ಡಾ. ರಾಜ್ ಕುಮಾರ್ ಅನ್ನೋ ಈ ಮಹಾನ್ ವ್ಯಕ್ತಿಯಿಂದ ಕನ್ನಡ ಚಿತ್ರರಂಗದ ಕಡೆಗೆ ಎಲ್ಲರೂ ತಿರುಗಿ ನೋಡುವಂತೆ ಆಗಿತ್ತು. ಆಗ ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಎಂದರೆ, ಬೇರೆ ಭಾಷೆಯ ಕಲಾವಿದರು ಸಹ ನಮ್ಮತ್ತ ತಿರುಗಿ ನೋಡುವ ಹಾಗಿತ್ತು. ಅಂಥ ಅವಿಸ್ಮರಣೀಯ ಕಲಾವಿದನಿಗೆ ಅಭಿಮಾನಿ ಆಗದವರಿಲ್ಲ ಎಂದರೆ ಖಂಡಿತ ತಪ್ಪಲ್ಲ. ಡಾ. ರಾಜ್ ಕುಮಾರ್ ಅವರ ವೃತ್ತಿ ಜೀವನದಲ್ಲಿ 206 ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಚಾರ.
ಅದರಲ್ಲಿ ಗಂಧದ ಗುಡಿ ಡಾ. ರಾಜ್ ಕುಮಾರ್ ಅಭಿನಯದ 150ನೇ ಸಿನಿಮಾ. ಇದು ಕಾಡನ್ನು ಉಳಿಸಿ ಎನ್ನುವ ಕಾನ್ಸೆಪ್ಟ್ ನ ಸಿನಿಮಾ ಎಂದರೂ ತಪ್ಪಲ್ಲ. ಇದು ಡಾ. ರಾಜ್ ಕುಮಾರ್ ಅವರು ಹಾಗೂ ಡಾ. ವಿಷ್ಣುವರ್ಧನ್ ಅವರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ, ಎಂ.ಪಿ ಶಂಕರ್ ಅವರ ನಿರ್ಮಾಣ, ಕಲ್ಪನಾ ಅವರು ನಾಯಕಿಯಾಗಿ ಅಭಿನಯಿಸಿರುವ ಅತ್ಯದ್ಭುತ ಚಿತ್ರಗಳಲ್ಲಿ ಇದು ಕೂಡ ಒಂದು. ಸರ್ವಕಾಲಕ್ಕೂ ಎಲ್ಲರಿಗೂ ಇಷ್ಟವಾಗುವ ಸಿನಿಮಾಗಳ ಸಾಲಿಗೆ ಸೇರುವುದು ಗಂಧದಗುಡಿ.

ಈ ಸಿನಿಮಾದ ಹಾಡುಗಳು ಕೂಡ ಅಷ್ಟೇ ಜನಪ್ರಿಯ, ಅಣ್ಣಾವ್ರು ಕಾಡಿನಲ್ಲಿ ಹಾಡುವ ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದಗುಡಿ ಹಾಡು ತುಂಬಾ ಫೇಮಸ್ ಎಂದರೆ ತಪ್ಪಲ್ಲ. ಈಗಲೂ ಸಹ ಎಲ್ಲಾ ಕನ್ನಡ ಚಿತ್ರಪ್ರೇಮಿಗಳ ಮೆಚ್ಚಿನ ಹಾಡು ಇದು. ಈ ಹಾಡಿನಲ್ಲಿ ಒಂದು ವಿಶೇಷವನ್ನು ಗಮನಿಸುವುದಾದರೆ, ಅಣ್ಣಾವ್ರು ಈ ಹಾಡಿನಲ್ಲಿ ಆನೆಯ ದಂತಗಳ ಮೇಲೆ ಕುಳಿತುಕೊಳ್ಳುತ್ತಾರೆ, ಹಾಗೆಯೇ ಸೊಂಡಿಲಿನ ಮೇಲೆ ಕೂಡ ತೂಗಾಡುತ್ತಾರೆ.
ಆಗಿನ ಕಾಲದಿಂದ ಈಗಿನ ಕಾಲಕ್ಕೂ ಈ ದೃಶ್ಯ ನೋಡಿದರೆ ಸೋಜಿಗ ಅನ್ನಿಸದೇ ಇರದು, ಆಶ್ಚರ್ಯ ಅನ್ನಿಸದೇ ಇರದು. ಒಬ್ಬ ನಟ ಇಷ್ಟು ಸುಲಲಿತವಾಗಿ ಒಂದು ಆನೆಯ ಜೊತೆಗೆ ಬೆರೆಯಲು ಹೇಗೆ ಸಾಧ್ಯ ಎಂದು ಕೂಡ ಅನ್ನಿಸದೇ ಇರದು. ಹಾಗೆಯೇ ಡಾ. ರಾಜ್ ಕುಮಾರ್ ಅವರ ಬಗ್ಗೆ ಹೆಮ್ಮೆ ಅನ್ನಿಸುವುದಂತೂ ಖಂಡಿತ. ಆ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕೆ ಅಣ್ಣಾವ್ರು ಒಂದು ತಿಂಗಳಿನಿಂದ ತಯಾರಿ ನಡೆಸಿದ್ದರು ಎನ್ನುವುದು ಯಾರಿಗೂ ಗೊತ್ತಿರದ ಸಂಗತಿ. ಹೌದು, ಆನೆಯ ದಂತದ ಮೇಲೆ, ಸೊಂಡಿಲಿನ ಮೇಲೆ ಕುಳಿತುಕೊಳ್ಳಲು, ಒಂದು ತಿಂಗಳು ಅವುಗಳ ಜೊತೆಗೆ ಸಮಯ ಕಳೆದಿದ್ದರಂತೆ.
ಒಂದು ತಿಂಗಳ ಕಾಲ ಆನೆಗೆ ಹಣ್ಣು ಊಟ ತಿನ್ನಿಸಿ, ಅದರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರಂತೆ ಅಣ್ಣಾವ್ರು. ಆ ಕಾರಣಕ್ಕೆ ಆನೆ ಸಹ ಅವರ ಜೊತೆಗೆ ಒಗ್ಗಿಕೊಂಡಿತು. ಹೀಗಾಗಿ ದೃಶ್ಯದ ಚಿತ್ರೀಕರಣ ಕೂಡ ಉತ್ತಮವಾಗಿ ಸಾಗಿತು. ಅಣ್ಣಾವ್ರು ಎಂದಿನಂತೆ ಹಾಡಿನಲ್ಲಿ ವಿಜೃಂಭಿಸಿದರು. ಒಂದು ಪಾತ್ರಕ್ಕಾಗಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ಡಾ. ರಾಜ್ ಕುಮಾರ್ ಅವರಿಂದ ಈಗಿನ ಕಲಾವಿದರು ಕಲಿತುಕೊಳ್ಳಬಹುದು.



