ಡಾ. ರಾಜ್ ಕುಮಾರ್ ಅವರು ಕನ್ನಡದ ಆಸ್ತಿ, ಇಡೀ ಕರ್ನಾಟಕವೇ ಅವರನ್ನು ಮೆಚ್ಚಿಕೊಳ್ಳುತ್ತದೆ. ಅಣ್ಣಾವ್ರು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇಂಥ ಅಣ್ಣಾವ್ರು ಬಾಳಿ ಬದುಕಿದ ಮನೆ ಸದಾಶಿವನಗರದ ಮನೆ. ಗಾಜನೂರಿನ ಅಣ್ಣಾವ್ರು, ಸಿನಿಮಾಗಳಿಗಾಗಿ ಮದ್ರಾಸ್ ನಲ್ಲಿ ವಾಸವಿದ್ದರು. ಕನ್ನಡ ಚಿತ್ರರಂಗ ಬೆಂಗಳೂರಿಗೆ ಶಿಫ್ಟ್ ಆದಾಗ, ಅಣ್ಣಾವ್ರು ಬೆಂಗಳೂರಿಗೆ ಬಂದ ನಂತರ ಕೊಂಡೊಕೊಂಡಿದ್ದು ಸದಾಶಿವನಗರದ ಮನೆ. ಆಗಿನ ಕಾಲಕ್ಕೆ 11 ಲಕ್ಷ ಕೊಟ್ಟು ಆ ಮನೆಯನ್ನು ಖರೀದಿ ಮಾಡಿದ್ದರು. ಅವರ ಇಡೀ ಕುಟುಂಬ ಆ ಮನೆಯಲ್ಲಿ ವಾಸವಾಗಿತ್ತು. ಆದರೆ 2009ರಲ್ಲಿ ಈ ಮನೆಯನ್ನು ಕೆಡವಲಾಯಿತು.
ಹೌದು, ಅಣ್ಣಾವ್ರು ಸದಾಶಿವನಗರದ ಮನೆಯಲ್ಲಿ ಬಾಳಿ ಬದುಕಿದವರು. ಅವರ ನೆನಪುಗಳು ಆ ಮನೆಯಲ್ಲಿದ್ದವು. ಇಡೀ ಕುಟುಂಬ, ಮಕ್ಕಳು ಮೊಮ್ಮಕ್ಕಳು ಎಲ್ಲರೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಮನೆಯಲ್ಲಿ ಬರೋರು ಹೋಗೋರು ಹೆಚ್ಚಾದ ಕಾರಣ ಮನೆ ಚಿಕ್ಕದು ಎನ್ನಿಸ ತೊಡಗಿತು. ಈ ಕಾರಣಕ್ಕೆ ಎಲ್ಲರೂ ಬೇರೆ ಮನೆ ಮಾಡಿಕೊಳ್ಳಬೇಕು ಎಂದು ಕೂಡ ನಿರ್ಧಾರ ಮಾಡಿದ್ದರು. ಆದರೆ ಆ ವೇಳೆ ಅಣ್ಣಾವ್ರು ಆ ವೇಳೆ ಬೇರೆ ಮನೆ ಮಾಡುವುದಕ್ಕೆ ಒಪ್ಪಲಿಲ್ಲ. ಎಲ್ಲರೂ ಜೊತೆಯಾಗೆ ಇರಬೇಕು ಎಂದು ನಿರ್ಧಾರ ಮಾಡಿದ್ದರು. ಆದರೆ 2006ರಲ್ಲಿ ಅನಾರೋಗ್ಯಕ್ಕೆ ಗುರಿಯಾಗಿದ್ದ ಅಣ್ಣಾವ್ರು 2006ರ ಏಪ್ರಿಲ್ 12ರಂದು ವಿಧಿವಶರಾದರು.

ಬಳಿಕ 2007ರಲ್ಲಿ ಶಿವಣ್ಣ ಅವರು ಮನೆಯಿಂದ ಹೊರಬಂದರು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಹೊಸ ಮನೆ ಕಟ್ಟಿಸಿಕೊಂಡು, ಪತ್ನಿ ಮತ್ತು ಮಕ್ಕಳ ಜೊತೆಗೆ ಅಲ್ಲಿಗೆ ಶಿಫ್ಟ್ ಆದರು. ಇನ್ನು 2009ರಲ್ಲಿ ಅಪ್ಪು ಅವರು ಪಾರ್ವತಮ್ಮನವರ ಜೊತೆಗೆ ಮಾತನಾಡಿ ನಿರ್ಧರಿಸಿ, ಸದಾಶಿವನಗರದ ಮನೆಯನ್ನು ಕೆಡವಿ, ಹೊಸದಾಗಿ ಎರಡು ಮನೆಗಳನ್ನು ಕಟ್ಟಲು ನಿರ್ಧಾರ ಮಾಡಿದರು. ಇದಕ್ಕೆ ಪಾರ್ವತಮ್ಮನವರ ಒಪ್ಪಿಗೆ ಕೂಡ ಸಿಕ್ಕಿತು. ಅಂತೆಯೇ 2009ರಲ್ಲಿ ಎಲ್ಲರೂ ಬೇರೆ ಮನೆಗೆ ಶಿಫ್ಟ್ ಆಗಿ, ಸದಾಶಿವನಗರದ ಮನೆಯನ್ನು ಒಡೆಸಿ, ಹೊಸ ಮನೆಗಳ ನಿರ್ಮಾಣ ಶುರುವಾಯಿತು. 2012ರಲ್ಲಿ ಒಂದು ಮನೆಯಿದ್ದ ಜಾಗದಲ್ಲಿ ಎರಡು ಮನೆಗಳು ನಿಂತವು. ಒಂದು ಮನೆ ಅಪ್ಪು ಅವರ ಕುಟುಂಬಕ್ಕೆ, ಇನ್ನೊಂದು ಮನೆ ರಾಘಣ್ಣ ಅವರ ಕುಟುಂಬಕ್ಕೆ.

2012ರಲ್ಲಿ ಮನೆಯ ಗೃಹಪ್ರವೇಶ ಕೂಡ ಅದ್ಧೂರಿಯಾಗಿ ನಡೆಯಿತು. ಆದರೆ ಆ ವೇಳೆ ಅಪಮಾನ, ಟೀಕೆಗಳನ್ನು ಅನುಭವಿಸಿದವರು ಅಪ್ಪು. ಆ ಸಮಯದಲ್ಲಿ ಜನರು ಅಪ್ಪು ಅವರನ್ನು ಮನೆಮುರುಕ ಎಂದು ಕರೆದರು. ಅಣ್ಣಾವ್ರು ಬಾಳಿ ಬದುಕಿದ ಮನೆಯನ್ನು ಕೆಡವಿದ ಎಂದು ದೂರಿದರು, ಮನೆ ಒಡೆದ ಎಂದೆಲ್ಲಾ ಹೇಳಿದರು. ಇಷ್ಟೆಲ್ಲಾ ಟೀಕೆಗಳು ಕೇಳಿಬಂದರು ಸಹ, ಅಪ್ಪು ಅವರು ಬೇಸರ ಮಾಡಿಕೊಳ್ಳಲಿಲ್ಲ. ಜನರಿಗೆ ಸಮಾಧಾನದಿಂದಲೇ ಉತ್ತರ ಕೊಟ್ಟರು. ಆ ಒಂದು ಉತ್ತರವನ್ನು ಕೇಳಿದರೆ, ಅಪ್ಪು ಅವರ ಮನಸ್ಸು ಎಂಥದ್ದು ಎಂದು ಗೊತ್ತಾಗುತ್ತದೆ. ಅಷ್ಟಕ್ಕೂ ಅಪ್ಪು ಅವರು ಹೇಳಿದ್ದು ಏನು ಎಂದರೆ.. “ಅಣ್ಣಾವ್ರನ್ನ ಒಂದು ಮನೆಗೆ ಸೀಮಿತಗೊಳಿಸಬೇಡಿ.
ಅಪ್ಪಾಜಿ ಅಲ್ಲಿದ್ದದ್ದು ನಿಜ, ಆ ಮನೆ ಬಗ್ಗೆ ನಮಗೂ ಅಟ್ಯಾಚ್ಮೆಂಟ್, ಸೆಂಟಿಮೆಂಟ್ ಎಲ್ಲವೂ ಇದೆ. ಈಗ ನಮ್ಮ ಅನುಕೂಲಕ್ಕೋಸ್ಕರ ಬದಲಾವಣೆ ಮಾಡಿದ್ದೀವಿ. ಮನೆ ಹೀಗಾಗಿದ್ದಕ್ಕೆ ಅಪ್ಪಾಜಿ ನೆನಪು ಇಲ್ಲ ಅಂತ ಅಲ್ಲ. ಸದಾಶಿವನಗರದ ಒಂದು ಮನೆಯಲ್ಲಿ ಮನೆ ಕಟ್ಟಿಲ್ಲ ಅವರು, ಕನ್ನಡಿಗರ ಪ್ರತಿ ಮನೆಮನದಲ್ಲಿ ವಾಸ ಮಾಡಿರೋರು. ಅವರ ಮನೆ ಇದೊಂದೇ ಅಲ್ಲ, ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅವರು ವಾಸವಾಗಿದ್ದಾರೆ. ಈ ಕಾರಣಕ್ಕೆ ಅಣ್ಣಾವ್ರ ಮನೆ ಸದಾಶಿವನಗರ ಮಾತ್ರ ಅಂದುಕೊಳ್ಳಬಾರದು. ಇಲ್ಲಿ ವಿವಾದ ಅಗೋದಕ್ಕೆ ಏನು ಇಲ್ಲ..” ಎಂದಿದ್ದರು ಅಪ್ಪು. ಇಂಥ ಗುಣ ಯಾರಲ್ಲಿ ಇರುತ್ತೆ ಹೇಳಿ…