ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ
ಬಘೀರ ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿ, ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ. ಟ್ರೈಲರ್ ನೋಡಿದ ಸಿನಿಪ್ರಿಯರು ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಕಾಯುತ್ತಲಿದ್ದಾರೆ. ಈ ಸಿನಿಮಾದ ಕಥೆ ಪ್ರಶಾಂತ್ ನೀಲ್ ಅವರದ್ದು, ಡಾ. ಸೂರಿ ಅವರು ಬಘೀರ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಿನಿಮಾದಲ್ಲಿದೆ.
ಶ್ರೀಮುರಳಿ ಅವರು ನಾಯಕನಾಗಿ ನಟಿಸಿರುವ ಈ ಸಿನಿಮಾಗೆ, ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್ ಅವರು ನಾಯಕಿಯಾಗಿದ್ದು, ಸುಧಾರಾಣಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಗರುಡ ರಾಮ್, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಕನ್ನಡದ ಬ್ಯಾಟ್ ಮ್ಯಾನ್ ಎಂದೇ ಬಘೀರನನ್ನು ಕರೆಯಲಾಗುತ್ತಿದೆ. ಶ್ರೀಮುರಳಿ ಅವರು ಎರಡು ಬೇರೆ ಬೇರೆ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಟ್ರೈಲರ್ ಗೇ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ, ಆದರೆ ಸಿನಿಮಾದ ಒಂದು ದೃಶ್ಯ ಸಿಕ್ಕಾಪಟ್ಟೆ ತಮಾಷೆಯಾಗಿ ಟ್ರೋಲ್ ಆಗುತ್ತಿದೆ. ಅದು ರುಕ್ಮಿಣಿ ವಸಂತ್ ಅವರ ಕಾರಣಕ್ಕೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ಪ್ರಿಯಾ ಪಾತ್ರದಲ್ಲಿ ನಟಿಸಿದ್ದು, ನಾಯಕ ಮನುಗೆ ಸಮುದ್ರದ ಹತ್ತಿರ ಮನೆ ಮಾಡಬೇಕು, ಅಲ್ಲೇ ಇರಬೇಕು ಎಂದು ಪ್ರೀತಿಯಿಂದ ಹೇಳುತ್ತಾಳೆ ಪ್ರಿಯಾ. ಆದರೆ ಆ ಕನಸು ನನಸಾಗೋದೇ ಇಲ್ಲ. ಆ ಸಿನಿಮಾದಲ್ಲಿ ನಾಯಕ ರಕ್ಷಿತ್ ಶೆಟ್ಟಿ ಅವರ ಪಾತ್ರ ಅಂತ್ಯವಾಗುತ್ತದೆ..
ಆದರೆ ಬಘೀರ ಟ್ರೈಲರ್ ನಲ್ಲಿ ರುಕ್ಮಿಣಿ ವಸಂತ್ ಅವರು ಬೀಚ್ ನಲ್ಲಿ ಶ್ರೀಮುರಳಿ ಅವರ ಜೊತೆಗೆ ಎಳನೀರು ಕುಡಿಯುತ್ತಿರುವ ಒಂದು ದೃಶ್ಯವಿದ್ದು, ಅದನ್ನು ನೋಡಿದ ಅಭಿಮಾನಿಗಳು ಯಾಕ್ ಹೀಗ್ ಮಾಡ್ಬಿಟ್ಟೆ ಪುಟ್ಟಿ ಎಂದು ತಮಾಷೆಯಾಗಿ ಟ್ರೋಲ್ ಮಾಡುತ್ತಿದ್ದಾರೆ. ಈಗ ಬಘೀರನ ಜೊತೆ ಸಮುದ್ರದಲ್ಲಿದ್ದೀಯಾ ಎಂದು ರುಕ್ಮಿಣಿ ವಸಂತ್ ಅವರ ಫೋಟೋ ಶೇರ್ ಮಾಡಿ, ಮೀಮ್ಸ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮೀಮ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಉತ್ತಮ ಅಭಿನಯಕ್ಕೆ ರುಕ್ಮಿಣಿ ವಸಂತ್ ಅವರಿಗೆ ಚಂದನವನದಲ್ಲಿ ಒಂದು ಉತ್ತಮವಾದ ಸ್ಥಾನ ಹಾಗೆಯೇ ದೊಡ್ಡ ಅಭಿಮಾನಿ ಬಳಗ ಕೂಡ ಸಿಕ್ಕಿದೆ. ಈಗಾಗಲೇ ಅವರು ತಮಿಳಿನಲ್ಲಿ ಕೂಡ ಸಿನಿಮಾ ಮಾಡುತ್ತಿದ್ದು, ನಮ್ಮ ಕನ್ನಡದ ಹುಡುಗಿ ಎಲ್ಲಾ ಭಾಷೆಗಳಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ರುಕ್ಮಿಣಿ ವಸಂತ್ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ ಕೂಡ ಹೌದು.