ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 735ರ ಎಪಿಸೋಡ್ ಕಥೆ ಇಲ್ಲಿದೆ. ಬ್ಯಾಂಕ್ನವರಿಗೆ ಹಣ ಹೊಂದಿಸಲು ಭಾಗ್ಯಾ ಅಡುಗೆ ಕಾಂಟ್ರಾಕ್ಟ್ ಸಿಕ್ಕಿದೆ. ಭಾಗ್ಯಾಗೆ ಸಹಾಯ ಮಾಡಲು ಬಂದ ಕುಸುಮಾ ಕಾಲಿಗೆ ಬಿಸಿನೀರು ಚೆಲ್ಲಿ ಪೂಜಾ ಜೊತೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾಳೆ. ಭಾಗ್ಯಾ ಒಬ್ಬಳಿಂದಲೇ ಅಡುಗೆ ಮಾಡಲು ಸಾಧ್ಯವಾಗದ ಕಾರಣ ಅವಳು ದೃಷ್ಟಿಗೆ ಕರೆ ಮಾಡಿ ಸಹಾಯಕ್ಕೆ ಕರೆಯುತ್ತಾಳೆ. ಇರುವ ಸಮಯದಲ್ಲಿ ಬೇಗ ಅಡುಗೆ ಮಾಡಿಮುಗಿಸಲು ದೃಷ್ಟಿ, ತನ್ನ ಆತ್ಮೀಯರಿಗೆ ಕರೆ ಮಾಡಿ ಅವರೆಲ್ಲರ ಜೊತೆ ಭಾಗ್ಯಾ ಹೇಳಿದ್ದ ಸ್ಥಳಕ್ಕೆ ಬರುತ್ತಾರೆ.
ಎಲ್ಲರೂ ಒಟ್ಟಿಗೆ ಸೇರಿ ಸರಿಯಾದ ಸಮಯಕ್ಕೆ ಅಡುಗೆ ಮಾಡಿ ಮುಗಿಸುತ್ತಾರೆ. ದೇವಸ್ಥಾನಕ್ಕೆ ಬಂದವರಿಗೆ ಎಲ್ಲರೂ ಸೇರಿ ಊಟ ಬಡಿಸುತ್ತಾರೆ. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಖುಷಿಯಾಗುತ್ತಾರೆ. ತನಗೆ ಸಹಾಯ ಮಾಡಿದವರಿಗೆ ಭಾಗ್ಯಾ ಧನ್ಯವಾದ ಅರ್ಪಿಸಿ ಕಳಿಸಿಕೊಡುತ್ತಾಳೆ. ಹಣ ಹೊಂದಿಸಲು ಶಕ್ತಿ ನೀಡಿ ಹಾರೈಸಿದ ದೇವರಿಗೂ ಭಾಗ್ಯಾ ಧನ್ಯವಾದ ಹೇಳುತ್ತಾಳೆ. ಊಟ ಏರ್ಪಡಿಸಿದ್ದ ವ್ಯಕ್ತಿ ಬಳಿ ಹಣ ಕೇಳಲು ಭಾಗ್ಯಾ ಕಾದು ನಿಲ್ಲುತ್ತಾಳೆ. ಸ್ವಲ್ಪ ಸಮಯದ ನಂತರ ಆತ ಬಂದು, ಎಲ್ಲರೂ ಊಟ ಚೆನ್ನಾಗಿತ್ತು ಎಂದು ಹೊಗಳುತ್ತಿದ್ದರು, ನೀನು ನನ್ನ ಮರ್ಯಾದೆ ಉಳಿಸಿದೆ, ಇನ್ಮುಂದೆ ನನ್ನ ಮನೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ನೀನೇ ಅಡುಗೆ ಮಾಡಬೇಕು ಎನ್ನುತ್ತಾನೆ. ಅದನ್ನು ಕೇಳಿ ಭಾಗ್ಯಾ ಖುಷಿಯಾಗುತ್ತಾಳೆ. ನೀವು ಕೂಡಾ ನನಗೆ ಕೆಲಸ ಕೊಟ್ಟು ಬಹಳ ಸಹಾಯ ಮಾಡಿದಿರಿ, ನನಗೆ ತಡವಾಯ್ತು ನೀವು ಹಣ ಕೊಟ್ಟರೆ ನಾನು ಹೋಗುತ್ತೇನೆ ಎನ್ನುತ್ತಾಳೆ.
ಗಡಿಬಿಡಿಯಲ್ಲಿ ಮರೆತೆ, ಹಣ ನೀಡಲು ಕೆಲಸದವನ ಬಳಿ ಹೇಳುತ್ತೇನೆ, ಅವನ ಬಳಿ ತೆಗೆದುಕೋ ಎಂದು ಹೇಳಿ ಆತ ಅಲ್ಲಿಂದ ಹೋಗುತ್ತಾನೆ. ಆತನ ಸಹಾಯಕ ಬಂದು ಭಾಗ್ಯಾಗೆ ಹಣ ನೀಡುತ್ತಾನೆ. ಭಾಗ್ಯಾ ಖುಷಿಯಿಂದ ಹಣ ಪಡೆಯುತ್ತಾಳೆ. ಇದರಲ್ಲಿ ಎಷ್ಟು ಹಣ ಇದೆ ಕೇಳುತ್ತಾಳೆ. 32 ಸಾವಿರ ಇದೆ ಎಂದಾಗ ಶಾಕ್ ಆಗುತ್ತಾಳೆ. ನೀವು ಆಗಲೇ 50 ಸಾವಿರ ಎಂದು ಮಾತನಾಡುತ್ತಿದ್ದೀರಿ ಎಂದು ಭಾಗ್ಯಾ ಕೇಳುತ್ತಾಳೆ. ಸಾಮಗ್ರಿಗಳನ್ನು ಅವರೇ ತರಬೇಕಿದ್ದರಿಂದ ಅವರಿಗೆ 50 ಸಾವಿರ ಎಂದು ಹೇಳಿದ್ದೆವು, ಆದರೆ ಇಲ್ಲಿ ನಾವೇ ನಿಮಗೆ ಎಲ್ಲಾ ಸಾಮಗ್ರಿಗಳನ್ನು ತಂದುಕೊಟ್ಟಿದ್ದೀವಲ್ಲ, ಮತ್ತೇನು? ನಿಮಗೆ ಈ ಹಣ ಬೇಡವೆಂದರೆ ವಾಪಸ್ ಕೊಡಿ ಅಣ್ಣನಿಗೆ ಈಗಲೇ ವಾಪಸ್ ಕೊಡುತ್ತೇನೆ ಎನ್ನುತ್ತಾನೆ. ಪರವಾಗಿಲ್ಲ ಅಣ್ಣ ಎಂದು ಭಾಗ್ಯಾ ಹಣ ಪಡೆಯುತ್ತಾಳೆ.
ಇತ್ತ ತಾಂಡವ್ ಪದೇ ಪದೆ ಮನೆಯವರನ್ನು ಹೀಯಾಳಿಸುತ್ತಲೇ ಇರುತ್ತಾನೆ. ನಿಮ್ಮ ಸೊಸೆ ಯಾವುದೇ ಕಾರಣಕ್ಕೂ ಹಣ ಹೊಂದಿಸುವುದಿಲ್ಲ. ಮನೆ ಸೀಜ್ ಆಗುವುದು ಖಂಡಿತ ಇರಿ ನಾನೇ ಅವಳಿಗೆ ಕಾಲ್ ಮಾಡುತ್ತೇನೆ ಎಂದು ಭಾಗ್ಯಾಗೆ ಕರೆ ಮಾಡುತ್ತಾನೆ. ಭಾಗ್ಯಾ ಇಷ್ಟವಿಲ್ಲದಿದ್ದರೂ ತಾಂಡವ್ ಕಾಲ್ ರಿಸೀವ್ ಮಾಡುತ್ತಾಳೆ. ಏನು ಭಾಗ್ಯಾ ಮೇಡಂ ಕಾಲ್ ಮಾಡುತ್ತಿದ್ದಂತೆ ಪಟ್ ಅಂತ ಫೋನ್ ರಿಸೀವ್ ಮಾಡಿದಿರಿ, ಹಾಗಾದರೆ ಏನೂ ಕೆಲಸ ಇಲ್ಲದೆ ಸುಮ್ಮನೆ ಕೂತಿದ್ದೀರಿ ಎಂದು ಅರ್ಥ ತಾನೇ ಎಂದು ವ್ಯಂಗ್ಯವಾಡುತ್ತಾನೆ. ಇಲ್ಲಿ ಬ್ಯಾಂಕ್ನವರು ಬಂದು ಕುಳಿತಿದ್ದಾರೆ ಅವರಿಗೆ ಏನು ಹೇಳುವುದು? ಪರವಾಗಿಲ್ಲ ಸೀಜ್ ಮಾಡಿ ಅಂತ ಹೇಳೋದಾ ಎಂದು ಕೇಳುತ್ತಾನೆ. ಅಷ್ಟರಲ್ಲಿ ಬ್ಯಾಂಕ್ನವರು ಭಾಗ್ಯಾ ಜೊತೆ ಮಾತನಾಡಬೇಕು ಫೋನ್ ಕೊಡಿ ಎಂದು ಕೇಳುತ್ತಾರೆ. ನಾನು ಹಣ ತೆಗೆದುಕೊಂಡು ಮನೆ ಬಳಿ ಬರುತ್ತಿದ್ದೇನೆ ದಯವಿಟ್ಟು ಇನ್ನು ಅರ್ಧ ಗಂಟೆ ಸಮಯ ಕೊಡಿ ಎಂದು ಭಾಗ್ಯಾ ಮನವಿ ಮಾಡುತ್ತಾಳೆ.
ಅಷ್ಟರಲ್ಲಿ ಕುಸುಮಾ ಮನೆಗೆ ಬರುತ್ತಾಳೆ. ಕುಸುಮಾ ಕುಂಟುವುದನ್ನು ನೋಡಿ ತಾಂಡವ್ ಅಮ್ಮನ ಮೇಲೆ ಬಹಳ ಕಾಳಜಿ ಇರುವಂತೆ ಏನಾಯ್ತು ಅಮ್ಮ? ನಿನ್ನ ಸೊಸೆಯನ್ನು ನಂಬಿಕೊಂಡು ಹೀಗೆಲ್ಲಾ ಮಾಡಿಕೊಂಡಿದ್ದೀಯ, ಸುಮ್ಮನೆ ನನ್ನ ಜೊತೆ ಬಂದುಬಿಡು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎನ್ನುತ್ತಾನೆ. ನಿನ್ನ ಜೊತೆ ಖಂಡಿತ ಬರುವುದಿಲ್ಲ, ಮಾಡುವುದು ಮಾಡಿ ಈಗ ನಮ್ಮ ಮೇಲೆ ಕಾಳಜಿ ಇರುವಂತೆ ನಾಟಕ ಮಾಡುತ್ತಿದ್ದೀಯ, ನಾವು ನಮ್ಮ ಸೊಸೆ ಭಾಗ್ಯಾ ಜೊತೆಯೇ ಇರುತ್ತೇವೆ, ಅವಳು ಹೇಳಿದಂತೆ ಕೇಳುತ್ತೇವೆ ಎನ್ನುತ್ತಾಳೆ. ಅಮ್ಮನ ಮಾತನ್ನು ಕೇಳಿ ತಾಂಡವ್ ಸಿಟ್ಟಾಗುತ್ತಾನೆ. ಸರಿ ಹಾಗಾದರೆ ನಿಮ್ಮ ಸೊಸೆ ಜೊತೆ ಮನೆ ಬಿಟ್ಟು ಹೋಗಲು ಸಿದ್ದರಾಗಿ ಎಂದು ಹೇಳುತ್ತಾನೆ.
ಪೂಜಾ, ಅಕ್ಕ ಭಾಗ್ಯಾಗೆ ಕರೆ ಮಾಡಿ ಎಲ್ಲಿದೀಯ ಎಂದು ಕೇಳುತ್ತಾಳೆ. ಭಾಗ್ಯಾ ನಡೆದ ವಿಚಾರವನ್ನು ಹೇಳುತ್ತಾಳೆ. ಪೂರ್ತಿ ಹಣ ಅಡ್ಜೆಸ್ಟ್ ಆಗದ ವಿಚಾರವನ್ನು ಪೂಜಾ, ಕುಸುಮಾ ಬಳಿ ಹೇಳುತ್ತಾಳೆ. ಅದನ್ನು ಕೇಳಿ ತಾಂಡವ್ ಶ್ರೇಷ್ಠಾ ಖುಷಿಯಾಗುತ್ತಾರೆ. 40 ಸಾವಿರಕ್ಕಿಂತ ಒಂದು ಪೈಸೆ ಕಡಿಮೆ ಇದ್ದರೂ ನಾವು ಹಣ ತೆಗೆದುಕೊಳ್ಳುವುದಿಲ್ಲ. ಮನೆ ಸೀಜ್ ಮಾಡುತ್ತೇವೆ ಎಂದು ಬ್ಯಾಂಕ್ನವರು ಹೇಳುತ್ತಾರೆ. ಹೀಗೆ ಸ್ವಲ್ಪ ಸಮಯ ಕಳೆಯುತ್ತದೆ. ತಾಂಡವ್ ಅಂತೂ ಮನೆ ಸೀಜ್ ಆಗಿ ಎಲ್ಲರೂ ಹೊರಗೆ ಹೋಗುವುದನ್ನು ನೋಡಲು ಕಾಯುತ್ತಿರುತ್ತಾನೆ.
ಸರ್, ನೀವು ಕೊಟ್ಟ ಸಮಯ ಮುಗಿಯಿತಲ್ಲ, ನೀವಿನ್ನು ಮನೆ ಸೀಜ್ ಮಾಡಬಹುದು ಎಂದು ತಾಂಡವ್ ಬ್ಯಾಂಕ್ನವರ ಬಳಿ ಹೇಳುತ್ತಾನೆ. ಹೌದು , ಟೈಮ್ ಆಯ್ತು ಎಲ್ಲರೂ ಮನೆಯಿಂದ ಹೊರ ಹೋಗಿ, ನೀವೆಲ್ಲಾ ಸಹಕರಿಸಬೇಕು, ಇಲ್ಲದಿದ್ದರೆ ಪೊಲೀಸರನ್ನು ಕರೆಸುತ್ತೇವೆ ಎಂದು ಎಚ್ಚರಿಸುತ್ತಾರೆ. ಸುನಂದಾ ಕೂಡಾ ಅಲ್ಲಿಗೆ ಬರುತ್ತಾಳೆ. ನನ್ನ ಮಗಳು ಮನೆ ಸೀಜ್ ಆಗಲು ಬಿಡುವುದಿಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬರುತ್ತಾಳೆ. ಬ್ಯಾಂಕ್ನವರಿಗೆ ನಮಸ್ಕರಿಸಿ ಬ್ಯಾಗ್ನಿಂದ ದುಡ್ಡು ತೆಗೆದುಕೊಡುತ್ತಾಳೆ. ನಿಮ್ಮ ಮಗಳು ಪೂರ್ತಿ ದುಡ್ಡು ತಂದಿಲ್ಲ. ಕೊನೆಗೂ ಮನೆ ಉಳಿಸಿಕೊಳ್ಳಲು ನಾನೇ ಬರಬೇಕಿತ್ತು, ಮನೆಗೆ ನಾನೇ ದುಡ್ಡು ಕೊಡುತ್ತೇನೆ. ಆದರೆ ಭಾಗ್ಯಾ ನನ್ನ ಮುಂದೆ ಮಂಡಿ ಊರಿ ಕ್ಷಮೆ ಕೇಳಬೇಕು ಎಂದು ತಾಂಡವ್ ದರ್ಪದಿಂದ ಹೇಳುತ್ತಾನೆ. ನನ್ನ ಸೊಸೆ ಅದನ್ನೆಲ್ಲಾ ಮಾಡುವುದಿಲ್ಲ, ಅವಳು ಪೂರ್ತಿ ಹಣ ಹೊಂದಿಸಿರುತ್ತಾಳೆ ಎಂದು ಧರ್ಮರಾಜ್ ಹೇಳುತ್ತಾನೆ. ಅಲ್ಲಿ ಇರುವುದೇ 32 ಸಾವಿರ ತಾನೇ ಅದನ್ನು ಏನು ಎಣಿಸುತ್ತೀರ, ಮನೆ ಸೀಜ್ ಮಾಡಿ ಎಂದು ತಾಂಡವ್ ಆತುರಬಿದ್ದವನಂತೆ ಹೇಳುತ್ತಾನೆ. ಮನೆ ಸೀಜ್ ಮಾಡಲು ಆಗುವುದಿಲ್ಲ, ಹಣ ಸರಿಯಾಗಿದೆ ಎಂದು ಬ್ಯಾಂಕ್ನವರು ಹೇಳುತ್ತಾರೆ. ಅದನ್ನು ಕೇಳಿ ತಾಂಡವ್-ಶ್ರೇಷ್ಠಾ ಶಾಕ್ ಆಗುತ್ತಾರೆ. ಏನೂ ಮಾತನಾಡದೆ ತಾಂಡವ್ ಸುಮ್ಮನಾಗುತ್ತಾನೆ.
ಏನು ತಾಂಡವ್ ಅವರೇ, ಇಷ್ಟು ಹೊತ್ತು ಅದು ಇದು ಮಾತನಾಡುತ್ತಿದ್ದಿರಿ ಈಗ ಏನಾಯ್ತು? ನಾನು ಹಣ ಹೊಂದಿಸಿದ್ದನ್ನು ನೋಡಿ ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲವಾ ಎಂದು ಭಾಗ್ಯಾ ನಗುತ್ತಾ ಪ್ರಶ್ನಿಸುತ್ತಾಳೆ. ಭಾಗ್ಯಾ ಮಾತಿಗೆ ತಾಂಡವ್ ಏನೂ ಉತ್ತರಿಸದೆ ಪೆಚ್ಚು ಮೋರಿ ಹಾಕಿ ನಿಲ್ಲುತ್ತಾನೆ. ಕೊನೆಗೂ ಸೊಸೆ ಗೆದ್ದಿದ್ದನ್ನು ಕಂಡು ಕುಸುಮಾ, ಧರ್ಮರಾಜ್ ಖುಷಿಯಾಗುತ್ತಾರೆ.