ಧಾರಾವಾಹಿ ಪ್ರಿಯರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಪರಿಚಯ ಇದ್ದೇ ಇರುತ್ತದೆ. ಹಾಗೇ ಆ ಧಾರಾವಾಹಿ ನೋಡುವವರಿಗೆ ತಾಂಡವ್ ಹಾಗೂ ಭಾಗ್ಯಾ ಮಗಳು ತನ್ವಿ ಖಂಡಿತ ಗೊತ್ತಿರುತ್ತಾಳೆ. ಅಮ್ಮನಿಗೆ ಓದು ಬರಹ ಬರುವುದಿಲ್ಲವೆಂದು ಹೀಯಾಳಿಸುತ್ತಿದ್ದ ತನ್ವಿ ಈಗ ಸ್ವಲ್ಪ ಮಟ್ಟಿಗೆ ಬದಲಾಗಿದ್ದಾಳೆ. ಆದರೂ ನಡುವೆ ಪಾರ್ಟಿ, ಶಾಪಿಂಗ್, ಟ್ರಿಪ್ ಎಂದೆಲ್ಲಾ ಹೈ-ಫೈ ಜೀವನ ಬಯಸಿ ಮನೆಮಂದಿಗೆ ಸಮಸ್ಯೆ ತಂದಿಡುವ ತನ್ವಿ ಪಾತ್ರದಲ್ಲಿ ನಟಿಸುತ್ತಿರುವ ಬಾಲನಟಿ ಹೆಸರು ಅಮೃತಾ ಗೌಡ. ಇಷ್ಟು ದಿನ ತನ್ನ ಅಭಿನಯದಿಂದ ಎಲ್ಲರನ್ನು ರಂಜಿಸುತ್ತಿದ್ದ ಅಮೃತಾ ಈಗ ಸೀರಿಯಲ್ನಿಂದ ಹೊರ ಬರುತ್ತಿದ್ದಾರಂತೆ. ಹಾಗಂತ ಅವರೇ ಹೇಳಿದ್ದಾರೆ.
ಅಮೃತಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಮೃತಾ, ಸೀರಿಯಲ್ನಲ್ಲಿ ತನ್ನ ತಮ್ಮನ ಪಾತ್ರದಲ್ಲಿ ನಟಿಸುತ್ತಿರುವ ಗುಂಡಣ್ಣ (ನಿಹಾರ್ ಗೌಡ)ನಿಗೆ ಕರೆ ಮಾಡಿ ಗುಂಡು ಮಿಸ್ ಯೂ ಎನ್ನುತ್ತಾರೆ. ಅತ್ತ ನಿಹಾಲ್ ಏಕೆ ಬ್ರೋ ಎನ್ನುತ್ತಾನೆ. ನಾನು ಸೀರಿಯಲ್ ಬಿಡುತ್ತಿದ್ದೇನೆ, ನಾನು ಸಿಎ ಮಾಡಬೇಕು, ಭಾಗ್ಯಮ್ಮನಿಗೆ ಹೇಳಿಬಿಡು, ಅವರಿಗೆ ಕರೆ ಮಾಡಲು ನೆಟ್ವರ್ಕ್ ಸಿಗುತ್ತಿಲ್ಲ. ಮುಂದಿನ ಶೆಡ್ಯೂಲ್ನಿಂದ ಹೊಸ ತನ್ವಿ ಬರುತ್ತಾಳೆ. ನಾನೇ ಕೆಲವರನ್ನು ಸೂಚಿಸಿದ್ದೇನೆ, ಈಗಾಗಲೇ ಆಡಿಷನ್ ನಡೆದಿದೆ ಎಂದು ಅಳುವಂತೆ ನಟಿಸುತ್ತಾರೆ. ಈ ವಿಚಾರ ಕೇಳಿ ಗುಂಡಣ್ಣ ಬಹಳ ಬೇಸರ ಮಾಡಿಕೊಳ್ಳುತ್ತಾನೆ, ಹಾಗೆಲ್ಲಾ ಹೇಳಬೇಡ ಬ್ರೋ ಎನ್ನುತ್ತಾನೆ. ಆದರೆ ನಂತರ ನಡೆಯೋದು ಟ್ವಿಸ್ಟ್.

ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ವಿಜಯನಗರದ ಇಂದು ಕಾಲೇಜಿನ ಸಂಜನಾಬಾಯಿ ಎಂಬ ವಿದ್ಯಾರ್ಥಿನಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ .ಆರ್ 600 ಕ್ಕೆ 599 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬೆಳಗಾವಿ ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ತನ್ವಿ ಹೇಮಂತ ಪಾಟೀಲ 600ಕ್ಕೆ 597 ಅಂಕ ಪಡೆದಿದ್ದಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಾವು ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಿದ್ದೆವು, ಮನೆಯವರ ಪ್ರತಿಕ್ರಿಯೆ ಹೇಗಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡು ಖುಷಿ ಪಡುತ್ತಿದ್ದಾರೆ. ಹಾಗೇ ನಟಿ ಅಮೃತಾ ಗೌಡ ಕೂಡಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 543 ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದಾರೆ. ಈ ವಿಚಾರ ಕೂಡಾ ಮಾಧ್ಯಮದಲ್ಲಿ ಪ್ರಸಾರವಾಗಿದೆ. ನನಗೆ ಇಷ್ಟು ಅಂಕ ಬರುತ್ತದೆ ಎಂದು ನಾನು ಖಂಡಿತ ಊಹಿಸಿರಲಿಲ್ಲ, ನನ್ನ ರಿಸಲ್ಟ್ ನೋಡಿ ನನಗೇ ಶಾಕ್ ಆಗಿದೆ. ಡಿಸ್ಟಿಂಕ್ಷನ್ ಬಂದಿದ್ದು ಬಹಳ ಖುಷಿಯಾಗುತ್ತಿದೆ. ಅಮ್ಮನಿಗೆ ನಾನು ಶೇ 90ರಷ್ಟು ಸ್ಕೋರ್ ಮಾಡಬೇಕು ಎಂಬ ಆಸೆ ಇತ್ತು. ಅದರೆ ಅವರ ಆಸೆಗಿಂತ ನಾನು 1 ಪರ್ಸೆಂಟ್ ಹೆಚ್ಚೇ ಗಳಿಸಿದ್ದೇನೆ.
ಕಾಲೇಜಿನಲ್ಲಿ ಕೂಡಾ ಎಲ್ಲರೂ ಖುಷಿ ಪಟ್ಟರು, ಧಾರಾವಾಹಿ ಶೂಟಿಂಗ್ ಜೊತೆಗೆ ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದೆ. ಅಪ್ಪ-ಅಮ್ಮ ಇಬ್ಬರೂ ಖುಷಿಯಾಗಿದ್ದಾರೆ. ರಿಸಲ್ಟ್ ಗೊತ್ತಾದ ಕೂಡಲೇ ಬಾಡೂಟ, ಕೇಕ್ ಕಟ್ ಮಾಡಿ ಸೆಲಬ್ರೇಷನ್ ಮಾಡಿದೆವು. ರಿಸಲ್ಟ್ ಬಂದ ನಂತರ ಶೂಟಿಂಗ್ ಸೆಟ್ಗೆ ಹೋಗಿಲ್ಲ. ಆದರೆ ಸೀರಿಯಲ್ ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ನನಗೆ ಕಂಗ್ರಾಜುಲೇಷನ್ಸ್ ಹೇಳಿದ್ದಾರೆ ಎಂದು ಅಮೃತಾ, ಮಾಧ್ಯಮದವರ ಮುಂದೆ ತನ್ನ ಖುಷಿ ಹಂಚಿಕೊಂಡಿದ್ದರು. ಅಮೃತಾ ತಾಯಿ ಕೂಡಾ ಮಗಳು ಹೆಚ್ಚು ಅಂಕ ಗಳಿಸಿದ್ದಕ್ಕೆ ಖುಷಿಯಾಗಿದ್ದರು.

ಆಕ್ಟಿಂಗ್ ಕೂಡಾ ಮಾಡಿಕೊಂಡು, ವಿದ್ಯಾಭ್ಯಾಸದತ್ತ ಕೂಡಾ ಗಮನ ಹರಿಸಿ ವಾಣಿಜ್ಯ ವಿಭಾಗದಲ್ಲಿ ಇಷ್ಟು ಅಂಕ ಗಳಿಸಿರುವುದು ನಿಜಕ್ಕೂ ಶ್ಲಾಘನೀಯ. ಮುಂದಿನ ವಿದ್ಯಾಭ್ಯಾಸಕ್ಕಾಗಿ ತನ್ವಿ ಅಲಿಯಾಸ್, ಅಮೃತಾ ಸೀರಿಯಲ್ ಬಿಡುತ್ತಿರುವ ವಿಚಾರ ಕೇಳಿ ಧಾರಾವಾಹಿಪ್ರಿಯರು ಬೇಸರಗೊಂಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅಮೃತಾ, ಏಪ್ರಿಲ್ ಪೂಲ್ ದಿನ ತಮಾಷೆ ಮಾಡಲು ತನ್ನ ತಮ್ಮನ ಪಾತ್ರಧಾರಿ ನಿಹಾರ್ ಗೌಡನಿಗೆ ಕರೆ ಮಾಡಿ ಸೀರಿಯಲ್ ಬಿಡುತ್ತೇನೆ ಎಂದಿದ್ದಾರೆ. itsmajjakannada ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದು ಪ್ರಾಂಕ್ ಅಷ್ಟೇ ಎಂದು ತಿಳಿದ ಧಾರಾವಾಹಿಪ್ರಿಯರು ಕೂಡಾ ಖುಷಿಯಾಗಿದ್ದಾರೆ. ಈ ಕ್ಯೂಟ್ ಹುಡುಗಿ, ತನ್ವಿ ಆಗಿ ಮುಂದುವರೆದು ಇದೇ ರೀತಿ ಧಾರಾವಾಹಿಪ್ರಿಯರನ್ನು ರಂಜಿಸಲಿ. ಅವರ ಮುಂದಿನ ಭವಿಷ್ಯ ಚೆನ್ನಾಗಿರಲಿ, ನಟನೆ, ವಿದ್ಯಾಭ್ಯಾಸ ಎರಡರಲ್ಲೂ ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸೋಣ.