ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 733ರ ಎಪಿಸೋಡ್ ಕಥೆ ಇಲ್ಲಿದೆ. ಗಿರವಿ ಇಡಲು ಹೋಗುತ್ತಿದ್ದ ಒಡವೆಯನ್ನು ತಾಂಡವ್ ಹಾಗೂ ಶ್ರೇಷ್ಠಾ ಕಸಿದುಕೊಂಡ ಹೋದ ನಂತರ ಮನೆ ಇಎಂಐ ಕಟ್ಟಲು ಏನು ಮಾಡುವುದು ಎಂದು ಭಾಗ್ಯಾಗೆ ಯೋಚನೆ ಶುರುವಾಗುತ್ತದೆ. ಏನಾದರೂ ಮಾಡು, ಭಾವನ ಎದುರು ನೀನು ಸೋಲಬೇಡ ಎಂದು ಪೂಜಾ ಅಕ್ಕನಿಗೆ ಹೇಳುತ್ತಾಳೆ. ಹೌದು, ನಾನು ಸೋಲಬಾರದು, ಇಂದು ಹೇಗಾದರೂ ಮಾಡಿ ಹಣ ತರುತ್ತೇನೆ ಎಂದು ಮನೆಯಿಂದ ಹೋಗುತ್ತಾಳೆ.
ಮನೆ ಬಳಿಯೇ ನಿಂತ ತಾಂಡವ್, ಭಾಗ್ಯಾಗೆ ವ್ಯಂಗ್ಯವಾಡುತ್ತಾನೆ, ಏನು ಮಾಡಿದರೂ ನೀನು ಮನೆಯನ್ನು ಉಳಿಸಿಕೊಳ್ಳೋಕೆ ಆಗುವುದಿಲ್ಲ, ನೀವೆಲ್ಲರೂ ಬೀದಿ ಪಾಲಾಗುವುದು ಖಂಡಿತ ಎಂದು ದುರಹಂಕಾರದ ಮಾತುಗಳನ್ನಾಡುತ್ತಾನೆ. ಹಾಗಾದರೆ ನಾಳೆಯೇ ಇಲ್ಲಿಗೆ ಬನ್ನಿ, ಇವತ್ತೇ ಏಕೆ ಇಲ್ಲಿ ನಿಂತು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದೀರ ಎಂದು ಹೇಳಿ ಭಾಗ್ಯಾ ಅಲ್ಲಿಂದ ಹೋಗುತ್ತಾಳೆ. ದೇವಸ್ಥಾನದಲ್ಲಿ ದೇವರ ಬಳಿ ನಿಂತು ಭಾಗ್ಯಾ, ಹೇಗಾದರೂ ನನಗೆ ಸಹಾಯ ಮಾಡು ಎಂದು ಬೇಡಿಕೊಳ್ಳುತ್ತಾಳೆ. ದೇವರು ವರ ಕೊಟ್ಟ ರೀತಿ ಅಲ್ಲಿ ಅವಳಿಗೆ 250 ಜನರಿಗೆ ಅಡುಗೆ ಮಾಡುವ ಕಾಂಟ್ರಾಕ್ಟ್ ಸಿಗುತ್ತದೆ. ಭಾಗ್ಯಾ ಖುಷಿಯಿಂದ ಅತ್ತೆಗೆ ಕರೆ ಮಾಡಿ ಸಹಾಯಕ್ಕೆ ಬರಹೇಳುತ್ತಾಳೆ.
ಭಾಗ್ಯಾ ಹೇಳಿದ ಸ್ಥಳಕ್ಕೆ ಕುಸುಮಾ, ಪೂಜಾಳನ್ನು ಕರೆದುಕೊಂಡು ಬರುತ್ತಾಳೆ. ಅಡುಗೆ ಕೆಲಸ ಮಾಡುವ ಅಭ್ಯಾಸ ಇಲ್ಲದ ಪೂಜಾ, ಕೆಲಸದಿಂದ ತಪ್ಪಿಸಿಕೊಳ್ಳಲು ನೋಡುತ್ತಾಳೆ. ನಿನ್ನ ಅಕ್ಕ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾಳೆ. ಅವಳಿಗೆ ಸಹಾಯ ಮಾಡುವುದು , ಅವಳ ಜೊತೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಬುದ್ಧಿ ಹೇಳಿ ಅವಳನ್ನು ಕರೆದೊಯ್ಯುತ್ತಾಳೆ. ಕುಸುಮಾ, ಆ ಸ್ಥಳಕ್ಕೆ ಹೋದಾಗ ಭಾಗ್ಯಾ ಒಲೆಗೆ ಪೂಜೆ ಮಾಡಿ ನಮಸ್ಕರಿಸುತ್ತಾಳೆ. ಸೊಸೆಯ ವಿನಯ ನೋಡಿ ಕುಸುಮಾ ಖುಷಿಯಾಗುತ್ತಾಳೆ. ಅತ್ತೆಯನ್ನು ನೋಡುವ ಭಾಗ್ಯಾ, ಕ್ಷಮಿಸಿ ಅತ್ತೆ ನಿಮ್ಮನ್ನು ನಾನು ಅಡುಗೆ ಕೆಲಸಕ್ಕೆ ಕರೆದೆ, ನನಗೆ ಬೇರೆ ದಾರಿ ತೋಚಲಿಲ್ಲ ಎನ್ನುತ್ತಾಳೆ. ನೀನು ಒಡವೆ ಮಾಡಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದೀಯ ಭಾಗ್ಯಾ? ನಮಗಾಗಿ ತಾನೇ? ಅಂದ ಮೇಲೆ ನಾವೆಲ್ಲರೂ ನಿನ್ನ ಸಹಾಯಕ್ಕೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುತ್ತಾಳೆ.
ಭಾಗ್ಯಾಗೆ ಅಡುಗೆ ಕಾಂಟ್ರಾಕ್ಟ್ ನೀಡಿದ ಶ್ರೀಮಂತ ವ್ಯಕ್ತಿಯ ಸಹಾಯಕ ಅತ್ತೆ ಸೊಸೆ ಇಬ್ಬರನ್ನೂ ನೋಡಿ, ನೀವು ನಂತರ ಮಾತನಾಡಿಕೊಳ್ಳಿ, ಅಡುಗೆ ಮುಗಿಸಲು ಇನ್ನು ಎರಡೂವರೆ ಗಂಟೆ ಸಮಯ ಇದೆ ಎಂದು ಹೇಳುತ್ತಾನೆ. ಭಾಗ್ಯಾ ಅಡುಗೆ ಶುರು ಮಾಡುತ್ತಾಳೆ. ಪೂಜಾ ಈರುಳ್ಳಿ ಕತ್ತರಿಸಿದರೆ, ಕುಸುಮಾ ಉಳಿದ ತರಕಾರಿ ಕತ್ತರಿಸುತ್ತಾಳೆ. ಒಲೆ ಮೇಲಿಟ್ಟ ನೀರು ಬಿಸಿ ಆಗಿದೆಯಾ ನೋಡಿ ಅತ್ತೆ ಎಂದು ಭಾಗ್ಯಾ, ಅತ್ತೆಗೆ ಹೇಳುತ್ತಾಳೆ. ಕುಸುಮಾ ನೀರು ಬಿಸಿ ಆಗಿದೆ, ನಾನು ಇಳಿಸುತ್ತೇನೆ ಎನ್ನುತ್ತಾಳೆ. ಭಾಗ್ಯಾ ಬೇಡ ಎಂದರೂ ಕುಸುಮಾ ಬಿಸಿ ಪಾತ್ರೆ ಹಿಡಿದುಕೊಳ್ಳಲು ಹೋಗಿ ಬಿಸಿ ನೀರನ್ನು ಕಾಲ ಮೇಲೆ ಸುರಿದುಕೊಳ್ಳುತ್ತಾಳೆ. ಅದನ್ನು ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ.
ಅತ್ತೆ ಪರಿಸ್ಥಿತಿ ನೋಡಲಾಗದೆ ಭಾಗ್ಯಾ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುತ್ತಾಳೆ. ನೀನು ಬರುವುದು ಬೇಡ ನಾನು ಹಾಗೂ ಪೂಜಾ ಹೋಗಿ ಬರುತ್ತೇವೆ. ನೀನು ಬೇಗ ಅಡುಗೆ ಮಾಡು ಎಂದು ಹೇಳುತ್ತಾಳೆ. ಇತ್ತ ಭಾಗ್ಯಾ ಇಲ್ಲದ್ದನ್ನು ನೋಡಿ ಅಡುಗೆ ಮಾಡಲು ಹೇಳಿದ ವ್ಯಕ್ತಿ ಗಾಬರಿ ಆಗುತ್ತಾನೆ. ಮೊದಲೇ ಒಬ್ಬ ಕೈ ಕೊಟ್ಟು ಹೋಗಿದ್ದ, ಈಗ ಈ ಮಹಿಳೆ ಕೂಡಾ ಮೋಸ ಮಾಡಿ ಹೋಗಿಬಿಟ್ಲಾ ಎಂದುಕೊಳ್ಳುತ್ತಾನೆ. ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ವಾಪಸ್ ಬರುತ್ತಾಳೆ. ಏನಮ್ಮಾ ಇಷ್ಟು ಸಮಯ ಆದ್ರೂ ಒಂದೂ ಐಟಮ್ ರೆಡಿ ಮಾಡಿಲ್ಲ. ನಿನಗೆ ಅಡುಗೆ ಕೆಲಸ ಒಪ್ಪಿಸಿ ತಪ್ಪು ಮಾಡಿಬಿಟ್ಟೆ, ಈಗಲೇ ಪುರೋಹಿತರ ಬಳಿ ಮಾತನಾಡುತ್ತೇನೆ ಎಂದು ಹೋಗುತ್ತಾರೆ. ಆದರೆ ಭಾಗ್ಯಾ ಆತನ ಬಳಿ ಮನವಿ ಮಾಡಿ ನನ್ನ ಅತ್ತೆಗೆ ಸಮಸ್ಯೆ ಆಗಿದೆ, ಅದಕ್ಕೆ ಆಸ್ಪತ್ರೆಗೆ ಸೇರಿಸಲು ಹೋಗಿದ್ದೆ, ನನ್ನ ಮೇಲೆ ದಯವಿಟ್ಟು ನಂಬಿಕೆ ಇಡಿ, ನಾನು ಖಂಡಿತ ಉಳಿದ 2 ಗಂಟೆ ಸಮಯದಲ್ಲಿ ಅಡುಗೆ ಮಾಡುತ್ತೇನೆ, ಇಲ್ಲವಾದರೆ ನೀವು ನನಗೆ ದುಡ್ಡು ಕೊಡಲೇಬೇಡಿ ಎನ್ನುತ್ತಾಳೆ. ಸರಿ ಏನು ಮಾಡುತ್ತೀಯೋ ಮಾಡು, ಮತ್ತೆ ನಾನು ವಾಪಸ್ ಬರುವಷ್ಟರಲ್ಲಿ ಅಡುಗೆ ರೆಡಿ ಇರಬೇಕು ಎಂದು ಹೇಳಿ ಆತ ಅಲ್ಲಿಂದ ಹೋಗುತ್ತಾನೆ.
ಏನು ಮಾಡುವುದು ನಾನು ಒಬ್ಬಳೇ ಅಷ್ಟು ಸಮಯದಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲ, ಯಾರ ಸಹಾಯ ಕೇಳುವುದು ಎಂದುಕೊಳ್ಳುವಾಗ ಭಾಗ್ಯಾಗೆ ದೃಷ್ಟಿ (ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ದೃಷ್ಟಿಬೊಟ್ಟು ಧಾರಾವಾಹಿ ನಾಯಕಿ) ನೆನಪಾಗುತ್ತಾಳೆ. ಅವಳಿಗೆ ಕರೆ ಮಾಡಿ ತನ್ನ ಕಷ್ಟವನ್ನು ವಿವರಿಸಿ ಸಹಾಯಕ್ಕೆ ಬರಲು ಸಾಧ್ಯವೇ ಎಂದು ಮನವಿ ಮಾಡುತ್ತಾಳೆ. ನೀವು ಹೇಳಿದ ಸ್ಥಳಕ್ಕೆ ಖಂಡಿತ ಬರುತ್ತೇನೆ ಸ್ವಲ್ಪ ಸಮಯ ಕೊಡಿ ಎಂದು ದೃಷ್ಟಿ, ಭಾಗ್ಯಾಗೆ ಭರವಸೆ ನೀಡುತ್ತಾಳೆ.
ಇತ್ತ ತಾಂಡವ್ ಭಾಗ್ಯಾ ಆಡಿದ ಮಾತುಗಳನ್ನು ನೆನಪಿಸಿಕೊಂಡು ಊಟವನ್ನೂ ಮಾಡಲು ಕೂರುತ್ತಾನೆ. ಅವನನ್ನು ನೋಡಿ ಶ್ರೇಷ್ಠಾ, ಏನು ಯೋಚನೆ ಮಾಡುತ್ತಿದ್ದೀಯ ಎಂದು ಕೇಳುತ್ತಾಳೆ. ಆ ಭಾಗ್ಯಾ ನನ್ನನ್ನೇ ಸೆಕ್ಯೂರಿಟಿ ಎನ್ನುತ್ತಾಳೆ, ಅವಳ ಸೋಲನ್ನು ನಾನು ನೋಡಲೇಬೇಕು. ದಯವಿಟ್ಟು ಮನೆ ಉಳಿಸಿಕೊಡಿ ಎಂದು ಅವಳು ನನ್ನ ಕಾಲಿಗೆ ಬಿದ್ದು ಕೇಳಿಕೊಳ್ಳಬೇಕು, ಆಗಲೇ ನನಗೆ ಸಮಾಧಾನ, ಆಗಲೇ ನಾನು ಹೊಟ್ಟೆ ತುಂಬಾ ಊಟ ಮಾಡುತ್ತೇನೆ, ಬೇಕಿದ್ದರೆ ಇಡೀ ಊರಿಗೇ ಊಟ ಹಾಕಿಸುತ್ತೇನೆ ಎಂದು ಊಟ ಬಿಟ್ಟು ಹೊರಡುತ್ತಾನೆ.
ದೃಷ್ಟಿ, ಭಾಗ್ಯಾಗೆ ಯಾವ ರೀತಿ ಸಹಾಯ ಮಾಡುತ್ತಾಳೆ? ತಾಂಡವ್, ತಾನು ಅಂದುಕೊಂಡಂತೆ ಭಾಗ್ಯಾ ಸೋಲನ್ನು ನೋಡುತ್ತಾನಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.