ಅಮ್ಮ ಅಂದ್ರೆ ಒಂದು ಶಕ್ತಿ, ಅಮ್ಮ ಅಂದ್ರೆ ಎಲ್ಲವೂ.. ಅಮ್ಮ ಇಲ್ಲದೇ ಏನು ಇಲ್ಲ ಅಂದರು ತಪ್ಪಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಮೊದಲ ಗುರು ಅಮ್ಮ, ಪ್ರತಿಯೊಬ್ಬರ ಬದುಕಿನ ಬೆಳಕು ಅಮ್ಮ. ಅಮ್ಮನ ಕಳೆದುಕೊಂಡವರಿಗೆ ಅಮ್ಮನ ನೆನಪುಗಳೆ ಆಸರೆ. ಅಮ್ಮ ಮಾನಸಿಕವಾಗಿ ಕೊಡೋ ಶಕ್ತಿಯೇ ಪ್ರೇರಣೆ. ಇದೇ ರೀತಿ ನಟಿ ಸುಧಾರಾಣಿ ಅವರಿಗೆ ಸಹ ಆಗಿದ್ದು, ಜೀಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಬಂದಾಗ ಸುಧಾರಾಣಿ ಅವರು ಅಮ್ಮನ ಸೀರೆಯನ್ನು ಧರಿಸಿ ಬಂದಿದ್ದು, ಅದಕ್ಕೆ ಸಂಬಂಧಿಸಿದ ಹಾಗೆ ಸುಂದರವಾದ ಸಾಲುಗಳನ್ನು ಬರೆದು, ಒಂದು ಪೋಸ್ಟ್ ಮಾಡಿದ್ದಾರೆ. ಅವರು ಬರೆದಿರುವುದು ಏನು ಎಂದರೆ..

“ಮೊನ್ನೆ Zee Tvಯ ಸರಿಗಮಪ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಯಾವ ಸೀರೆ ಉಟ್ಕೊಳ್ಳೋದು ಅಂತ ಹುಡುಕ್ತಾ ಇದ್ದಾಗ Cupboard ನಲ್ಲಿ ಅಮ್ಮನ ಈ ಸೀರೆ ಕಣ್ಣಿಗೆ ಬಿತ್ತು. ಈ ಸೀರೆ ನೋಡಿದ ತಕ್ಷಣ ನೆನಪಿನ ಹೂಗುಚ್ಛ ನನ್ನ ಕಣ್ಮುಂದೆ ಬರೋದಕ್ಕೆ ಶುರುವಾಯ್ತು. ತುಂಬಾ ವರ್ಷಗಳ ಹಿಂದೆ ಅಮ್ಮನ ಜೊತೆ ಸೀರೆ Shopping ಗೆ ಅಂತ ಹೋಗಿದ್ದಿರಬಹುದು, ಆಗ ಅಕುಲ್ ಬಾಲಾಜಿ ಅವರ ತಂದೆಯ ಅಂಗಡಿಯಲ್ಲಿ ಈ ಸೀರೆ ತಗೊಂಡಿದ್ದಿರಬಹುದು, ಅಮ್ಮ ಈ ಸೀರೆನ ತುಂಬಾ ಇಷ್ಟಪಟ್ಟು ಈ Combination ಚೆನ್ನಾಗಿದೆ ಅಂತ ಮೊದಲು ಈ ಸೀರೆನ ಆಯ್ಕೆ ಮಾಡಿಟ್ಕೊಂಡಿದ್ದರಬಹುದು, ಇದು ಅವಳ Favorite ಸೀರೆ ಆಗಿದ್ರಿಂದ ಸುಮಾರು ಬೇರೆ ಬೇರೆ Occasion ಗಳಲ್ಲಿ ಈ ಸೀರೆ ಉಟ್ಟಿದ್ದಿರಬಹುದು, ಹೀಗೆ ಎಲ್ಲಾ ನೆನೆಪುಗಳು ಮರುಕಳಿಸ್ತು. ಆಗಲೇ Decide ಮಾಡ್ದೆ, ಕಾರ್ಯಕ್ರಮಕ್ಕೆ ಈ ಸೀರೆನೇ ಉಡೋದು ಅಂತ.
ಆ Lights ಗಳ ಮಧ್ಯ, ಅಲ್ಲಿರೋ Grandeur ಮಧ್ಯ ಈ ಸೀರೆ Simple ಆಗಿ ಕಾಣಬಹುದು ಅನ್ನೋ ಒಂದು Thought ಕೂಡ ಮನಸ್ಸಿಗೆ ಬಂತು, ಆದ್ರು ಪರ್ವಾಗಿಲ್ಲ ಈ ಸೀರೆನೇ ಉಡಬೇಕು ಅಂತ Decide ಮಾಡ್ಬಿಟ್ಟೆ.. ಯಾಕಂದ್ರೆ.. ಗೊತ್ತಿಲ್ಲ… ಅಮ್ಮ ಕಡೇ ಬಾರಿ ಈ ಸೀರೆ ಉಟ್ಟು ಹಾಗೆ ಇಟ್ಬಿಟ್ಟಿದ್ಲು ಅನ್ಸತ್ತೆ.. ಈ ಸೀರೆ ಉಟ್ಟಾಗ ಅವಳು ಬಳಸುತ್ತಾ ಇದ್ದಂಥ Talcum Powder, ಅವಳ Perfume ಅದೆಲ್ಲ ಇದ್ದು ಇಲ್ಲದ ಹಾಗೆ, ಆ ಸುವಾಸನೆ ಅಮ್ಮನ ಸೀರೆಯಲ್ಲಿ ಇನ್ನೂ ಇತ್ತು. ಈ ಸೀರೆ ನೋಡಿದರೆ ಗೊತ್ತಾಗತ್ತೆ, ಬಹಳಷ್ಟು ಸಾರಿ ಅವಳು ಈ ಸೀರೆ ಉಟ್ಟಿದ್ದರೂ ರೇಷ್ಮೆಯಲ್ಲಿ ಒಂದು ಮೃದುತನ ಇದೆ. ಅದರ ಜೊತೆಗೆ ಅಷ್ಟು ಸಾರಿ ಉಪಯೋಗಿಸಿದ್ರೂ ರೇಷ್ಮೆಯಲ್ಲಿರೋ ಆ ಗಟ್ಟಿತನ ಕೂಡ ಮಾಸಿಲ್ಲ. ಇದೆಲ್ಲವೂ ಸೀರೆಯ ಗುಣವಲ್ಲ, ಅವಳ ಗುಣವನ್ನ ಸೀರೆಯ ಮೂಲಕ ತೋರಿಸ್ತಾ ಇದೆ ಅನ್ನೋ ಹಾಗಿದೆ.
ಅವಳಲ್ಲಿದ್ದ ಆ ಮೃದುತನ, ಗಟ್ಟಿತನ ಸೀರೆಯ ಮೂಲಕ ಎದ್ದು ಕಾಣ್ತಿರೋ ಹಾಗಿತ್ತು. ಸೀರೆ ಮೇಲೆ ಅಷ್ಟೊಂದು Lights ಬಿದ್ದಾಗ ಆ ರೇಷ್ಮೆಯ ಮೇಲೊಂದು ಕಾಂತಿ, ತೇಜಸ್ಸು ಇತ್ತು. ಇದೆಲ್ಲ ಅಮ್ಮನ ಕಾಂತಿ, ಅವಳ ಮುಖದ ತೇಜಸ್ಸು ಹೊಳಪನ್ನ ತೋರಿಸ್ತಿತ್ತು. ಅವಳು ಜೀವನದಲ್ಲಿ ನೋಡಿದಂಥ ಏಳುಬೀಳುಗಳು, ಸುಖ ದುಃಖಗಳು, ನೋವು ನಲಿವುಗಳು ಎಲ್ಲವೂ ಈ ಸೀರೆಯಲ್ಲಿ ಕಾಣ್ತಿತ್ತು. ಅದೇ ರೀತಿ, ಅದೆಲ್ಲವನ್ನೂ ಮೀರಿ, ಕಷ್ಟಗಳನ್ನು ಗೆದ್ದು, ಅವಳು ಧೈರ್ಯವಾಗಿ ನಡೆದುಬಂದ ಪ್ರಯಾಣದ ಹಾದಿ ಕಾಣಿಸ್ತಾ ಇತ್ತು. “ಇದನ್ನೆಲ್ಲ ನೀನು ಜಯಿಸಿದ್ದೀಯಾ, ನಿನಗೆ ದೃಷ್ಟಿ ಬೀಳದೇ ಇರಲಿ” ಅಂತ ಈ ಸೃಷ್ಟಿ ಅಮ್ಮನಿಗೆ ಹೇಳ್ತಿರೋ ಸಂಕೇತವೇ ಈ ಸೀರೆಯಲ್ಲಿರೋ ಕಪ್ಪು ಬಣ್ಣದ ಸೆರಗು, ಕಪ್ಪು ಅಂಚು ಅನ್ನಿಸ್ತಾ ಇತ್ತು.
ಈ ಸೀರೆ ಉಟ್ಟಾಗ ಅವಳೇ ನನ್ನನ್ನ ಅಪ್ಪಿಹಿಡಿದು ಮಡಿಲಲ್ಲಿ ಕೂರಿಸಿಕೊಂಡು ಅವಳ ಬದುಕಿನ ಅನುಭವದ ಪಾಠವನ್ನ ನನಗೆ ಕಲಿಸುತ್ತಿರೋ ಹಾಗೆ ಭಾಸವಾಯ್ತು. ಇಂಥದ್ದೊಂದು ವಿಶೇಷವಾದ ಸೀರೆ ಉಟ್ಟಾಗ ನನಗೆ ಅನ್ನಿಸಿದ್ದು ಒಂದೇ.. ಅಮ್ಮನ ಪ್ರೀತಿಯ ಮುಂದೆ, ಆ ಭಾವನೆಗಳ ಮುಂದೆ ಬೇರೆ ಯಾವುದೇ ಹೊಸ Designer ಸೀರೆ ಆಗ್ಲಿ, Branded ಬಟ್ಟೆ ಆಗ್ಲಿ ಸರಿಸಮವಲ್ಲ.. ಅಮ್ಮನ ಅಪ್ಪುಗೆಯ ಅನುಭವ ಕೊಡೋ ಸೀರೆ ಎದುರು ಇನ್ಯಾವುದು ನಿಲ್ಲೋದಿಲ್ಲ, ಬೆಲೆ ಬಾಳೋದಿಲ್ಲ…” ಎಂದು ಅಮ್ಮನ ಬಗ್ಗೆ ಭಾವುಕ ಸಾಲುಗಳನ್ನು ಬರೆದು, ಪೋಸ್ಟ್ ಮಾಡಿದ್ದಾರೆ ನಟಿ ಸುಧಾರಾಣಿ. ಈ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದು, ಅಮ್ಮನ ಅಪ್ಪುಗೆಯ ಸೀರೆ ನಿಮಗೆ ತುಂಬಾ ಚೆನ್ನಾಗಿ ಕಾಣುತ್ತಿತ್ತು, ಕಾರ್ಯಕ್ರಮದಲ್ಲಿ ಸುಂದರವಾಗಿ ಕಾಣ್ತಿದ್ರಿ ಅಂತಿದ್ದಾರೆ.