ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 741ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಪ್ರತಿದಿನ ಕಷ್ಟಪಡುವಂತಾಗಿದೆ. ಪ್ರತಿದಿನ ಭಾಗ್ಯಾ ಗುಂಡಣ್ಣನನ್ನು ಸ್ಕೂಲ್ ಮುಂದೆ ಬಿಟ್ಟು ಅದೇ ಆಟೋದಲ್ಲಿ ಕೆಲಸಕ್ಕೆ ಹೋಗುತ್ತಾಳೆ. ಆದರೆ ಗುಂಡಣ್ಣ 2 ದಿನಗಳಿಂದ ಕೆಲಸಕ್ಕೆ ಹೋಗದೆ ಶೂ ಪಾಲಿಶ್ ಕೆಲಸ ಮಾಡುತ್ತಿದ್ದಾನೆ. ಅಮ್ಮ ಬಹಳ ಕಷ್ಟಪಡುತ್ತಿದ್ದಾಳೆ. ಅವಳಿಗೆ ನಾನೂ ಸಹಾಯ ಮಾಡಬೇಕು, ಹಣ ಸಂಪಾದನೆ ಮಾಡಬೇಕು ಎಂದು ಗುಂಡಣ್ಣ, ಸ್ಕೂಲ್ ಮುಂದೆ ಶೂ ಪಾಲಿಶ್ ಮಾಡುವವನ ಬಳಿ ಕಿಟ್ ಪಡೆದುಕೊಂಡು ಪಕ್ಕದ ರಸ್ತೆಗೆ ಹೋಗಿ ಶೂ ಪಾಲಿಶ್ ಮಾಡುತ್ತಿದ್ದಾನೆ.
ಮೊದಲ ದಿನ ಗುಂಡಣ್ಣ ಸಂಪಾದನೆ ಮಾಡಿದ ಹಣವನ್ನು ಜೇಬಿನೊಳಗೆ ಇಟ್ಟುಕೊಂಡು ಮನೆಗೆ ಹೋಗುತ್ತಾನೆ. ಆದರೆ ಗುಂಡಣ್ಣ ತಡವಾಗಿ ಬಂದಿದ್ದು, ಅವನ ಬಟ್ಟೆ ಕೊಳೆಯಾಗಿದ್ದನ್ನು ನೋಡಿ ಮನೆಯವರು ಗಾಬರಿಯಾಗುತ್ತಾರೆ. ನಾನು ಫ್ರೆಂಡ್ ಜೊತೆ ಆಟವಾಡುತ್ತಿದ್ದೆ, ಅದಕ್ಕೆ ಬಟ್ಟೆ ಇಷ್ಟು ಕೊಳೆಯಾಗಿದೆ ನಾಳೆಯಿಂದ ಈ ರೀತಿ ಆಗುವುದಿಲ್ಲ ಎಂದು ಗುಂಡಣ್ಣ ರೂಮ್ಗೆ ಹೋಗುತ್ತಾನೆ. ಅಷ್ಟರಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ. ನಿನ್ನ ಮಗನೂ ಸ್ಕೂಲ್ನಿಂದ ತಡವಾಗಿ ಬಂದ, ಬಟ್ಟೆ ಬೇರೆ ಕೊಳೆ ಮಾಡಿಕೊಂಡು ಬಂದಿದ್ದಾನೆ ಎಂದು ಸುನಂದಾ ಹೇಳುತ್ತಾಳೆ. ಭಾಗ್ಯಾ ಗಾಬರಿಯಿಂದ ರೂಮ್ಗೆ ಬಂದು ಗುಂಡಣ್ಣನ ಬಟ್ಟೆ ನೋಡುತ್ತಾಳೆ. ಜೇಬಿನಲ್ಲಿ ಹಣ ನೋಡಿ ಗಾಬರಿ ಆಗುತ್ತಾಳೆ.
ಗುಂಡಣ್ಣನನ್ನು ಕರೆದು ಈ ಹಣ ಎಲ್ಲಿಂದ ಬಂತು ಎಂದು ಕೇಳುತ್ತಾಳೆ. ಇದು ನನ್ನ ಫ್ರೆಂಡ್ ಚರಣ್ದು, ಅವನ ಜೇಬು ಹರಿದಿತ್ತು ಅಂತ ನನಗೆ ಕೊಟ್ಟಿದ್ದ, ನಾನು ಮರೆತು ಹಾಗೇ ಬಂದುಬಿಟ್ಟೆ ಎಂದು ಸುಳ್ಳು ಹೇಳುತ್ತಾನೆ. ಹಾಗೆಲ್ಲಾ ಮತ್ತೊಬ್ಬರ ದುಡ್ಡನ್ನು ಮನೆಗೆ ತೆಗೆದುಕೊಂಡುಬರಬಾರದು ಎಂದು ನಿನಗೆ ಹೇಳಿದ್ದೆ ತಾನೇ, ನಾಳೆ ಮರೆಯದೆ ನಿನ್ ಸ್ನೇಹಿತನಿಗೆ ವಾಪಸ್ ದುಡ್ಡು ಕೊಡು ಎಂದು ಭಾಗ್ಯಾ ಮಗನಿಗೆ ಎಚ್ಚರಿಕೆ ನೀಡುತ್ತಾಳೆ. ಇತ್ತ ಶ್ರೇಷ್ಠಾ ಹಾಗೂ ತಾಂಡವ್, ಭಾಗ್ಯಾ ಹೊಸ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆಯೇ ಯೋಚನೆ ಮಾಡುತ್ತಾರೆ. ಆ ಕನ್ನಿಕಾ ಬಿಲ್ಡಪ್ ಕೊಡುತ್ತಿದ್ದಳು, ಅವಳು ಏನೂ ಮಾಡಿಲ್ಲ, ಅವಳಿಗೆ ಫೋನ್ ಮಾಡಿಕೊಡು ಎಂದು ತಾಂಡವ್ ಹೇಳುತ್ತಾನೆ.
ಶ್ರೇಷ್ಠಾ, ಕನ್ನಿಕಾಗೆ ಫೋನ್ ಮಾಡಿ ಕೊಡುತ್ತಾಳೆ. ಭಾಗ್ಯಾಳನ್ನು ಕೆಲಸದಿಂದ ತೆಗೆದಿದ್ದೇನೆ, ಮತ್ತೆ ಅವಳಿಗೆ ಎಲ್ಲೂ ಕೆಲಸ ಸಿಗುವುದಿಲ್ಲ ಎಂದು ಬಿಲ್ಡಪ್ ಕೊಡ್ತಿದ್ದೆ ಈಗ ಅವಳು ಬೇರೆ ಕಡೆ ಕೆಲಸಕ್ಕೆ ಸೇರಿದ್ದಾಳೆ ಎಂದು ಕೋಪದಿಂದ ಹೇಳುತ್ತಾನೆ. ನಾನು ಅದೇ ಯೋಚನೆ ಮಾಡುತ್ತಿದ್ದೆ, ಅವಳಿಗೆ ಎಲ್ಲಿ ಕೆಲಸ ಸಿಕ್ಕಿದೆ ಅಂತ ಗೊತ್ತಾದರೆ ಸಾಕು ಅವಳನ್ನು ಮತ್ತೆ ಕೆಲಸದಿಂದ ತೆಗೆಸುತ್ತೇನೆ, ನೀನು ಇಷ್ಟು ಮಾತನಾಡುತ್ತಿದ್ದೀಯ ಸಾಧ್ಯವಾದರೆ ಭಾಗ್ಯಾಗೆ ಎಲ್ಲಿ ಕೆಲಸ ಸಿಕ್ಕಿದೆ ಅಂತ ನೀನೇ ಕಂಡುಹಿಡಿ, ನಂತರ ನನಗೆ ಹೇಳು, ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾಳೆ. ಭಾಗ್ಯಾ ಎಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿಯಲು ತಾಂಡವ್ ನಿರ್ಧರಿಸುತ್ತಾನೆ.
ಮರುದಿನ ಭಾಗ್ಯಾ ಎಂದಿನಂತೆ ಗುಂಡಣ್ಣನನ್ನು ಶಾಲೆಗೆ ಕರೆದೊಯ್ಯುತ್ತಾಳೆ. ಅವಳು ಹತ್ತಿದ ಆಟೋವನ್ನು ತಾಂಡವ್ ಫಾಲೋ ಮಾಡುತ್ತಾಳೆ. ಸ್ಕೂಲ್ ಬಳಿ ಗುಂಡಣ್ಣನನ್ನು ಇಳಿಸಿ ಭಾಗ್ಯಾ ಕೆಲಸಕ್ಕೆ ಹೋಗುತ್ತಾಳೆ. ಗುಂಡಣ್ಣ ಒಳಗೆ ಹೋಗಲಿ ಎಂದು ಕಾಯುತ್ತಿದ್ದ ತಾಂಡವ್ಗೆ ಅವನು ಸ್ಕೂಲ್ ಒಳಗೆ ಹೋಗದೆ, ಬೇರೆಲ್ಲೋ ಹೋಗುತ್ತಿದ್ದನ್ನು ನೋಡಿ ಅನುಮಾನ ಉಂಟಾಗುತ್ತದೆ, ಇವನು ಸ್ಕೂಲ್ಗೆ ಹೋಗುವುದು ಬಿಟ್ಟು ಎಲ್ಲಿಗೆ ಹೋಗುತ್ತಿದ್ದಾನೆ ಎಂದು ಅವನನ್ನು ಫಾಲೋ ಮಾಡುತ್ತಾನೆ.
ಇತ್ತ ಭಾಗ್ಯಾ ಕೆಲಸ ಮಾಡುವ ಹೋಟೆಲ್ಗೆ ಹೊಸ ಮ್ಯಾನೇಜರ್ ಬಂದಿರುತ್ತಾರೆ. ಅವರ ಬಳಿ ಹೋಗಿ ಭಾಗ್ಯಾ ಹಣ ಕೇಳುತ್ತಾಳೆ. ಕೆಲಸ ಮಾಡಿದ ನಂತರ ಸಂಬಳ ಬಂದೇ ಬರುತ್ತದೆ, ಅದರೆ ಅದಕ್ಕಿಂತ ಮುನ್ನ ಹಣ ಕೊಡಲು ಸಾಧ್ಯವಿಲ್ಲ, ಹೋಗಿ ಕೆಲಸ ಮಾಡು ಎನ್ನುತ್ತಾನೆ. ಅಷ್ಟರಲ್ಲಿ ಭಾಗ್ಯಾಗೆ ಗುಂಡಣ್ಣನ ಸ್ಕೂಲ್ ಟೀಚರ್ನಿಂದ ಕರೆ ಬರುತ್ತದೆ. 2 ದಿನಗಳಿಂದ ತನ್ಮಯ್ ಏಕೆ ಸ್ಕೂಲ್ಗೆ ಬಂದಿಲ್ಲ ಎಂದು ಕೇಳುತ್ತಾರೆ. ಇಲ್ಲ ನಾನೇ ಅವನನ್ನು ಸ್ಕೂಲ್ ಬಳಿ ಬಿಟ್ಟು ಹೋಗುತ್ತಿದ್ದೇನಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ಇಲ್ಲ ಅವನು ಸ್ಕೂಲ್ಗೆ ಬಂದೇ ಇಲ್ಲ ಎಂದು ಟೀಚರ್ ಹೇಳಿದಾಗ ಭಾಗ್ಯಾ ಗಾಬರಿಯಾಗುತ್ತಾಳೆ.
ಗುಂಡಣ್ಣ ಶೂ ಪಾಲಿಶ್ ಕಿಟ್ ಪಡೆದು ಶೂ ಪಾಲಿಶ್ ಮಾಡುತ್ತಿದ್ದನ್ನು ಕಂಡು ತಾಂಡವ್ ಕೋಪಗೊಳ್ಳುತ್ತಾನೆ. ಕೋಪದಿಂದ ತನ್ಮಯ್ ಎಂದು ಅರಚುತ್ತಾನೆ. ಅಪ್ಪನನ್ನು ನೋಡಿ ಗುಂಡಣ್ಣ ಗಾಬರಿಯಾಗುತ್ತಾನೆ. ಸ್ಕೂಲ್ ಹೋಗುವುದನ್ನು ಬಿಟ್ಟು ಏನು ಮಾಡುತ್ತಿದ್ದೀಯ ಎಂದು ಕೇಳುತ್ತಾನೆ. ಅಮ್ಮ….ಸ್ಕೂಲ್ ಫೀಸ್.. ಎಂದು ಗುಂಡಣ್ಣ ತೊದಲುತ್ತಾ ಮಾತನಾಡುತ್ತಾನೆ. ಹೋ ನಿನ್ನ ಅಮ್ಮ ಇದೆಲ್ಲಾ ಐಡಿಯಾ ಕೊಟ್ಟಿದ್ದಾ? ಅಂದುಕೊಂಡೆ ಮಕ್ಕಳನ್ನು ನೋಡಿಕೊಳ್ಳಲು ಯೋಗ್ಯತೆ ಇಲ್ಲವೆಂದ ಮೇಲೆ ಹೇಳಿಬಿಡಬೇಕು ಹೀಗೆಲ್ಲಾ ಮಕ್ಕಳನ್ನು ಬೀದಿಗೆ ಬಿಡಬಾರದು ಎಂದು ಬೈಯ್ಯುತ್ತಾನೆ. ಅಪ್ಪ, ಅಮ್ಮನಿಗೆ ಏನೂ ಹೇಳಬೇಡಿ, ನಾನು ಈ ಕೆಲಸ ಮಾಡುತ್ತಿರುವುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ ಎಂದು ಗುಂಡಣ್ಣ ಹೇಳುತ್ತಾನೆ. ಇದಕ್ಕೆಲ್ಲಾ ಆ ಮನೆಹಾಳಿ ಭಾಗ್ಯಾನೆ ಕಾರಣ ಇವತ್ತು ನಿನ್ನ ಅಮ್ಮನ ಗ್ರಹಚಾರ ಬಿಡಿಸುತ್ತೇನೆ ಎಂದು ತಾಂಡವ್ ಭಾಗ್ಯಾಗೆ ಕರೆ ಮಾಡುತ್ತಾನೆ.
ಸಿಕ್ಕಿದ್ದೇ ಚಾನ್ಸ್ ಅಂತ ಮತ್ತೆ ತಾಂಡವ್, ಭಾಗ್ಯಾ ಮೇಲೆ ದರ್ಪ ತೋರಿಸುತ್ತಾನಾ? ಮತ್ತೆ ಭಾಗ್ಯಾ ಕೆಲಸ ಕಳೆದುಕೊಳ್ಳುತ್ತಾಳಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.