ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಭಾರೀ ಮಳೆಯಾಗುತ್ತಿದೆ. ಭೀಕರ ಮಳೆಯಿಂದಾಗಿ ನೆರೆಯ ಆಂಧ್ರಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಮರಿಗಳನ್ನು ರಕ್ಷಿಸುವಂತೆ ನಾಯಿಯೊಂದು ಪೊಲೀಸರೊಂದಿಗೆ ಮೂಕವಾಗಿ ಸಹಾಯ ಕೋರಿದೆ. ನಾಯಿಯ ಅಸಹಾಯಕತೆಗೆ ಮರುಗಿದ ಪೊಲೀಸರು ಭೀಕರ ಪ್ರವಾದಿಂದ ಮರಿಗಳನ್ನು ರಕ್ಷಿಸಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ತಿಂಬೆಲ್ಲ ಮೊನ್ನೆಯಷ್ಟೇ ಭೀಕರ ಮಳೆ ಸುರಿದಿತ್ತು. ಇದರಿಂದಾಗಿ ಜನ ಜೀವನ ಅತಂತ್ರವಾಗಿತ್ತು. ಈ ನಡುವೆ ಮೂರು ನಾಯಿ ಮರಿಗಳು ಕೊಚ್ಚಿ ಹೋಗುತ್ತಿದ್ದವು, ಇದನ್ನು ಹತಾಶವಾಗಿ ನೋಡುತ್ತಿದ್ದ ತಾಯಿ ನಾಯಿಯೂ ಸಹಾಯಕ್ಕಾಗಿ ಅಲ್ಲಿದ್ದ ಪೊಲೀಸರನ್ನು ನಿರಂತರವಾಗಿ ಹಿಂಬಾಲಿಸಿದೆ. ನಾಯಿಯ ಮೂಕ ವೇದನೆಯನ್ನು ಅರಿತ ವಿಜಯವಾಡ ಪೊಲೀಸರು ಕೊನೆಗೂ ಹರಸಾಹಸಪಟ್ಟು ಪ್ರವಾಹದಲ್ಲಿ ತೇಲುತ್ತಿದ್ದ ನಾಯಿ ಮರಿಗಳನ್ನು ರಕ್ಷಿಸಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿ ಮರಿಗಳನ್ನು ರಕ್ಷಿಸಿದ ಪೊಲೀಸರು ಮರಿಗಳನ್ನು ಸ್ವಚ್ಚ ನೀರಿನಿಂದ ತೊಳೆದು ತಾಯಿ ನಾಯಿಯ ಬಳಿ ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ಮಾನವೀಯ ನಡೆಯನ್ನು ಕೊಂಡಾಡಿದ್ದಾರೆ. ಸದ್ಯ, ಟ್ವಿಟ್ಟರ್ ನಲ್ಲಿ ಈ ವಿಡಿಯೋದೊಂದಿಗೆ, ‘ಶಹಬ್ಬಸ್ ಪೊಲೀಸ್’ ಎಂಬ ಹ್ಯಾಶ್ ಟ್ಯಾಗ್ ಸಕ್ಕತ್ ಟ್ರೆಂಡಿಂಗ್ ನಲ್ಲಿದೆ.