ಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 734ರ ಎಪಿಸೋಡ್ ಕಥೆ ಇಲ್ಲಿದೆ. ಹೇಗಾದರೂ ಮನೆ ಉಳಿಸಿಕೊಳ್ಳಬೇಕು, ತಾಂಡವ್ ಮುಂದೆ ನಾನು ಸೋಲಬಾರದು ಎಂದು ಭಾಗ್ಯಾ ಶತಪ್ರಯತ್ನ ಮಾಡುತ್ತಿದ್ದಾಳೆ. ದೇವರಿಗೆ ಪ್ರಾರ್ಥನೆ ಮಾಡಿದ ಬೆನ್ನಲ್ಲೇ ಭಾಗ್ಯಾಗೆ ಅಡುಗೆ ಕಾಂಟ್ರಾಕ್ಟ್ ಸಿಕ್ಕಿದೆ. ಸಹಾಯ ಮಾಡಲು ಬಂದ ಕುಸುಮಾ, ಪಾತ್ರೆ ತೆಗೆಯಲು ಹೋಗಿ ಕಾಲಿನ ಮೇಲೆ ಬಿಸಿನೀರು ಚೆಲ್ಲಿದ್ದರಿಂದ ಆಸ್ಪತ್ರೆ ಸೇರಿದ್ದಾಳೆ. ನಾನೊಬ್ಬಳೇ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡ ಭಾಗ್ಯಾ, ತನ್ನ ಸಹಾಯಕ್ಕೆ ದೃಷ್ಟಿಯನ್ನು ಕರೆಯತ್ತಾಳೆ.
ಭಾಗ್ಯಾಗೆ ಸಹಾಯ ಮಾಡಲು ದೃಷ್ಟಿ, ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ. ಜೊತೆಗೆ ತನ್ನ ಬಳಗದವರನ್ನೂ ಕರೆಯುತ್ತಾಳೆ. ರಾಮಾಚಾರಿ, ವಧು, ಲಕ್ಷ್ಮೀ ಬಾರಮ್ಮ, ಬೃಂದಾವನ ಧಾರಾವಾಹಿಯ ನಟಿಯರು ದೃಷ್ಟಿ ಜೊತೆ ಬರುತ್ತಾರೆ. ಅವರೆಲ್ಲರನ್ನೂ ನೋಡಿ ಭಾಗ್ಯಾ ಖುಷಿಯಾಗುತ್ತಾಳೆ. ಇನ್ನೂ ಅಡುಗೆ ತಯಾರಾಗದಿರುವುದನ್ನು ನೋಡಿ ಊಟ ಏರ್ಪಡಿಸಿದವರು ಸಿಟ್ಟಾಗುತ್ತಾರೆ. ನಾವು ಯಾವ ಕಾರಣಕ್ಕೂ ಭಾಗ್ಯಾಳನ್ನು ಸೋಲಿಸಲು ಬಿಡುವುದಿಲ್ಲ. ಅವಳ ಸಹಾಯಕ್ಕೆ ನಾವು ಎಂದಿಗೂ ಇರುತ್ತೇವೆ, ನೀವು ಹೇಳಿದ ಸಮಯಕ್ಕೆ ಖಂಡಿತ ಅಡುಗೆ ತಯಾರಾಗುತ್ತದೆ ಎಂದು ಭರವಸೆ ಕೊಟ್ಟು, ಭಾಗ್ಯಾ ಸ್ನೇಹಿತೆಯರು ಕೆಲಸವನ್ನೆಲ್ಲಾ ಹಂಚಿಕೊಳ್ಳುತ್ತಾರೆ. ಕೊಟ್ಟಿದ್ದ ಸಮಯಕ್ಕೆ ಸರಿಯಾಗಿ ಎಲ್ಲಾ ಅಡುಗೆ ಮಾಡಿಮುಗಿಸುತ್ತಾರೆ.
ಇನ್ನೇನು ಅಡುಗೆ ಆಗಿದೆ ನೀವೇ ಬಡಿಸಿಬಿಡಿ ಎಂದು ಊಟ ಏರ್ಪಡಿಸಿದ್ದ ವ್ಯಕ್ತಿ ಹೇಳುತ್ತಾನೆ. ಊಟ ಬಡಿಸೋಕೆ ಇವರಿಗೆಲ್ಲಾ ಹೇಗೆ ಹೇಳುವುದು ಎಂದು ಭಾಗ್ಯಾ ಮುಜುಗರಪಡುತ್ತಾಳೆ. ಆದರೆ ಭಾಗ್ಯಾ ಮನಸನ್ನು ಅರ್ಥ ಮಾಡಿಕೊಂಡಂತೆ ಸ್ನೇಹಿತೆಯರು ಅಡುಗೆ ಮಾಡಿದ್ದೀವಂತೆ ಬಡಿಸೋಕೆ ಏನು ಸಮಸ್ಯೆ, ನಡಿ ನಾವೇ ಬಡಿಸೋಣ ಎಂದು ದೇವಸ್ಥಾನಕ್ಕೆ ಬಂದವರಿಗೆ ಊಟ ಬಡಿಸುತ್ತಾರೆ. ಊಟಕ್ಕೆ ಬಂದವರು ಖುಷಿಯಿಂದ ಊಟ ಮಾಡಿ, ಅಡುಗೆ ಚೆನ್ನಾಗಿದೆ ಎಂದು ಹೇಳಿ ತೃಪ್ತಿಯಿಂದ ಹೋಗುತ್ತಾರೆ. ಅದನ್ನು ನೋಡಿ ಆ ಶ್ರೀಮಂತ ವ್ಯಕ್ತಿ ಖುಷಿಯಾಗುತ್ತಾನೆ. ಭಾಗ್ಯಾ ಕೂಡಾ ತನಗೆ ಸಹಾಯ ಮಾಡಿದ ಗೆಳತಿಯರಿಗೆ ಧನ್ಯವಾದ ಹೇಳಿ ಅವರನ್ನು ಕಳಿಸಿಕೊಡುತ್ತಾಳೆ.
ಇತ್ತ ಭಾಗ್ಯಾ ಸೋಲನ್ನು ನೋಡುವ ಆಸೆಯಿಂದ ತಾಂಡವ್, ಶ್ರೇಷ್ಠಾ ಜೊತೆ ಮನೆಗೆ ಬರುತ್ತಾನೆ. ಬರಬೇಡ ಎಂದು ಹೇಳಿದರೂ ಪದೇ ಪದೆ ತಾಂಡವ್ ಮನೆಗೆ ಬರುತ್ತಿರುವುದನ್ನು ನೋಡಿ ಧರ್ಮರಾಜ್ ಸಿಟ್ಟಾಗುತ್ತಾನೆ. ನಾನು ಕಟ್ಟಿದ ಮನೆಯನ್ನು ಒಮ್ಮೆ ಕೊನೆಯ ಬಾರಿಗೆ ನೋಡೋಣ ಅಂತ ಬಂದೆ. ಅಪ್ಪ ಇಷ್ಟೊತ್ತಿಗೆ ಬ್ಯಾಂಕ್ನವರು ಬರಬೇಕಿತ್ತಲ್ಲಾ ಇನ್ನೂ ಏಕೆ ಬಂದಿಲ್ಲ. ನಾನು ಆ ಬ್ಯಾಂಕ್ನವರ ಫೋನ್ ನಂಬರ್ ಕೇಳಬೇಕಿತ್ತು ಎಂದು ವ್ಯಂಗ್ಯವಾಡುತ್ತಾನೆ. ನನ್ನ ಸೊಸೆ ಭಾಗ್ಯಾ ಖಂಡಿತ ಏನಾದರೊಂದು ಮಾಡುತ್ತಾಳೆ. ಅವಳು ಖಂಡಿತ ಹಣ ತೆಗೆದುಕೊಂಡು ಬಂದೇ ಬರುತ್ತಾಳೆ ಎಂದು ಧರ್ಮರಾಜ್ ನಂಬಿಕೆ ವ್ಯಕ್ತಪಡಿಸುತ್ತಾರೆ. ಆದರೆ ತಾಂಡವ್ಗಂತೂ ಭಾಗ್ಯಾ ಖಂಡಿತ ಹಣ ತರುವುದಿಲ್ಲ ಎಂಬ ನಂಬಿಕೆ.
ತಂದೆ ತಾಯಿ ಮಕ್ಕಳು ಕಷ್ಟಪಡುತ್ತಿದ್ದಾರೆ ಎಂಬ ಕನಿಕರವೂ ಇಲ್ಲದೆ ತಾಂಡವ್ ಧರ್ಮರಾಜ್ ಹಾಗೂ ತನ್ಮಯ್ ಮುಂದೆ ವ್ಯಂಗ್ಯವಾಡುತ್ತಾನೆ. ಅಷ್ಟರಲ್ಲಿ ಬ್ಯಾಂಕ್ನವರು ಬರುತ್ತಾರೆ. ಮನೆಗೆ ಅತಿಥಿಗಳನ್ನು ಸ್ವಾಗತಿಸುವಂತೆ ತಾಂಡವ್ ಬನ್ನಿ ಸರ್ ಬನ್ನಿ ಎಂದು ಬ್ಯಾಂಕ್ನವರನ್ನು ಸ್ವಾಗತಿಸುತ್ತಾನೆ. ಎಲ್ಲಿ ನಿಮ್ಮ ಸೊಸೆ ಭಾಗ್ಯಾ? ಇಂದು ಹಣ ಕಟ್ಟುತ್ತೇನೆ ಎಂದು ಹೇಳಿದ್ದರಲ್ಲ ಎಂದು ಬ್ಯಾಂಕ್ನವರು ಧರ್ಮರಾಜ್ನನ್ನು ಕೇಳುತ್ತಾರೆ. ಸರ್ ಸ್ವಲ್ಪ ಸಮಯ ಕೊಡಿ, ಖಂಡಿತ ಅವಳು ಬರುತ್ತಾಳೆ ಎಂದು ಧರ್ಮರಾಜ್ ಮನವಿ ಮಾಡುತ್ತಾನೆ. ಇಲ್ಲ ನಾವು ಕೊಟ್ಟಿದ್ದ ಸಮಯ ಮುಗಿದುಹೋಯ್ತು. ಮನೆ ಸೀಜ್ ಮಾಡುತ್ತೇವೆ ಎಂದು ಬ್ಯಾಂಕ್ನವರು ಹೇಳುತ್ತಾರೆ. ಧರ್ಮರಾಜ್, ಸೊಸೆಗೆ ಫೋನ್ ಮಾಡಲು ಮುಂದಾಗುತ್ತಾನೆ. ಅಪ್ಪ ನೀವು ಮಾಡಬೇಡಿ ಬಿಡಿ, ನಾನೇ ಮಾಡುತ್ತೇನೆ ಎಂದು ತಾಂಡವ್, ಭಾಗ್ಯಾಗೆ ಕರೆ ಮಾಡುತ್ತಾನೆ.
ಅಡುಗೆ ಏನೋ ಮುಗಿಯಿತು, ಭಾಗ್ಯಾಗೆ ಹಣ ಸಿಗುತ್ತಾ? ಆ ಹಣ ತಂದು ಭಾಗ್ಯಾ ಇಎಂಐ ಕಟ್ಟಿ ಮನೆ ಬಿಡಿಸಿಕೊಳ್ಳುತ್ತಾಳಾ? ಇಂದಿನ ಎಪಿಸೋಡ್ನಲ್ಲಿ ಉತ್ತರ ದೊರೆಯಲಿದೆ.



