ಸ್ನಾನ ಅನ್ನೋದು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ದೇಹ ಶುಚಿಯಾಗಿ ಆರೋಗ್ಯವಾಗಿರಲು ಮಾತ್ರವಲ್ಲ, ಮನಸ್ಸು ಹಗುರಾಗಲು ಕೂಡಾ ಸ್ನಾನ ಮಾಡುವುದು ಬಹಳ ಅಗತ್ಯ. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಉತ್ತಮವಾಗಿರಲು ಪ್ರತಿದಿನ ಸ್ನಾನ ಮಾಡಲೇಬೇಕು. ಆದರೆ ಸಮಯದ ಅಭಾವದಿಂದಲೋ, ಸೋಮಾರಿತನದಿಂದಲೋ ಅಥವಾ ನೀರಿನ ಸಮಸ್ಯೆಯಿಂದಲೋ ಕೆಲವರು ಪ್ರತಿದಿನ ಸ್ನಾನ ಮಾಡುವ ಗೋಜಿಗೆ ಹೋಗುವುದಿಲ್ಲ. ಇನ್ನೂ ಕೆಲವರು ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಸಮಯ ಸಿಕ್ಕಾಗ ಸ್ನಾನ ಮುಗಿಸುತ್ತಾರೆ.
ಆದರೆ ಶಾಸ್ತ್ರ, ನಂಬಿಕೆಗಳ ಪ್ರಕಾರ ಸ್ನಾನಕ್ಕೂ ಒಂದು ನಿಗದಿತ ಸಮಯವಿದೆ ಅಂದ್ರೆ ನಂಬ್ತೀರಾ? ಹೌದು ನೀವು ಮಾಡುವ ಸ್ನಾನದ ಸಮಯದ ಆಧಾರದ ಮೇಲೆ ನೀವು ರಾಕ್ಷಸ ಗುಂಪು, ಮಾನವ ಗುಂಪು..ಯಾವ ಗುಂಪಿಗೆ ಸೇರುವಿರಿ ಅನ್ನೋದು ನಿರ್ಧಾರವಾಗುತ್ತದೆ. ಹಾಗೇ ಅದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಕೂಡಾ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಪ್ರತಿದಿನ ನೀವು ಯಾವ ಸಮಯಕ್ಕೆ ಸ್ನಾನ ಮಾಡಬೇಕು? ಸ್ನಾನಗಳಲ್ಲಿ ಎಷ್ಟು ವಿಧ? ಇಲ್ಲಿದೆ ಮಾಹಿತಿ.
ಸ್ನಾನದಲ್ಲಿ ಬ್ರಾಹ್ಮಿ ಸ್ನಾನ, ದೇವ ಸ್ನಾನ, ಮಾನವ ಸ್ನಾನ ಹಾಗೂ ರಾಕ್ಷಸ ಸ್ನಾನ ಎಂಬ 4 ವಿಧಗಳಿವೆ.

ಬ್ರಾಹ್ಮಿ ಸ್ನಾನ
ಇದನ್ನು ಮನಿ ಸ್ನಾನ ಎಂದೂ ಕರೆಯಲಾಗುತ್ತದೆ. ಬ್ರಾಹ್ಮಿ ಸ್ನಾನ ಮೊದಲ ಆದ್ಯತೆ ಇದೆ. ಇದು ಬಹಳ ಶ್ರೇಷ್ಠ ಎನಿಸಿದೆ. ಬ್ರಾಹ್ಮಿ ಸ್ನಾನವನ್ನು ಪ್ರತಿ ದಿನ ಮುಂಜಾನೆ 4 ರಿಂದ 5 ಗಂಟೆಯ ಅವಧಿಯಲ್ಲಿ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಪೂಜೆ ಪುನಸ್ಕಾರ ಮುಗಿಸಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದರೆ ಆ ದಿನ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆ ಮನಸ್ಸಿನಲ್ಲಿ ಸಕಾರಾತ್ಮಕ ಅಂಶ ತುಂಬಿರುತ್ತದೆ ಎಂಬ ನಂಬಿಕೆ ಇದೆ. ಮುನಿಗಳು ಇದೇ ಸಮಯದಲ್ಲಿ ಸ್ನಾನ ಮಾಡಿ ದೇವರ ಪೂಜೆ ಮುಗಿಸಿ, ತಪಸ್ಸಿನಲ್ಲಿ ನಿರತರಾಗುತ್ತಿದ್ದರು. ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಮನುಷ್ಯನ ಆರಿಷಡ್ವರ್ಗಗಳು ಹಿಡಿತಕ್ಕೆ ಬರುತ್ತದೆ. ಮನೆಯಲ್ಲಿ ನೆಮ್ಮದಿ, ಸಂತೋಷ ಇರುತ್ತದೆ ಎಂಬ ನಂಬಿಕೆ ಇದೆ.
ದೇವ ಸ್ನಾನ
ದೇವ ಸ್ನಾನ ಅಥವಾ ದೈವೀ ಸ್ನಾನವನ್ನು ಬೆಳಗ್ಗೆ 5 ರಿಂದ 6 ಗಂಟೆ ಅವಧಿಯಲ್ಲಿ ಮಾಡಿದರೆ ಶ್ರೇಷ್ಠ. ಈ ಸಮಯದಲ್ಲಿ ಸ್ನಾನ ಮಾಡಿ ದೇವರ ಪೂಜೆಯಲ್ಲಿ ನಿರತರಾದರೆ ದೈವ ಬಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಈ ಸಮಯದಲ್ಲಿ ಸ್ನಾನ ಮಾಡುತ್ತಾರೆ. ದೇವಸ್ಥಾನದಲ್ಲಿ ಕೂಡಾ ಇದೇ ಸಮಯದಲ್ಲಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಬೆಳಗ್ಗೆ 4 -5 ಗಂಟೆಯೊಳಗೆ ಮಾಡಿದರೆ ಜೀವನದಲ್ಲಿ ಉತ್ತಮ ಹೆಸರು ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಜೊತೆಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನ ಗಳಿಸುತ್ತಾರೆ. ಜೀವನದಲ್ಲಿ ಸುಖ , ಸಂತೋಷ ಪ್ರಾಪ್ತಿಯಾಗುತ್ತದೆ.

ಮಾನವ ಸ್ನಾನ
ಬ್ರಾಹ್ಮಿಸ್ನಾನ ಹಾಗೂ ದೇವ ಸ್ನಾನದ ನಂತರ ಮಾನವ ಸ್ನಾನ ಮೂರನೇ ಸ್ಥಾನ ಪಡೆದುಕೊಂಡಿದೆ. ಪ್ರತಿದಿನ ಬೆಳಗ್ಗೆ 6 ರಿಂದ 8 ಗಂಟೆ ಒಳಗೆ ಸ್ನಾನ ಮಾಡಿದರೆ ಶುಭ. ಈ ಸಮಯದಲ್ಲಿ ಸ್ನಾನ ಮಾಡಿ ದೇವರನ್ನು ಪ್ರಾರ್ಥಿಸಿದರೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ, ವ್ಯಾಪಾರಿಗಳಿಗೆ ವ್ಯಹವಾರದಲ್ಲಿ ಲಾಭ ಸೇರಿದಂತೆ ಯಾವುದೇ ಒಳ್ಳೆ ಕೆಲಸ ಆರಂಭಿಸಿದರೂ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ. ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ತುಂಬಿ ಇಡೀ ದಿನ ಖುಷಿಯಾಗಿರಬಹುದು. ಆರೋಗ್ಯವೂ ವೃದ್ಧಿಯಾಗುತ್ತದೆ.
ರಾಕ್ಷಸ ಸ್ನಾನ
ಬೆಳಗ್ಗೆ 8 ಗಂಟೆ ನಂತರ ಮಾಡುವ ಸ್ನಾನವನ್ನು ರಾಕ್ಷಸ ಸ್ನಾನ ಅಥವಾ ಅಸುರ ಸ್ನಾನ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ರಾಕ್ಷಸರು ಸ್ನಾನ ಮಾಡುತ್ತಾರೆ. ಅದೇ ಸಮಯದಲ್ಲಿ ಮನುಷ್ಯರು ಕೂಡಾ ಸ್ನಾನ ಮಾಡಿದರೆ ಮನಸ್ಸಿನಲ್ಲಿ ರಾಕ್ಷಸ ತತ್ವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಮನಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಹೆಚ್ಚುತ್ತದೆ. ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಹೆಚ್ಚುತ್ತದೆ, ಕುಟುಂಬದಲ್ಲಿ ಮನಸ್ತಾಪ, ಜಗಳ, ಅನಾರೋಗ್ಯ ಹೆಚ್ಚುತ್ತದೆ.

ಸ್ತ್ರೀ ಸ್ನಾನ
ಮೇಲೆ ತಿಳಿಸಿದ ಸ್ನಾನದ ಸಮಯ ಹೊರತುಪಡಿಸಿ ಸ್ತ್ರೀಯರು ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಮಾಡುವ ಸ್ನಾನವನ್ನು ಸ್ತ್ರೀಸ್ನಾನ ಎನ್ನುತ್ತಾರೆ. ಋತುಚಕ್ರದ ಅವಧಿ, ಲೈಂಗಿಕ ಕ್ರಿಯೆ ನಂತರ ಮಾಡುವ ಸ್ನಾನವನ್ನು ಸ್ತ್ರೀಸ್ನಾನ ಎನ್ನುತ್ತಾರೆ. ಈ ಸಂದರ್ಭಗಳಲ್ಲಿ ತಪ್ಪದೆ ಸ್ನಾನ ಮಾಡಲೇಬೇಕು. ಹೀಗೆ ಮಾಡಿದರೆ ಶುಚಿತ್ವ ಇರುತ್ತದೆ. ಮನೆಯಲ್ಲಿ ಸಾಮರಸ್ಯ, ನೆಮ್ಮದಿ, ಯಶಸ್ಸು, ಅಭಿವೃದ್ಧಿ ಇರುತ್ತದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿ ನಂಬಿಕೆ ನಂಬಿಕೆ , ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆ, ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.