮೆನುವಿನಲ್ಲಿ
ಪಲಾವ್, ಬೆಂಡೆಕಾಯಿ ಫ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಇತ್ತು. ಕೊಡವ ಶೈಲಿಯ ನೂಪಟ್ಟು, ಪೋರ್ಕ್ ಫ್ರೈ, ಪೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಫ್ರೈ, ಚಿಕನ್ ಫ್ರೈ ಸೇರಿದಂತೆ ಇನ್ನಷ್ಟು ರುಚಿರುಚಿಯಾದ ಅಡುಗೆ ಬಡಿಸಲಾಗಿತ್ತು.
ಮದುವೆಯಲ್ಲಿ ವಧು ಹರ್ಷಿಕಾ ಪುಣಚ್ಚ ಕೆಂಬಣ್ಣದ ಕೊಡವ ಶೈಲಿಯ ಸಾರಿಯಲ್ಲಿ ಮಿಂಚಿದರೆ, ವರ ಭುವನ್ ಪೊನ್ನಣ್ಣ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಮದುವೆಗೆ ನಟ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ರಘು ಮುಖರ್ಜಿ, ಅನು ಪ್ರಭಾಕರ್, ತಬಲ ನಾಣಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರು ಆಗಮಿಸಿದ್ದರು.