ಬೇಸಿಗೆ ಶುರುವಾಯಿತು ಎಂದರೆ ತಂಪು ಪಾನಿಯ, ಐಸ್ಕ್ರೀಮ್, ಕಲ್ಲಂಗಡಿ, ಕರ್ಬೂಜದಂತಹ ಹಣ್ಣುಗಳಿಗೆ ಭಾರೀ ಡಿಮಾಂಡ್. ಬಿಸಿಲಿನ ಬೇಗೆಗೆ ದಾಹ ತಣಿಸುವ ಹಣ್ಣುಗಳಿಗೆ ಹೆಚ್ಚೇ ಬೇಡಿಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಕಲ್ಲಂಗಡಿ ಹಣ್ಣುಗಳ ಹಾವಳಿ ಇದೇ ಎಂಬ ಮಾತು ಹರಿದಾಡುತ್ತಿದೆ. ನಕಲಿ ಕಲ್ಲಂಗಡಿ ಹಣ್ಣುಗಳೇ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮ್ಮ ಆಶ್ಚರ್ಯಕ್ಕೆ ಇಲ್ಲಿದೆ ಉತ್ತರ…
ಕಲ್ಲಂಗಡಿ ಹಣ್ಣು ನೋಡಲು ಎಷ್ಟು ಚೆಂದವೋ, ಸವಿದರೆ ಅಷ್ಟೇ ರುಚಿಯಿರುವಂತಹ ಹಣ್ಣು. ಹೊರಭಾಗ ಹಸಿರುಮಯವಾಗಿದ್ದರೆ, ಒಳಭಾಗ ಕೆಂಬಣ್ಣದಿಂದ ಕೂಡಿರುತ್ತದೆ. ಇಂತಿಪ್ಪ ಕಲ್ಲಂಗಡಿ ಹಣ್ಣನ್ನು ಕೊಂಡುಕೊಳ್ಳುವಾಗ ಗ್ರಾಹಕರು ಹೆಚ್ಚು ಗಮನಿಸುವುದು ಹೊರಗಿನ ಹಸಿರು ಬಣ್ಣವನ್ನೇ…. ಕೆಲವು ಕಲಂಗಡಿ ಹಣ್ಣುಗಳು ನೋಡಲು ಅಷ್ಟೇನು ಹಸಿರು ಬಣ್ಣದಾಗಿರದೆ ಬಿಳಿಯ ಬಣ್ಣದ ರೋಗದ ಕಾಯಿಯಂತೆ ಕಾಣತ್ತಿರುತ್ತದೆ. ಇಂತಹ ಹಣ್ಣುಗಳನ್ನು ಗ್ರಾಹಕರು ಕೊಂಡುಕೊಳ್ಳಲು ಹಿಂದೇಟಾಕುತ್ತಾರೆ.
ಇದೇ ವಿಷಯ ವ್ಯಾಪರಿಗಳಿಗೆ ತಲೆನೋವಾಗಿ ಪರಿಣಮಿಸುವುದು. ಕೊಂಡುತಂದಿರುವ ಹಣ್ಣುಗಳನ್ನು ಗ್ರಾಹಕರು ಖರೀದಿಸದೆ ಹೋಗುವುದು ಸಹ್ಯವಾಗದೆ ಹೊಸ ತಂತ್ರವನ್ನು ಅನುಸರಿಸಲು ಮುಂದಾಗಿದ್ದಾರೆ. ಅದುವೇ ಕೃತಕ ಬಣ್ಣದ ಕಲಬೆರಕೆ. ಹೌದು, ಕಲರ್ಫುಲ್ ಕಲ್ಲಂಗಡಿ ಹಣ್ಣು ಗ್ರಾಹಕರಿಗೆ ಹೆಚ್ಚು ಆಕರ್ಷಿತವಾಗಿ ಕಾಣಲಿ ಎಂಬ ಕಾರಣಕ್ಕೆ ಕೃತಕ ಬಣ್ಣಗಳನ್ನು ಬೆರೆಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಇದರಿಂದ ಬಾಯಿಗೆ ರುಚಿ ಎಂದು ಕಲ್ಲಂಗಡಿ ಹಣ್ಣನ್ನು ಖರೀದಿಸುವ ಮುನ್ನ ಗ್ರಾಹಕರು ಪರಿಶೀಲಿಸಿ ಖರೀದಿಸಬೇಕಾದ ಸಮಯ ಬಂದಿದೆ.
ಹಾಗಾದ್ರೆ, ಕೃತಕ ಬಣ್ಣ ಬೆರೆತ ರಾಸಾಯನಿಕ ಕಲ್ಲಂಗಡಿ ಹಣ್ಣನ್ನು ಗುರುತಿಸುವುದು ಹೇಗೆ ಎಂದು ಯೋಚಿಸುತ್ತೀದ್ದೀರಾ…? ಖಾಸಗಿ ಸುದ್ದಿವಾಹಿನಿಯೊಂದರ ಜೊತೆಗೆ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಹಾರ ತಜ್ಞೆ ಅಮೃತಾ ಉತ್ತರಾವರ್ ಬೊಂಗಿರ್ವಾರ್, ಕೃತಕ ಹಣ್ಣನ್ನು ಕಂಡುಹಿಡಿಯಲು ಕೆಲವು ಟಿಪ್ಸ್ ತಿಳಿಸಿದ್ದಾರೆ.
ಕೆಲವು ಹಾನಿಕಾರಕ ರಾಸಯನಿಕಗಳ ಬಳಕೆಯಿಂದ ಕಲ್ಲಂಗಡಿ ಹಣ್ಣಿನ ಬಣ್ಣವನ್ನು ಹೆಚ್ಚಿಸಲಾಗುತ್ತಿದೆ. ಇದು ಹಣ್ಣಿನ ನೈಜ ಸ್ವಾದವನ್ನು ಇಲ್ಲವಾಗಿಸಿ, ಫುಡ್ಪಾಯ್ಸನಿಂಗ್ ಹಾಗೂ ಅಜೀರ್ಣದ ಸಮಸ್ಯೆ ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಅವರು ಹೇಳಿದ್ದು, ಈ ಕೆಳಗೆ ಸೂಚಿಸಿದಂತೆ ಹಣ್ಣನ್ನು ಪರಿಶೀಲಿಸಲು ತಿಳಿಸಿದ್ದಾರೆ.

ಹಣ್ಣಿನ ಕೆಳಭಾಗ ಒಮ್ಮೆ ನೋಡಿ:
ಕೃತಕ ಬಣ್ಣದಿಂದ ಕೂಡಿದ ಕಲ್ಲಂಗಡಿ ಹಣ್ಣಿನ ಕೆಳಭಾಗ ಮಾತ್ರ ನೈಸರ್ಗಿಕ ತಿಳಿ ಹಳದಿ ಬಣ್ಣದಾಗಿದ್ದು, ಇದನ್ನು ಹೊರತು ಪಡೆಸಿ ಇಡೀ ಕಲ್ಲಂಗಡಿ ಹಣ್ಣು ಒಂದೇ ಬಣ್ಣದಿಂದ ಹೊಳೆಯುತ್ತಿದ್ದರೆ ಅದು ಕೃತಕ ಕಲ್ಲಂಗಡಿ ಹಣ್ಣು ಎಂದು ತಿಳಿಯಬೇಕು.
ನೀರಿನಲ್ಲಿ ಮುಳುಗಿಸಿ ನೋಡಿ:
ಕೃತಕ ಕಲ್ಲಂಗಡಿ ಹಣ್ಣಿಗೆ ಹೊರಭಾಗದಲ್ಲಿ ಮಾತ್ರ ಬಣ್ಣ ಬೆರೆಸಿರುವುದಿಲ್ಲ, ಒಳಭಾಗದಲ್ಲಿಯೂ ಬಣ್ಣ ಬೆರಕೆಯಾಗಿರುತ್ತದೆ. ಇದನ್ನು ಕಂಡು ಹಿಡಿಯಲು ಒಂದು ಸಣ್ಣ ಪೀಸ್ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ಮುಳುಗಿಸಿ. ಒಂದು ವೇಳೆ ನೀರು ಗುಲಾಬಿ ಬಣ್ಣಕ್ಕೆ ತಿರುಗಿದರೆ, ಒಳಭಾಗಕ್ಕೆ ಲೇಪಿತವಾಗಿರುವ ಕೃತಕ ಬಣ್ಣ ಬಿಡುಗಡೆಗೊಳ್ಳುತ್ತಿದೆ ಎಂದರ್ಥ.
ಕಲ್ಲಂಗಡಿ ಬೀಜ ಗಮನಿಸಿ:
ನೈಸರ್ಗಿಕ ಕಲ್ಲಂಗಡಿ ಬೀಜಗಳು ಕಂದು ಅಥವಾ ಕಪ್ಪು ಬಣ್ಣದಾಗಿರುತ್ತವೆ. ಜೊತೆಗೆ ಒಳಗಿನ ರಸಭರಿತ ತಿರುಳು ಸಹ ಕೆಂಪು ಬಣ್ಣದಿಂದ ಕೂಡಿರುತ್ತದೆ. ನಕಲಿ ಕಲ್ಲಂಗಡಿ ಹಣ್ಣಿನ ಬೀಜಗಳು ಬೀಳಿ ಬಣ್ಣದಾಗಿರುತ್ತವೆ. ಹಾಗೆಯೇ, ಒಳಗಿನಿಂದ ಗಾಢ ಕೆಂಪು ಬಣ್ಣದ ತಿರುಳನ್ನು ಹೊಂದಿರುತ್ತವೆ. ಈ ಬಣ್ಣ ಕೆಲವೊಮ್ಮ ಕೈಗೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ.
ಬಣ್ಣ ನೋಡಿ ಮೋಸ ಹೋಗಬೇಡಿ:
ಕೆಂಪು ಬಣ್ಣದ ತಿರುಳು ರಸಭರಿತ ಹಣ್ಣೆಂದು ಮೋಸ ಹೋಗಬೇಡಿ. ಹೊರಗೆ ಹಸಿರು, ಒಳಗೆ ಗಾಢ ಕೆಂಪು ಬಣ್ಣದಿಂದ ಕೂಡಿರುವ ಕಲ್ಲಂಗಡಿ ಹಣ್ಣುಗಳು ನೈಸರ್ಗಿಕವಾಗದವು ಎಂದು ತಿಳಿಯಲೇ ಬೇಡಿ.
ಒಟ್ಟಾರೆ, ಮಾರುಕಟ್ಟೆಯಲ್ಲಿ ಕೆಜಿ ಕಲ್ಲಂಗಡಿ ಹಣ್ಣಿನ ಬೆಲೆ 7೦ ರೂಪಾಯಿಯಾಗಿದ್ದು, ಖರೀದಿಸುವಾಗ ಎಚ್ಚರದಿಂದಿರಿ. 70 ರೂಪಾಯಿಯ ಆಸೆಗೆ ಬಿದ್ದು, ಸಾವಿರಾರು ರೂಪಾಯಿಯನ್ನು ಆಸ್ಪತ್ರೆಗೆ ಸುರಿಯುವ ತಪ್ಪನ್ನು ಮಾಡಬೇಡಿ.