ಇಂದಿನ ಡಿಜಿಟಲ್ ಯುಗದ ಪ್ರಭಾವ ಹೆಚ್ಚಾದಂತೆ ಎಲ್ಲರೂ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೂ ಕೂಡ ಯುಪಿಐ ಮೂಲಕ ಪೇಮೆಂಟ್ ಮಾಡುತ್ತಾರೆ. ಹೆಚ್ಚಿನ ಜನ ಇಂದು ಹಣದ ಬದಲು ಈ ಡಿಜಿಟಲ್ ಪೇಮೆಂಟ್ ಬಳಸುತ್ತಾರೆ. ಇದರ ಪ್ರಭಾವದಿಂದಾಗಿ ಇದೀಗ ಭಿಕ್ಷುಕರು ಕೂಡ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಬಳಸುತ್ತಿದ್ದಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ತುಂಬಿದ ರೈಲಿನಲ್ಲಿ ಬಿಕ್ಷುಕನೊಬ್ಬ ಕ್ಯೂಆರ್ ಕೋಡ್ ಹಿಡಿದು ಭಿಕ್ಷಾಟನೆ ಮಾಡಿದ್ದಾನೆ.

ಜನರಿಂದ ತುಂಬಿ ಹೋಗಿದ್ದ ರೈಲಿನೊಳಗೆ ಪ್ರವೇಶಿಸಿದ ಭಿಕ್ಷುಕನೊಬ್ಬ, ಹಿಂದಿ ಹಾಡು ಹಾಡುತ್ತಾ ರೈಲಿನ ತುಂಬ ಓಡಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಕತ್ತಿಗೆ ನೇತು ಹಾಕಿದ್ದ ಡಿಜಿಟಲ್ ಪೇಮೆಂಟ್ ಕ್ಯೂಅರ್ ಕೋಡನ್ನು ಜನರಿಗೆ ತೋರಿಸಿ ತಾನು ಹಾಡಿದ ಹಾಡಿಗೆ ಭಿಕ್ಷೆ ಹಾಕುವಂತೆ ಕೇಳಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಈತನ ಡಿಜಿಟಲ್ ಭಿಕ್ಷಾಟನೆಯನ್ನು ನೀವು ಕಾಣಬಹುದಾಗಿದೆ.
ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಇದನ್ನು ವಿಡಿಯೋ ಮಾಡಿ ‘ಮಾಡರ್ನ್ ಭಿಕ್ಷುಕ’ ಎಂಬ ಅಡಿಬರಹ ಬರೆದು ವಿಡಿಯೋ ವೈರಲ್ ಮಾಡಿದ್ದಾರೆ. ಕ್ಷಣ ಮಾತ್ರದಲ್ಲಿ ಈ ವಿಡಿಯೋ ಎಲ್ಲೆಡೆ ಹರಿದಾಡಿದೆ. ಇನ್ನು ಭಿಕ್ಷಾಟನೆ ಮಾಡಿದ ಯುವಕ ನಿಜವಾಗಿ ಈ ರೀತಿ ಭಿಕ್ಷಾಟನೆ ಮಾಡಿದನೋ ಅಥವಾ ರೀಲ್ಸ್ ಗಾಗಿ ಈ ರೀತಿ ಭಿಕ್ಷಾಟನೆ ಮಾಡಿದನೋ ಎಂಬುದು ಸ್ಪಷ್ಟವಾಗಿಲ್ಲ.
ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜೊತೆಗೆ ವಿಡಿಯೋ ಗಮನಿಸಿದ ನೆಟ್ಟಿಗರು ನೂರಾರು ಕಮೆಂಟ್ ಗಳನ್ನು ಹಾಕಿದ್ದಾರೆ. ಕೆಲವೊಬ್ಬರು ‘ದೇಶ ಬದಲಾಗುತ್ತಿದೆ, ಭಿಕ್ಷುಕರು ತಟ್ಟೆಯ ಬದಲು ಕ್ಯೂಆರ್ ಕೋಡ್ ಬಳಸುತ್ತಿದ್ದಾರೆ’ ಎಂದರೆ. ಮತ್ತೆ ಕೆಲವರು ‘ಈತ ಮಾಡರ್ನ್ ಭಿಕ್ಷುಕ’ ಎಂದಿದ್ದಾರೆ.



