ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಗುರಿ ಇರುತ್ತದೆ, ಕನಸು ಇರುತ್ತದೆ. ಆ ಕನಸನ್ನು ನನಸಾಗಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡುತ್ತಾರೆ. ಒಂದು ವೇಳೆ ಅದು ಕೈಗೂಡಿದರೆ ಅದರಿಂದ ದೊರೆಯುವ ಖುಷಿ, ಕೋಟಿ ಕೊಟ್ಟರೂ ದೊರೆಯುವುದಿಲ್ಲ. ಖ್ಯಾತ ಕಿರುತೆರೆ ನಟಿ, ನಿರೂಪಕಿ ಸುಷ್ಮಾರಾವ್ ಕೂಡಾ ಈಗ ತಮ್ಮ ಬಹುದಿನಗಳ ಆಸೆಯೊಂದನ್ನು ನನಸಾಗಿಸಿಕೊಳ್ಳಲು ಹೊರಟಿದ್ದಾರೆ. ಅವರ ಕನಸು ಏನು? ಅದಕ್ಕಾಗಿ ಅವರು ಎಲ್ಲಿಗೆ ಹೋಗುತ್ತಿದ್ದಾರೆ? ಇಲ್ಲಿದೆ ವಿವರ.
ಸುಷ್ಮಾ ರಾವ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾಯಕಿ ಭಾಗ್ಯಾ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿ ಆರಂಭವಾದಾಗಿನಿಂದ ಇಲ್ಲಿವರೆಗೂ ವೀಕ್ಷಕರ ಮೆಚ್ಚುಗೆ ಗಳಿಸಿದೆ. ನಾಯಕಿ ಭಾಗ್ಯಾ ಹೆಚ್ಚು ಓದಿಲ್ಲದಿದ್ದರೂ ಎಲ್ಲಾ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ನಿರ್ವಹಿಸುವ, ಅತ್ತೆ ಮಾವ ಎಂದರೆ ಹೆತ್ತವರಂತೆ ನೋಡಿಕೊಳ್ಳುವ, ತನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುವವರನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಹೆಣ್ಣುಮಗಳು. ಭಾಗ್ಯಾ ಪಾತ್ರ ಬಹುತೇಕ ಹೆಣ್ಣುಮಕ್ಕಳಿಗೆ ಮಾದರಿ. ಇಂಥಹ ಒಂದು ಪಾತ್ರವನ್ನು ನಿಭಾಯಿಸುತ್ತಿರುವ ಸುಷ್ಮಾರಾವ್, ಮೌಂಟ್ ಎವರೆಸ್ಟ್ ಏರುವ ತಮ್ಮ ಬಹಳ ವರ್ಷಗಳ ಕನಸನ್ನು ನನಸಾಗಿಸಿಕೊಳ್ಳಲು ಹೊರಟಿದ್ದಾರೆ.

ಈ ವಿಚಾರವನ್ನು ಸ್ವತ: ಸುಷ್ಮಾರಾವ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ನಾನು ಈಗ ಏರ್ಪೋರ್ಟ್ಗೆ ಹೊರಟಿದ್ದೇನೆ, ಮೌಂಟ್ ಎವರೆಸ್ಟ್ ಏರುವ ನನ್ನ ಹಲವಾರು ವರ್ಷಗಳ ಆಸೆ ಇನ್ನೂ ಹಾಗೇ ಇದೆ. ಅದಕ್ಕೆ ನಾನು ಮೊದಲು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಹೋಗುತ್ತಿದ್ದೇನೆ. ಎವರೆಸ್ಟ್ ಏರಲು ನನಗೆ ಯೋಗ್ಯತೆ ಇದೆಯಾ ಅನ್ನೋದು ಅಲ್ಲಿ ಗೊತ್ತಾಗುತ್ತದೆ. ಶೂಟಿಂಗ್ನಿಂದ ಇಷ್ಟು ದಿನಗಳು ರಜೆ ದೊರೆಯುವುದು ಬಹಳ ಕಷ್ಟ. ಆದರೆ ನಾನು ನನ್ನ ಭಾಗದ ಚಿತ್ರೀಕರಣವನ್ನು ಮುಗಿಸಿ ಬಂದಿದ್ದೇನೆ, ಸಾಕಷ್ಟು ಬ್ಯಾಂಕಿಂಗ್ ಎಪಿಸೋಡ್ಗಳು ತಂಡದ ಬಳಿ ಇದೆ. ನಾನು ಇಲ್ಲಿಂದ ಕಠ್ಮಂಡುವಿಗೆ ತೆರಳಿ ಅಲ್ಲಿಂದ ರಾಮೇಚಾಪ್ ಮುಖಾಂತರ ಲೂಕ್ಲಾಗೆ ಹೋಗಿ ಅಲ್ಲಿಂದ ಟ್ರೆಕ್ಕಿಂಗ್ ಹೋಗುತ್ತೇನೆ.
ನಾನು ಇಲ್ಲಿಂದ ಒಬ್ಬಳೇ ಹೋಗುತ್ತಿದ್ದೇನೆ, ಅಲ್ಲಿ ಯಾರಾದರೂ ಪರಿಚಯವಾಗುತ್ತಾರಾ ನೋಡಬೇಕು, ಶೂಟಿಂಗ್ ಬ್ಯುಸಿಯಲ್ಲಿ ನನಗೆ ಪ್ಯಾಕಿಂಗ್ ಮಾಡಲು ಸಮಯವೇ ಇರಲಿಲ್ಲ. ಆದರೆ ಮನೆಯಲ್ಲಿ ಎಲ್ಲರೂ ಬಹಳ ಸಪೋರ್ಟ್ ಮಾಡಿದರು. ಶೂ, ಬ್ಯಾಗ್ ಎಲ್ಲವನ್ನೂ ತಂದು ರೆಡಿ ಮಾಡಿಟ್ಟಿದ್ದರು. ಯಾವ ವಸ್ತುಗಳು ಎಲ್ಲೆಲ್ಲಿ ಇವೆ ಗೊತ್ತಿಲ್ಲ. ಲೂಕ್ಲಾಗೆ ಹೋದ ನಂತರ ಅಲ್ಲಿ ಸ್ವಲ್ಪ ಸಮಯ ದೊರೆಯುತ್ತದೆ, ಆಗ ಎಲ್ಲಾ ವಸ್ತುಗಳನ್ನು ಒಮ್ಮೆ ನೋಡಿಕೊಳ್ಳಬೇಕು. ಸ್ಟೋರಿ ಇಷ್ಟಿದೆ. ಈಗ ಏರ್ಪೋರ್ಟ್ಗೆ ಹೊರಟಿದ್ದೀನಿ. ಇಲ್ಲಿಂದ ಮೊದಲು ಬಾಂಬೆಗೆ ಹೋಗುತ್ತೇನೆ, ಅಲ್ಲಿಂದ ಕಠ್ಮಂಡುವಿಗೆ ಹೋಗುತ್ತೇನೆ. ನೀವೂ ನನ್ನೊಂದಿಗೆ ಬನ್ನಿ. ಎವರೆಸ್ಟ್ ಬೇಸ್ ಕ್ಯಾಂಪ್ ಹೇಗಿತ್ತು ಅಂತ ನಾನು ಸಾಧ್ಯವಾದಷ್ಟು ವಿಡಿಯೋ ಮಾಡುತ್ತೇನೆ ಎಂದು ಸುಷ್ಮಾ, ಫೇಸ್ಬುಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸುಷ್ಮಾ ಎವರೆಸ್ಟ್ ಏರುವ ಕನಸಾಗಲಿ ಎಂದು ಹಾರೈಸೋಣ.
ಭಾಗ್ಯಲಕ್ಷ್ಮೀ ಧಾರಾವಾಹಿ ಬಗ್ಗೆ ಹೇಳುವುದಾದರೆ, ಕಳೆದ ಶುಕ್ರವಾರ 761ನೇ ಎಪಿಸೋಡ್ ಮುಕ್ತಾಯವಾಗಿದೆ. ನಾಯಕಿ ಭಾಗ್ಯಾ ಹೊಸದಾಗಿ ಕ್ಯಾಟರಿಂಗ್ ಬಿಸ್ನೆಸ್ ಆರಂಭಿಸಿದ್ಧಾಳೆ. ಅದನ್ನು ಹಾಳು ಮಾಡಲು ತಾಂಡವ್ ಹಾಗೂ ಶ್ರೇಷ್ಠಾ ಜೊತೆ ಸೇರಿ ಕನ್ನಿಕಾ ಸಹಾಯ ಪಡೆದಿದ್ದಾರೆ. ಭಾಗ್ಯಾ ಗಂಡನನ್ನು ಬಿಟ್ಟಿದ್ದಾಳೆ. ಅಕ್ಕನ ಕಥೆ ಹೀಗಾದರೆ ತಂಗಿಯನ್ನು ಯಾರು ಮದುವೆ ಆಗುತ್ತಾರೆ ಅಂತ ಭಾಗ್ಯಾ ನೆರೆಮನೆಯವರು ಕೊಂಕು ಮಾತನಾಡುತ್ತಾರೆ. ಇದರಿಂದ ಸುನಂದಾ ಬೇಸರಗೊಳ್ಳುತ್ತಾಳೆ. ಅಮ್ಮನನ್ನು ಸಮಾಧಾನ ಮಾಡುವ ಭಾಗ್ಯಾ, ಪೂಜಾ ಮದುವೆ ಜವಾಬ್ದಾರಿ ನನ್ನದು ಎಂದು ಮಾತು ಕೊಡುತ್ತಾಳೆ.