ಹೌದು ಈಗಾಗಲೇ ಕಾರ್ಯರಂಭಗೊಂಡಿರುವ ವಂದೇ ಭಾರತ್ ರೈಲು ಕಲ್ಬುರ್ಗಿಯಿಂದ ಎಸ್ಎಂವಿಟಿ ಬೆಂಗಳೂರಿನ ನಡುವೆ, ಮೈಸೂರುನಿಂದ ಎಂಜಿಆರ್ ಚೆನ್ನೈವರೆಗೂ ಸಂಚರಿಸುತ್ತಿದೆ. ಈಗ ಪ್ರಾರಂಭ ಆಗಲಿರುವ ವಂದೇ ಭಾರತ್ ರೈಲು ಸೇವೆಯು ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸಲಿದೆ.
ಬೆಳಗಾವಿ ಮತ್ತು ಬೆಂಗಳೂರನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಏಪ್ರಿಲ್ ಮೊದಲ ವಾರದಲ್ಲಿ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ಆಹಾರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ನಡುವೆ ನಡೆದ ಸಭೆಯ ನಂತರ ಈ ತೀರ್ಮಾನ ಹೊರಬಿದ್ದಿದೆ.

ಯಾವಾಗ ಸಂಚಾರ ಪ್ರಾರಂಭ?
ಏಪ್ರಿಲ್ 1ರಿಂದ ಬೆಳಗಾವಿ ಟೂ ಬೆಂಗಳೂರು ವಂದೇ ಭಾರತ್ ರೈಲು ಕಾರ್ಯಾರಂಭಗೊಳ್ಳಲಿದೆ. ಬೆಳಿಗ್ಗೆ 5:30ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, ಮಧ್ಯಾಹ್ನ 1
:00 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಮತ್ತೆ ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ರಾತ್ರಿ 10:30ಕ್ಕೆ ಬೆಳಗಾವಿ ತಲುಪಲಿದೆ. ತಾತ್ಕಾಲಿಕವಾಗಿ ಸಮಯ ನಿಗದಿಗೊಂಡಿದ್ದು, ಶೀಘ್ರದಲ್ಲಿ ಅಧಿಕೃತ ವೇಳಾ ಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಲಿದೆ.
ವಂದೇ ಭಾರತ್ನಿಂದ ಏನು ಪ್ರಯೋಜನ?
ಹಾಗೆಯೇ, ಸಾರ್ವಜನಿಕರು ಹಾಗೂ ಪ್ರತಿನಿಧಿಗಳ ಬೇಡಿಕೆಯ ಮೇರೆಗೆ ಬೆಂಗಳೂರು-ಧಾರವಾಡದವರೆಗೂ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಬೆಳಗಾವಿವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರ ಜೊತೆಗೆ ಕಡಿಮೆ ಅವಧಿಯಲ್ಲಿ ದೂರವನ್ನು ಕ್ರಮಿಸಬಹುದಾಗಿದೆ. ಉತ್ತಮ ಪ್ರಯಾಣದ ಅನುಭವವನ್ನು ನೀಡುವುದರ ಜೊತೆಗೆ ಈ ಭಾಗಗಳ ಆರ್ಥಿಕ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ.
ಪ್ರಯಾಣದ ಸಮಯದಲ್ಲಿಯೇ ಊಟ ಖರೀದಿಸಲು ಅವಕಾಶ:
ಈ ಮೊದಲು ಸಂಚಾರ ಪ್ರಾರಂಭಿಸಿದ ವಂದೇ ಭಾರತ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿಯೇ ಊಟಕ್ಕೂ ಸಹ ಪ್ರಯಾಣಿಕರು ಹಣ ಪಾವತಿಸಿ, ನಂತರ ರೈಲಿನಲ್ಲಿ ಆಹಾರ ಪಡೆಯಬೇಕಿತ್ತು. ಒಂದು ವೇಳೆ ಆಹಾರ ಕಾಯ್ದಿರಿಸುವುದು ಮರೆತಿದ್ದಲ್ಲಿ, ಸಂಚಾರಿಸುವ ವೇಳೆ ಪಡೆಯಲು ಅವಕಾಶವಿರಲಿಲ್ಲ. ಆದರೆ, ಪ್ರಯಾಣಿಕರಿಗೆ ಈ ತೊಂದರೆಯಾಗದಂತೆ ರೈಲ್ವೆ ಮಂಡಳಿ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ. ಅದೇನೆಂದರೆ, ಟಿಕೆಟ್ ಖರೀದಿಸುವ ಸಮಯದಲ್ಲಿಯೇ ಊಟಕ್ಕೆ ಹಣ ಪಾವತಿಸಿ, ಕಾಯ್ದಿರಿಸದಿದ್ದರೂ ಸಹ ಪ್ರಯಾಣಿಸುವ ವೇಳೆಯಲ್ಲಿಯೇ ಊಟವನ್ನು ಖರೀದಿಸಬಹುದಾಗಿದೆ. ಮುಂಚೆಯೇ ಕಾಯ್ದಿರಿಸಲು ಮರೆತಿದ್ದವರು, ಪ್ರಯಾಣಿಸುವ ವೇಳೆ ರೈಲಿನಲ್ಲಿಯೇ ಆಹಾರ ಕೊಂಡುಕೊಳ್ಳಲು ಮುಂದಾದಾಗ ಆಹಾರ ಲಭ್ಯವಿಲ್ಲದ ಕಾರಣ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಆದರೀಗ ಈ ಸಮಸ್ಯೆಗೆ ರೈಲ್ವೆ ಮಂಡಳಿ ಪರಿಹಾರ ಕಂಡುಕೊಂಡಿದೆ.