ಜಯತೀರ್ಥ ನಿರ್ದೇಶನದ ಸಿನಿಮಾಗಳು ಎಂದರೆ ಒಂದಷ್ಟು ನಿರೀಕ್ಷೆಗಳು ಸಹಜ. ಯಾಕಂದ್ರೆ ಈಗಾಗಲೇ ಅವರ ನಿರ್ದೇಶನದ ಸಿನಿಮಾಗಳು ಮನಸ್ಸಿಗೆ ಅಚ್ಚೊತ್ತಿವೆ. ಈಗ ಅವರದ್ದೇ ನಿರ್ದೇಶನದಲ್ಲಿ ಬನಾರಸ್ ತೆರೆಗೆ ಬರಲು ಸಿದ್ಧವಾಗಿದೆ. ಮುಂದಿನ ತಿಂಗಳು ಎಂದರೆ ನವೆಂಬರ್ 4ಕ್ಕೆ ಸಿನಿಮಾ ತೆರೆಗೆ ಬರಲಿದೆ. ಝೈದ್ ಖಾನ್ ನಾಯಕನಾಗಿ ಬನಾರಸ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇದೆ. ಟ್ರೇಲರ್ ಎಲ್ಲರನ್ನು ಖುಷಿಗೊಳಿಸಿತ್ತು, ಸಾಂಗ್ಸ್ ಹಿತವೆನಿಸಿತ್ತು. ಹೀಗೆ ಸಾಲು ಸಾಲು ವಿಚಾರಗಳಲ್ಲಿ ಮೊದಲ ಸ್ಥಾನದಲ್ಲಿಯೇ ಇದ್ದ ಬನಾರಸ್ ಇದೀಗ ವಿತರಣಾ ಹಕ್ಕಿನಲ್ಲೂ ಎಲ್ಲರಿಂದ ಆಶ್ಚರ್ಯಚಕಿತ ನೋಟ ಪಡೆಯುತ್ತಿದೆ. ಅದಕ್ಕೆ ಕಾರಣ ಸೂಪರ್ ಹಿಟ್ ಸಿನಿಮಾಗಳನ್ನು ವಿತರಣೆ ಮಾಡಿದ್ದ ಸಂಸ್ಥೆಗಳೇ ಬನಾರಸ್ ಗೆ ಸಾಥ್ ಕೊಡುತ್ತಿರುವುದು.

ಹೌದು.. ಈಗಾಗಲೇ ಕರ್ನಾಟಕ, ಕೇರಳ, ಬಾಲಿವುಡ್ ನಲ್ಲಿ ಸಿನಿಮಾ ವಿತರಿಸುವ ಹಕ್ಕನ್ನು ದೊಡ್ಡ ದೊಡ್ಡ ಸಂಸ್ಥೆಗಳೇ ತೆಗೆದುಕೊಂಡಿದೆ. ಈಗ ತಮಿಳಿನ ಸರದಿ. ತಮಿಳಿನಲ್ಲಿ ಶಕ್ತಿ ಫಿಲಂ ಫ್ಯಾಕ್ಟರಿ ವಿತರಿಸುವ ಹಕ್ಕನ್ನು ಪಡೆದುಕೊಂಡಿದೆ. ತಮಿಳಿನಾದ್ಯಂತ ಶಕ್ತಿ ಫಿಲಂ ಫ್ಯಾಕ್ಟರಿ ಬನಾರಸ್ ಸಿನಿಮಾವನ್ನು ಹಂಚಲಿದೆ.
ಶಕ್ತಿ ಫಿಲಂ ಫ್ಯಾಕ್ಟರಿ ಇಲ್ಲಿವರೆಗೂ ವಿತರಣೆ ಮಾಡಿರುವುದರಲ್ಲಿ ಸೂಪರ್ ಹಿಟ್ ಸಿನಿಮಾಗಳ ಲೀಸ್ಟ್ ಇದೆ. ಹೀಗಾಗಿ ಬನಾರಸ್ ಮೇಲೆ ತಮಿಳಿಗರ ಚಿತ್ತ ನೆಟ್ಟಿದೆ. ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನವೆಂಬರ್ 4ರಂದು ದೇಶದಾದ್ಯಂತ ತೆರೆ ಕಾಣಲಿದೆ. ತಿಲಕ್ ರಾಜ್ ಬಲ್ಲಾಳ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಝೈದ್ ಖಾನ್ ಮತ್ತು ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ತಾರಾಗಣ ಇದೆ. ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.