ಅಣ್ಣಯ್ಯ, ಇದು ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಅಪ್ಪಟ ಹಳ್ಳಿ ಸೊಗಡಿನ ಸೆಂಟಿಮೆಂಟ್ ಮತ್ತು ರೊಮ್ಯಾನ್ಸ್ ಹೊಂದಿರುವ ಸಿನಿಮಾ ಇದು. ಈ ಸಿನಿಮಾ ಜನರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. 1993ರ ಬಿಗ್ ಬ್ಲಾಕ್ ಬಸ್ಟರ್ ಗಳ ಪೈಕಿ ಅಣ್ಣಯ್ಯ ಸಿನಿಮಾ ಕೂಡ ಸೇರುತ್ತದೆ. ರವಿಚಂದ್ರನ್ ಅವರು ನಾಯಕನಾಗಿ, ಬಾಲಿವುಡ್ ಬೆಡಗಿ ಮಧೂ ಶಾ ಅವರು ನಾಯಕಿಯಾಗಿ ನಟಿಸಿದ ಸಿನಿಮಾ ಇದು. ಈ ಸಿನಿಮಾದ ಪಾತ್ರವರ್ಗ ಅದ್ಭುಯವಾಗಿತ್ತು, ರವಿಚಂದ್ರನ್ ಅವರಿಗೆ ಹೇಳಿ ಮಾಡಿಸಿದ ಪಾತ್ರ ಎಂದು ಹೇಳಿದರು ಸಹ ತಪ್ಪಲ್ಲ. ಇನ್ನು ಈ ಸಿನಿಮಾ ಕುರಿತಾಗಿ ಇತ್ತೀಚೆಗೆ ನಟಿ ಮಧೂ ಅವರು ಹೇಳಿಕೆ ಕೊಟ್ಟಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ ಅಷ್ಟೇ, ತೆರೆಕಂಡ ಮೇಲೆ ಸಿನಿಮಾವನ್ನ ನೋಡೇ ಇಲ್ಲ ಎಂದು ಹೇಳಿದ್ದಾರೆ ನಟಿ ಮಧೂ.
ಅಣ್ಣಯ್ಯ ಸಿನಿಮಾ ಹಿಸ್ಟರಿ ಬೇರೆ ಥರವೇ ಇದೆ. ದಶಕಗಳ ಹಿಂದೆ, ಬಿ. ಪುಟ್ಟಸ್ವಾಮಯ್ಯ ಅವರು ಕನ್ನಡದಲ್ಲಿ ಅರ್ಧಾಂಗಿ ಎನ್ನುವ ಕಾದಂಬರಿಯನ್ನು ಬರೆದಿದ್ದರು, ಆ ಕಾದಂಬರಿಯನ್ನು ಮಲ್ಲಮ್ಮನ ಪವಾಡ ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಲಾಗಿತ್ತು. ಈ ಸಿನಿಮಾಗೆ ಹೀರೋ ಆಗಿದ್ದು ಅಣ್ಣಾವ್ರು. ಇದೇ ಸಿನಿಮಾವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ತಮಿಳಿನಲ್ಲಿ ಎಂಗ ಚಿನ್ನ ರಾಸ ಹೆಸರಿನಲ್ಲಿ ಸಿನಿಮಾ ಮಾಡಲಾಗಿತ್ತು, ನಂತರ ಈ ಸಿನಿಮಾ ಹಿಂದಿಗೆ ರಿಮೇಕ್ ಆಯಿತು. ಬೇಟಾ ಹೆಸರಿನಲ್ಲಿ ಹಿಂದಿಗೆ ರಿಮೇಕ್ ಆದಾಗ ಅಲ್ಲಿ ಹೀರೋ ಆಗಿ ನಟಿಸಿದರು ಅನಿಲ್ ಕಪೂರ್, ಮಾಧುರಿ ದೀಕ್ಷಿತ್ ಹೀರೋಯಿನ್ ಆಗಿ ನಟಿಸಿದ್ದರು. ಈ ಸಿನಿಮಾದ ಧಕ್ ಧಕ್ ಹಾಡು ಇವತ್ತಿಗೂ ಫೇಮಸ್, ಮಾಧುರಿ ದೀಕ್ಷಿತ್ ಅವರ ಡ್ಯಾನ್ಸ್ ಅನ್ನು ಮರೆಯಲು ಸಾಧ್ಯವೇ?

ಇನ್ನು ಇದೆ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಿದ್ದು ಅಣ್ಣಯ್ಯ ಹೆಸರಿನಲ್ಲಿ. ರವಿಚಂದ್ರನ್ ಅವರು ನಾಯಕನಾಗಿ ಮಧು ಅವರು ನಾಯಕಿಯಾಗಿ ನಟಿಸಿದರು. ಈ ಸಿನಿಮಾದ ಕಥೆ ಏನು ಎಂದರೆ, ನಾಯಕನಿಗೆ ಅಮ್ಮ ಇರುವುದಿಲ್ಲ, ಅಪ್ಪ ಎರಡನೇ ಮದುವೆ ಆಗಿರುತ್ತಾನೆ, ಮಲತಾಯಿ ಹಣಕ್ಕಾಗಿ ಮದುವೆ ಆಗುವುದು, ಆದರೆ ತಾಯಿ ಪ್ರೀತಿಯನ್ನು ಮಲಮಗನಿಗೆ ನೀಡಿ, ಅವನ ಪ್ರೀತಿ ಸಂಪಾದಿಸಿ, ಎಲ್ಲಾ ಆಸ್ತಿಯನ್ನು ತಾನು ಪಡೆದುಕೊಳ್ಳಬೇಕು, ತನ್ನ ಮಗನಿಗೆ ಎಲ್ಲವೂ ಸಿಗಬೇಕು ಎಂದು ಪ್ಲಾನ್ ಮಾಡಿರುತ್ತಾಳೆ. ಆದರೆ ಮುಗ್ಧ ಮಗನಿಗೆ ತಾಯಿ ಈ ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತೇ ಇರುವುದಿಲ್ಲ. ಅಮ್ಮನೇ ದೈವ ಎಂದು ನಂಬಿರುತ್ತಾನೆ. ನಾಯಕಿ ಮಧೂ ಅವರು ನಾಯಕನನ್ನು ಮದುವೆಯಾದ ನಂತರ ಅತ್ತೆಯ ದುರ್ಬುದ್ಧಿಯನ್ನು ಗಂಡನಿಗೆ ಅರ್ಥ ಮಾಡಿಸುವ ಸ್ಟ್ರಾಂಗ್ ಆದ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡದಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಗಳ ಸಾಲಿಗೆ ಸೇರಿತ್ತು.
ಹಳ್ಳಿಯ ಹುಡುಗನಾಗಿ ಅಮ್ಮನನ್ನು ಅತಿಯಾಗಿ ನಂಬುವ, ಪ್ರೀತಿಸುವ ಮಗನ ಪಾತ್ರದಲ್ಲಿ ರವಿಚಂದ್ರನ್ ಅವರು ಅದ್ಭುತವಾಗಿ ನಟಿಸಿದ್ದರು. ಈ ಸಿನಿಮಾ ಅವರ ಕೆರಿಯರ್ ಗೆ ದೊಡ್ಡ ಹಿಟ್ ಒಂದನ್ನು ನೀಡಿತ್ತು. ಹಾಗೆಯೇ ಮಧೂ ಅವರಿಗೆ ಸಹ ಇದೊಂದು ಒಳ್ಳೆಯ ಹಿಟ್ ಸಿನಿಮಾ ಆಗಿತ್ತು. ಮಧೂ ಅವರು ತಮ್ಮ ಕೆರಿಯರ್ ಬಗ್ಗೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಟಿ ಸುಹಾಸಿನಿ ಅವರು ಯೂಟ್ಯೂಬ್ ನಲ್ಲಿ ಒಂದು ಶೋ ಮಾಡುತ್ತಾರೆ, ಅದಕ್ಕೆ ಗೆಸ್ಟ್ ಆಗಿ ಬಂದಿದ್ದ ಮಧೂ ಅವರು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮಧೂ ಅವರು ಚಿತ್ರರಂಗಕ್ಕೆ ಹೊಸಬರಂತೂ ಅಲ್ಲ. ಇವರ ತಂದೆ ನಿರ್ಮಾಪಕರಾಗಿದ್ದ ಕಾರಣ ಮಧೂ ಅವರಿಗೆ ಚಿತ್ರರಂಗದ ಪರಿಚಯವಿತ್ತು. ಆದರೆ ಇವರಿಗೆ ತಂದೆಯ ಕಡೆಯಿಂದ ಯಾರೂ ಕರೆದು ಅವಕಾಶ ಕೊಡುವುದು ಇಷ್ಟವಿರಲಿಲ್ಲ. ತಮ್ಮ ಸ್ವಂತ ಪ್ರತಿಭೆಯಿಂದ ಬಳೆಯಬೇಕು ಎಂದು ಆಸೆ ಇತ್ತು ಎಂದಿದ್ದಾರೆ.

ಮಧೂ ಅವರು ಶುರುವಿನಲ್ಲಿ ಸಿನಿಮಾ ಸಕ್ಸಸ್ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲವಂತೆ. ಮಧೂ ಅವರು ಲೈಫ್ ಎಂಜಾಯ್ ಮಾಡಬೇಕು ಎಂದುಕೊಂಡಿದ್ದರಂತೆ. ಬೆಳಗ್ಗಿನ ಹೊತ್ತು ಸಿನಿಮಾ ಶೂಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದರಂತೆ, ಬಳಿಕ ಸಂಜೆ ಹೊತ್ತಲ್ಲಿ ಫ್ರೆಂಡ್ಸ್ ಜೊತೆ ಸೇರಿ ಪಾರ್ಟಿ ಮಾಡುತ್ತಿದ್ದರಂತೆ, ಎಂಜಾಯ್ ಮಾಡುತ್ತಿದ್ದರಂತೆ. ಅಷ್ಟೇ ಲೈಫ್, ಚೆನ್ನಾಗಿ ಎಂಜಾಯ್ ಮಾಡಬೇಕು ಅನ್ನೋ ಮೈಂಡ್ ಸೆಟ್ ನಲ್ಲೇ ಇದ್ದರಂತೆ. ಇನ್ನು ಸಿನಿಮಾಗಳಲ್ಲಿ ನಟಿಸಿ ಬರುವುದು, ಡಬ್ಬಿಂಗ್ ಮಾಡುವಾಗ ಸಿನಿಮಾ ನೋಡುವುದು, ಇದಿಷ್ಟನ್ನು ಬಿಟ್ಟರೆ ಸಿನಿಮಾ ಬಿಡುಗಡೆಯಾದ ಮೇಲೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವುದು ಮಾಡುತ್ತಿರಲಿಲ್ಲವಂತೆ ಮಧೂ ಅವರು. ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿದಾಗಲು ಇದೇ ರೀತಿ ಎಂದಿದ್ದಾರೆ. ಬೇರೆ ಭಾಷೆಯ ಸಿನಿಮಾಗಳ ಜೊತೆಗೆ ಅಣ್ಣಯ್ಯ ಸಿನಿಮಾ ಬಗ್ಗೆ ಕೂಡ ಮಾತನಾಡಿದ್ದಾರೆ..

“ಕನ್ನಡದಲ್ಲಿ ಅಣ್ಣಯ್ಯ ಅಂತ ಒಂದು ಸಿನಿಮಾ ಮಾಡಿದ್ದೆ, ಕನ್ನಡದಲ್ಲಿ ಡಬ್ಬಿಂಗ್ ಕೂಡ ಮಾಡದ ಕಾರಣ, ಡಬ್ಬಿಂಗ್ ವೇಳೆ ಸಿನಿಮಾ ನೋಡಿರಲಿಲ್ಲ. ಸಿನಿಮಾ ಬಿಡುಗಡೆಯಾದ ಮೇಲೆ ನೋಡಲಿಲ್ಲ, ಇದುವರೆಗೂ ಆ ಸಿನಿಮಾವನ್ನು ನೋಡೇ ಇಲ್ಲ. ಕನ್ನಡದಲ್ಲಿ ಅದು ಸೂಪರ್ ಹಿಟ್ ಆಗಿರುವ ಸಿನಿಮಾ ಅಂತಾರೆ. ಕೆಲವೊಮ್ಮೆ ಯಾರಾದರೂ ಸಿಕ್ಕಿ, ಅಣ್ಣಯ್ಯ ಸಿನಿಮಾ ತುಂಬಾ ಚೆನ್ನಾಗಿದೆ, ನೀವು ತುಂಬಾ ಚೆನ್ನಾಗಿ ನಟಿಸಿದ್ದೀರಿ, ಸಿನಿಮಾ ಸೂಪರ್ ಹಿಟ್ ಆಗಿತ್ತು ಎಂದು ಹೇಳಿದರೆ, ಹೌದಾ ಓಕೆ ಎಂದು ಹೇಳಿ ಸ್ಟೈಲ್ ಮಾಡ್ತೀನಿ..” ಎಂದು ಇಂಟರ್ವ್ಯೂ ನಲ್ಲಿ ಹೇಳಿದ್ದಾರೆ ನಟಿ ಮಧೂ. ಒಟ್ಟಿನಲ್ಲಿ ಸಿನಿಮಾ ಹೀರೋಯಿನ್ ಆಗಿ ನಟಿಸಿದ ಇವರು ಸಿನಿಮಾವನ್ನೇ ನೋಡಿಲ್ಲ ಎನ್ನುವುದು ಒಂದು ರೀತಿ ಆಶ್ಚರ್ಯವೂ ಹೌದು. ಆದರೆ ಕನ್ನಡ ಸಿನಿಮಾ ಪ್ರಿಯರು ಇವರ ಅಭಿನಯವನ್ನಂತೂ ಇವತ್ತಿಗು ಕೂಡ ಮರೆತಿಲ್ಲ. ಕಮಾನು ಡಾರ್ಲಿಂಗ್ ಹಾಡು ಎಲ್ಲರ ಫೇವರೆಟ್.
ಇನ್ನು ಮಧೂ ಅವರು ನಟಿಸಿರುವ ರೋಜಾ ಸಿನಿಮಾವನ್ನು ಯಾರು ತಾನೇ ಮರೆಯಲು ಸಾಧ್ಯ? ಇವರನ್ನು ಇಡೀ ಲೈಫ್ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಅದ್ಭುತವಾದ ಸಿನಿಮಾ. ಇನ್ನು ಮಧೂ ಅವರು ಕನ್ನಡದಲ್ಲಿ ನಾಯಕಿಯಾಗಿ ನಟಿಸಿದ್ದು ಅಣ್ಣಯ್ಯ ಸಿನಿಮಾದಲ್ಲಿ, ಬಳಿಕ ಲಾಂಗ್ ಗ್ಯಾಪ್ ನಂತರ ಸುದೀಪ್ ಅವರ ರನ್ನ ಸಿನಿಮಾದಲ್ಲಿ ಅತ್ತೆಯ ಪಾತ್ರದಲ್ಲಿ ನಟಿಸಿದರು, ಇದು ಸ್ಟ್ರಾಂಗ್ ಆದ ಪೋಷಕ ಪಾತ್ರ ಆಗಿತ್ತು. ಬಳಿಕ ಪ್ರೀಮಿಯರ್ ಪದ್ಮಿನಿ, ಸೀತಾರಾಮ ಕಲ್ಯಾಣ, ನಾನು ಮತ್ತು ವರಲಕ್ಷ್ಮಿ ಸೇರಿದಂತೆ ಕೆಲವು ಒಳ್ಳೆಯ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. 90ರ ದಶಕದಲ್ಲಿ ನಾಯಕಿಯಾಗಿ ಹೆಸರು ಮಾಡಿದ್ದ ಮಧೂ ಅವರು ಇಂದು, ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ವೆಬ್ ಸೀರೀಸ್ ಎಲ್ಲದರಲ್ಲೂ ಬ್ಯುಸಿ ಆಗಿದ್ದಾರೆ.



