ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ನಟಿ ನೇಹಾ ಗೌಡ ಮನೆಮಗಳಿದ್ದಂತೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ಮಾಡಿ ಜನಮನ ಗೆದ್ದ ಈಕೆ ಇಂದಿಗೂ ಕಿರುತೆರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಎರಡು ವರ್ಷದ ಹಿಂದೆ ತನ್ನ ಬಾಲ್ಯ ಗೆಳೆಯನಾದ ಚಂದನ್ ಗೌಡ ಅವರನ್ನು ವರಿಸಿದ ನಟಿ ನೇಹ ಗೌಡ ಒಂದೆರಡು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು. ಕೆಲ ತಿಂಗಳ ಹಿಂದೆ ಅವರ ಸೀಮಂತವನ್ನು ಕನ್ನಡದ ಒಂದು ರಿಯಾಲಿಟಿ ಶೋನಲ್ಲಿ ಆಚರಿಸಲಾಯಿತು.
ಇದೀಗ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾಗಿರುವ ನಟಿ ನೇಹ ಗೌಡ ಅವರು ಡೆಲಿವರಿ ಸಮಯದಲ್ಲಿ ನಡೆದ ಒಂದು ಬೇಸರದ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಹೌದು, ನಟಿ ನೇಹಾ ಗೌಡ ಅವರ ಪತಿ ನಟ ಚಂದನ್ ಗೌಡ ಅವರು ಕೂಡ ಅಂತರಪಟ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯವಿದ್ದಾರೆ.

ಈ ದಂಪತಿಗೆ ಅವರ ಇಚ್ಛೆಯಂತೆ ಹೆಣ್ಣು ಮಗು ಆಗಿರುವುದು ಬಹಳ ಸಂತಸ ತಂದಿದೆ. ಆದರೆ ತಮ್ಮ ಡೆಲಿವರಿ ಸಮಯದಲ್ಲಿ ಆದ ಒಂದು ಘಟನೆಯನ್ನು ಹೇಳಿಕೊಂಡಿದ್ದಾರೆ ನಟಿ ನೇಹಾ ಗೌಡ.
ನಾವು ಸೆಲೆಬ್ರಿಟಿಗಳಾಗಿ ಸಾವಿರಾರು ಜನರು ನಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುವುದರಿಂದ ಇಂತಹ ವೇದಿಕೆಗಳಲ್ಲಿ ಸರಿಯಾದ ಮೆಸೇಜನ್ನು ಕೊಡುವುದು ನಮ್ಮ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಡೆಲಿವರಿ ಆದ ಕೋಣೆಯಲ್ಲಿಯೇ ಪಕ್ಕದಲ್ಲಿ ಮತ್ತೊಬ್ಬ ತಾಯಿ ತನ್ನ ಮಗುವಿಗೆ ಜನ್ಮವಿಟ್ಟಳು. ಆದರೆ ಅದು ಹೆಣ್ಣು ಮಗು ಎಂಬ ಒಂದೇ ಒಂದು ಕಾರಣಕ್ಕೆ ಆಕೆ ಮಗುವನ್ನು ಒಯ್ಯಲು ನಿರಾಕರಿಸಿದ್ದಾಳೆ. ಒಬ್ಬ ತಾಯಿ ತನ್ನದೇ ಮಗುವನ್ನು ಹೆಣ್ಣು ಎಂಬ ಕಾರಣಕ್ಕೆ ನಿರಾಕರಿಸಿರುವ ಘಟನೆಯನ್ನು ನೋಡಿ ನನಗೆ ಬಹಳ ಬೇಸರವಾಯಿತು ಎಂದು ತಾವು ನೋಡಿದ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಟಿನೇಹ ಗೌಡ.

ನಾವು ಹಲವಾರು ವಿಚಾರಗಳಲ್ಲಿ ಮುಂದುವರಿದರೂ ಸಹ ನಮ್ಮ ಯೋಚನೆಗಳು ಇನ್ನೂ ಈ ರೀತಿಯಿದೆಯಾ? ಎಂಬ ಪ್ರಶ್ನೆ ಮೂಡಿತು. ಇವತ್ತು ನಾವು ಸೋಶಿಯಲ್ ಮೀಡಿಯಾವನ್ನು ಚೆನ್ನಾಗಿ ಬಳಸುತ್ತಿರಬಹುದು ಅಥವಾ ಇನ್ಯಾವುದೋ ಮುಂದುವರೆದ ಟೆಕ್ನಾಲಜಿಯನ್ನು ಬಳಸುತ್ತಿರಬಹುದು. ಆದರೂ ಸಹ ಈ ರೀತಿಯ ಲಿಂಗ ಭೇದ ಇನ್ನು ನಮ್ಮಲ್ಲಿದೆ ಎಂಬುದು ಬಹಳ ಬೇಸರದ ಸಂಗತಿ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ನಾನು ಒಬ್ಬ ತಾಯಿಯಾಗಿ ನನ್ನ ಮಗಳಿಗೆ ಅತ್ಯುತ್ತಮ ಭವಿಷ್ಯವನ್ನು ಸೃಷ್ಟಿಸಿಕೊಳ್ಳಲು ಪೂರಕವಾದ ಅವಕಾಶಗಳನ್ನು ಕಲ್ಪಿಸಿಕೊಡಲಿದ್ದೇನೆ. ಲಿಂಗ ಭೇದ ಸೇರಿದಂತೆ ಎಲ್ಲಾ ರೀತಿಯ ತಾರತಮ್ಯವನ್ನು ಮೀರಿದ ಜಗತ್ತು ನಮ್ಮ ಮಕ್ಕಳದ್ದಾಗಬೇಕು ಎಂಬುದೇ ನನ್ನ ಆಸೆ ಎಂದು ತಮ್ಮ ಭವಿಷ್ಯದ ಕನಸುಗಳ ಬಗ್ಗೆಯೂ ಮಾತನಾಡಿದ್ದಾರೆ ನಟಿ ನೇಹಾ ಗೌಡ.