ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 725ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾಳಿಂದ ಒದೆ ತಿಂದ ಶ್ರೇಷ್ಠಾ, ಹೇಗಾದರೂ ಮಾಡಿ ನಾನು ತಾಂಡವ್ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳಲೇಬೇಕು. ನಾನು ಅವನ ಹೆಂಡತಿ ಎನಿಸಿಕೊಳ್ಳಬೇಕು ಎಂದು ಅವನ ಕಾಲಿಗೆ ಬಿದ್ದು ಮನವಿ ಮಾಡುತ್ತಾಳೆ. ನಾನು ನಿನಗಾಗಿ ಎಷ್ಟೆಲ್ಲಾ ತ್ಯಾಗ ಮಾಡಿದ್ದೇನೆ. ನನ್ನ ತ್ಯಾಗಕ್ಕೆ ನೀನು ನೀಡುತ್ತಿರುವ ಬೆಲೆ ಏನು? ಎಷ್ಟು ದಿನ ನಾನು ಜನರಿಂದ ಮಾತು ಕೇಳುವುದು, ದಯವಿಟ್ಟು ನನ್ನನ್ನು ಮದುವೆ ಆಗು ಎಂದು ಕಣ್ಣೀರಿಡುತ್ತಾಳೆ. ಶ್ರೇಷ್ಠಾ ಅಳುವುದನ್ನು ನೋಡಿ ತಾಂಡವ್, ಮದುವೆಗೆ ಒಪ್ಪುತ್ತಾನೆ.
ಹೌದು ಹನಿ, ನೀನು ನನಗಾಗಿ ಬಹಳ ತ್ಯಾಗ ಮಾಡಿದ್ದೀಯ, ಎಲ್ಲರನ್ನೂ ಬಿಟ್ಟು ಬಂದಿದ್ದೀಯ, ನಿನಗಾಗಿ ನಾನು ಏನು ಮಾಡಿದರೂ ಕಡಿಮೆಯೇ, ಸರಿ ನಿನ್ನಿಷ್ಟದಂತೆ ನಾವಿಬ್ಬರೂ ಮದುವೆ ಆಗೋಣ ಎನ್ನುತ್ತಾನೆ. ತಾಂಡವ್ ಮಾತು ಕೇಳಿ ಶ್ರೇಷ್ಠಾ ಖುಷಿಯಾಗುತ್ತಾಳೆ. ಮುಹೂರ್ತಕ್ಕೆ ಟೈಮ್ ಆಯ್ತು ಹೋಗೋಣ ಬಾ ಎಂದು ಮದುವೆ ಮಂಟಪದ ಬಳಿ ಬರುತ್ತಾಳೆ. ಇವರಿಬ್ಬರ ಮಾತನ್ನು ಸುಂದ್ರಿ ಕೇಳಿಸಿಕೊಂಡು ಶಾಕ್ ಆಗುತ್ತಾಳೆ. ಕೂಡಲೇ ವಿಚಾರವನ್ನು ಕುಸುಮಾಗೆ ತಿಳಿಸುತ್ತಾಳೆ. ಕುಸುಮಾ, ಸೊಸೆ ಭಾಗ್ಯಾಗೆ ಕರೆ ಮಾಡುತ್ತಾಳೆ. ಆದರೆ ಅವಳು ಕೆಲಸದಲ್ಲಿ ಬ್ಯುಸಿ ಇರುತ್ತಾಳೆ. ಪದೇ ಪದೆ ಫೋನ್ ರಿಂಗ್ ಆಗುವುದನ್ನು ನೋಡಿ ಭಾಗ್ಯಾ ಸಹೋದ್ಯೋಗಿ ಫೋನ್ ರಿಸೀವ್ ಮಾಡುತ್ತಾಳೆ. ನಾನು ಅರ್ಜೆಂಟಾಗಿ ಭಾಗ್ಯಾಗೆ ಒಂದು ವಿಚಾರ ತಿಳಿಸಬೇಕು, ಇದು ಅವಳ ಜೀವನದ ಪ್ರಶ್ನೆ ದಯವಿಟ್ಟು ಅವಳಿಗೆ ಫೋನ್ ಮಾಡಲು ಹೇಳು ಎಂದು ಮನವಿ ಮಾಡುತ್ತಾಳೆ.
ಆ ಯುವತಿ ಭಾಗ್ಯಾಗೆ ಫೋನ್ ಕೊಟ್ಟು ವಿಚಾರ ಮುಟ್ಟಿಸುತ್ತಾಳೆ. ಕೆಲಸದ ನಡುವೆ ನಾನು ಎಲ್ಲೂ ಬರಲು ಆಗುವುದಿಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ಇದು ನಿನ್ನ ಜೀವನದ ಪ್ರಶ್ನೆ, ಈಗ ಕೆಲಸ ಮುಖ್ಯ ಅಲ್ಲ, ನೀನು ಆದಷ್ಟು ಬೇಗ ದೇವಸ್ಥಾನಕ್ಕೆ ಬಾ ಎಂದು ಅಡ್ರೆಸ್ ತಿಳಿಸುತ್ತಾಳೆ. ಅತ್ತೆ ಗಾಬರಿಯಾಗಿದ್ದಾರೆ ಏನೋ ವಿಚಾರ ಇರಬೇಕು, ನಾನು ತಡ ಮಾಡುವುದು ಸರಿಯಲ್ಲ, ಹೋಗಲೇಬೇಕು ಎಂದುಕೊಂಡು ಡ್ರೆಸ್ ಬದಲಿಸಿ ಅಲ್ಲಿಂದ ಹೊರಡುತ್ತಾಳೆ. ರೆಸಾರ್ಟ್ ಓನರ್ ಭಾಗ್ಯಾಗೆ ಎದುರಾಗುತ್ತಾನೆ. ಇಲ್ಲಿಂದ ಓಡಿ ಹೋಗುವ ಪ್ಲ್ಯಾನ್ ಇದೆಯಾ ಹೇಗೆ? ನಿನ್ನೆ ಬರ್ತ್ಡೇ, ಇಂದು ಇನ್ನೊಂದು ಕಾರಣ ಹೇಳುತ್ತಿದ್ದೀಯ? ನಿನಗೆ ಅತ್ತೆ ಮಾತೇ ಹೆಚ್ಚಾಯ್ತಾ ಎಂದು ಕೇಳುತ್ತಾನೆ. ಹೌದು ನನಗೆ ಅತ್ತೆ ಮಾತೇ ಹೆಚ್ಚು, ನಾನು ಹೋಗಲೇಬೇಕು, ನನ್ನ ಮಾತಿನಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಭಾಗ್ಯಾ ವರ್ತನೆಗೆ ಓನರ್ ಸಿಟ್ಟಾಗುತ್ತಾನೆ.
ಇತ್ತ ಶ್ರೇಷ್ಠಾ ಮದುವೆ ಮಂಟಪಕ್ಕೆ ಬರುವಾಗ ಎಡವಿ ಬೀಳುತ್ತಾಳೆ. ಮದುವೆಗೂ ಮುನ್ನ ಹೀಗೆ ಎಡವಿ ಬೀಳಬಾರದು ಅದು ಅಪಶಕುನ ಎಂದು ಪುರೋಹಿತರು ಹೇಳುತ್ತಾರೆ. ಹಾಗೆಲ್ಲಾ ಏನೂ ಆಗುವುದಿಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ಶಾಸ್ತ್ರಗಳು ಮುಗಿದು ತಾಳಿ ಕಟ್ಟುವ ಸಮಯದಲ್ಲಿ ಶ್ರೇಷ್ಠಾ ಬಹಳ ಖುಷಿಯಾಗುತ್ತಾಳೆ. ಇಂದು ನನಗೆ ಬಹಳ ಖುಷಿಯಾಗುತ್ತಿದೆ, ಇಂದು ನಮ್ಮ ಮದುವೆಯನ್ನು ತಡೆಯೋರು ಯಾರೂ ಇಲ್ಲ ಎನ್ನುತ್ತಾಳೆ. ಹಾಗೆಂದುಕೊಂಡು ಎದುರು ನೋಡಿದರೆ ಅಲ್ಲಿ ಭಾಗ್ಯಾ ಬಂದು ನಿಂತಿರುತ್ತಾಳೆ. ಅವಳನ್ನು ನೋಡಿ ತಾಂಡವ್ ಶಾಕ್ ಆಗಿ ತಾಳಿಯನ್ನು ಕೆಳಗೆ ಬೀಳಿಸುತ್ತಾನೆ. ಶ್ರೇಷ್ಠಾ ಕೂಡಾ ಗಾಬರಿಯಿಂದ ಎದ್ದು ನಿಲ್ಲುತ್ತಾಳೆ. ಭಾಗ್ಯಾ ಇಲ್ಲಿ ಬರುವಷ್ಟರಲ್ಲಿ ನನಗೆ ತಾಳಿ ಕಟ್ಟಿಬಿಡು ಎಂದು ಶ್ರೇಷ್ಠಾ ಹೇಳುತ್ತಾಳೆ. ಆದರೆ ತಾಂಡವ್ ಭಾಗ್ಯಾ ನೋಡಿದ ಶಾಕ್ನಲ್ಲಿರುತ್ತಾನೆ.
ನಿನಗೆ ಯಾರು ಹೇಳಿದ್ದು? ಇಲ್ಲಿಗೆ ಏಕೆ ಬಂದೆ? ಇಂದು ನಾನು ಮದುವೆ ಆಗುವುದನ್ನು ನೀನು ತಡೆಯಲು ಸಾಧ್ಯವೇ ಇಲ್ಲ ಇಲ್ಲಿಂದ ಹೋದರೆ ಸರಿ ಇಲ್ಲವಾದರೆ ನಾನು ಸುಮ್ಮನಿರುವುದಿಲ್ಲ ಎನ್ನುತ್ತಾನೆ. ನೀವು ಮದುವೆ ಆಗುತ್ತಿದ್ದೀರ ಎಂಬ ವಿಚಾರವೇ ನನಗೆ ಗೊತ್ತಿಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ನೀನು ಏನೇ ಹೇಳಿದರೂ ನಾನು ಮದುವೆ ಆಗಿಯೇ ತೀರುತ್ತೇನೆ, ಯಾರೂ ತಡೆಯಲು ಸಾಧ್ಯವಿಲ್ಲ ಎನ್ನುತ್ತಾನೆ. ನಾನು ತಡೆಯುತ್ತೇನೆ ಎಂದು ಕುಸುಮಾ ಅಲ್ಲಿಗೆ ಬರುತ್ತಾಳೆ. ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾಳೆ. ತಾಂಡವ್ ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ಯುತ್ತಾಳೆ. ಆದರೆ ಕುಸುಮಾಳನ್ನು ಭಾಗ್ಯಾ ತಡೆಯುತ್ತಾಳೆ. ಈ ಮದುವೆ ತಡೆಯುವುದು ಬೇಡ ಎನ್ನುತ್ತಾಳೆ.
ಇಷ್ಟು ದಿನ ನಾವು ಇವರ ಮದುವೆ ತಡೆಯಲು ಎಷ್ಟೆಲ್ಲಾ ಪ್ರಯತ್ನಿಸಿದ್ದೇವೆ. ಇದು ಮರ್ಯಾದೆ ಇರುವವರು ಮಾಡುವ ಕೆಲಸವಲ್ಲ ಎಂದು ತಿಳಿ ಹೇಳಿದ್ದೇವೆ. ಪೋಲೀಸರನ್ನು ಕರೆದು ಬುದ್ಧಿ ಹೇಳಿಸಿದ್ದೇವೆ. ಮಕ್ಕಳು ಕಣ್ಣೀರಿಟ್ಟು ಕೇಳಿಕೊಂಡರೂ ಇವರು ಕರಗಲಿಲ್ಲ. ಅಪ್ಪ ಅಮ್ಮನೇ ಸರ್ವಸ್ವ ಎನ್ನುತ್ತಿದ್ದವರು ಈಗ ನಿಮ್ಮ ಮಾತಿಗೂ ಬೆಲೆ ನೀಡದೆ ಶ್ರೇಷ್ಠಾಳನ್ನು ಮದುವೆ ಆಗಲು ಹೊರಟಿದ್ದಾರೆ. ಬಲವಂತದ ಸಂಬಂಧ ಬಹಳ ದಿನ ಇರುವುದಿಲ್ಲ. ನೀವು ಈಗ ತಡೆದರೂ ಇವರು ಮತ್ತೊಮ್ಮೆ ಇದೇ ಕೆಲಸ ಮಾಡುತ್ತಾರೆ. ಇವರಿಗೆ ಬೇಡದ ಸಂಬಂಧ ನನಗೂ ಬೇಡ, ಈ ತಾಳಿ ನನಗೆ ಭಾರ ಎನಿಸುತ್ತಿದೆ. ಇದನ್ನು ಕಟ್ಟಿದವರ ಮುಂದೆಯೇ ತೆಗೆದುಬಿಡುತ್ತಿದ್ದೇನೆ ಎಂದು ತಾಳಿ ತೆಗೆಯಲು ಪ್ರಯತ್ನಿಸುತ್ತಾಳೆ. ಆದರೆ ಹಳೆಯದೆಲ್ಲಾ ನೆನಪಿಗೆ ಬಂದು ಕಣ್ಣೀರಿಡುತ್ತಾಳೆ. ಇಷ್ಟು ದಿನ ನಾನು ಮಗನ ಜೀವನ ಸರಿ ಆಗಲಿ ಎಂದುಕೊಂಡು ಮದುವೆ ತಡೆಯುವ ಪ್ರಯತ್ನ ಮಾಡುತ್ತಿದ್ದೆ, ಆದರೆ ಆ ಭರದಲ್ಲಿ ಸೊಸೆ ಜೀವನ ಹಾಳು ಮಾಡುತ್ತಿದ್ದೇನೆ ಎಂಬ ಪರಿಜ್ಞಾನ ಇರಲಿಲ್ಲ. ನೀನು ಇವನ ಜೀವನದಿಂದ ಹೊರ ಹೋದರೆ ಇವರ ಅವನತಿ ಆಗುವುದು ಖಂಡಿತ, ಆದರೆ ಅದನ್ನು ಇವನು ಅನುಭವಿಸಲೇಬೇಕು ಎಂದಾದರೆ ನಾನು ತಡೆಯಲು ಬರುವುದಲ್ಲ. ಧೈರ್ಯ ಮಾಡಿ ತಾಳಿ ತೆಗೆದುಬಿಡು ಮಗಳೇ ಎನ್ನುತ್ತಾಳೆ. ಅಮ್ಮನ ಮಾತು ಕೇಳಿ ತಾಂಡವ್ ಕೂಡಾ ಶಾಕ್ ಆಗುತ್ತಾನೆ.
ಅತ್ತೆ ಹೇಳಿದಂತೆ ಭಾಗ್ಯಾ ತಾಳಿ ತೆಗೆಯುತ್ತಾಳಾ? ಎಲ್ಲಾ ಅಡ್ಡಿ ಆತಂಕಗಳು ಕಳೆಯಿತು ಎಂದು ಖುಷಿಯಾಗಿ ತಾಂಡವ್-ಶ್ರೇಷ್ಠಾ ಮದುವೆ ಆಗುತ್ತಾರಾ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.