ಆರೋಗ್ಯ ಹಾಗೂ ಫಿಟ್ನೆಸ್ಗೆ ಉದಾಹರಣೆಯಾಗಿರುವ ಶತಾಯುಷಿ ಪ್ರಾಧ್ಯಪಕರೊಬ್ಬರು ಯಾವೆಲ್ಲಾ ಅಂಶಗಳು ಮನುಷ್ಯನ ದೀರ್ಘಾಯುಷ್ಯವನ್ನು ಕಸಿಯುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದಾರೆ. ಪೌಷ್ಠಿಕಾಂಶ
ಪ್ರಾಧ್ಯಾಪಕರೆಂದು ಜನಪ್ರಿಯರಾಗಿರುವ ಡಾ.ಜಾನ್ ಸ್ಕಾರ್ಫೆನ್ಬರ್ಗ್ ಆಗೋಗ್ಯಕರ ಜೀವನ ಶೈಲಿಯನ್ನು ಪಾಲಿಸುತ್ತ ಬಂದಿದ್ದು, ದೀರ್ಘಾಯುಷಿಯಾಗಿ ಮುನ್ನಡೆಯುತ್ತಿದ್ದಾರೆ. ಆರೋಗ್ಯಕರ ಜೀವನಕ್ಕೆ ಯಾವೆಲ್ಲಾ ಅಂಶಗಳು ತೊಡಕಾಗುತ್ತವೆ ಎಂಬ ಮಾಹಿತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ, ಹಾಗಾದ್ರೆ, ಯಾವ ಅಂಶಗಳು ದೀರ್ಘಾಯುಷ್ಯದ ಹಾದಿಯಲ್ಲಿ ತೊಡಕಾಗಿ ಪರಿಣಮಿಸುತ್ತವೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಈ ಅಂಕಣದಲ್ಲಿದೆ
ಹೊಗೆ ಬಿಡುವುದು ಒಳ್ಳೆಯದಲ್ಲವೇ ಅಲ್ಲಾ:
ದೀರ್ಘಕಾಲದ ಸ್ವಾಸ್ಥ್ಯಕ್ಕೆ ತಂಬಾಕು, ಮದ್ಯ ಹಾಗೂ ಕ್ಷಣಿಕ ಮನರಂಜನೆ ನೀಡುವ ಔಷಧಿಗಳನ್ನು ತ್ಯಜಿಸುವುದು ಅವಶ್ಯಕವಾಗಿದೆ, ಈ ವಸ್ತುಗಳು ಕ್ಯಾನ್ಸರ್, ಯಕೃತ್ತಿನ ಕಾಯಿಲೆ ಹಾಗೂ ಹೃದಯ ಸಂಬಂಧಿ ತೊಂದರೆಗಳನ್ನು ತರುವ ಸಾಧ್ಯತೆಯಿರುತ್ತದೆ. ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಡಾ. ಜಾನ್ ಹೇಳಿದ್ದಾರೆ.
ಸರ್ವ ರೋಗಕ್ಕೂ ಸಾರಾಯಿ ಮದ್ದಲ್ಲಾ:
ಜಾನ್ ಅವರ ಪ್ರಕಾರ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಕ್ಯಾನ್ಸರ್ಗೆ ಆಲ್ಕೋಹಾಲ್ ಸೇವನೆ ಪ್ರಮುಖ ಕಾರಣ. ವಾಷಿಂಗ್ಟನ್ ವಿಶ್ವವಿದ್ಯಾಲಯದ ವೈದ್ಯ ಮ್ಯಾಕ್ಸ್ ಗ್ರಿಸ್ವೊಲ್ಡ್ ಅವರ ಬಗ್ಗೆ ಹೇಳಿದ್ದು, ಇವರು ಆಲ್ಕೋಹಾಲ್ ಸೇವನೆ ಎಷ್ಟು ಸುರಕ್ಷಿತ ಎಂಬುದರ ಕುರಿತು ನಡೆಸಿದ ಅಧ್ಯಯನದಲ್ಲಿ ಶೂನ್ಯ ಉತ್ತರವನ್ನು ಕಂಡುಕೊಂಡಿದ್ದಾರೆ ಎಂದು ಡಾ.ಜಾನ್ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ. ಅಂದರೆ, ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಎಂದು ತಿಳಿದು ಬಂದಿದೆ.
ಒತ್ತಡಕ್ಕೆ ಹೇಳಿ ಬಾಯ್ ಬಾಯ್:
ಒಳ್ಳೆಯ ಆಹಾರ ಸೇವನೆ ಮಾತ್ರವಲ್ಲ ಒತ್ತಡ ರಹಿತ ಜೀವನ ಕೂಡ ದೀರ್ಘಾಯುಷ್ಯಕ್ಕೆ ಕಾರಣ ಎಂದು ಡಾ.ಜಾನ್ ಹೇಳಿದ್ದಾರೆ. ಒತ್ತಡವು ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿ, ಜೆನೆಟಿಕ್ಸ್ ಹಾಗೂ ಆತನ ದೇಹ ಹೇಗೆ ಒತ್ತಡವನ್ನು ನಿಭಾಯಿಸುತ್ತಾನೆ ಎಂಬುದನ್ನು ನಿರ್ಧರಿಸುತ್ತದೆ. ಒತ್ತಡವು ಇನ್ಸುಲಿನ್, ಆಕ್ಸಿಡೇಟಿವ್ ಒತ್ತಡ, ಉರಿಯೂತ ಹಾಗೂ ಒತ್ತಡದ ಹಾರ್ಮೋನ್ಗಳನ್ನು ಹೆಚ್ಚಿಸುತ್ತದೆ. ಆತಂಕ, ದುಃಖ, ಅಜೀರ್ಣ ಸಮಸ್ಯೆ ಹಾಗೂ ಆಲ್ಝೈಮರ್ ಕಾಯಿಲೆ ಇದೆಲ್ಲವೂ ಅತಿಯಾದ ಒತ್ತಡದಿಂದ ಉಂಟಾಗುತ್ತವೆ ಎಂಬುದು ಡಾ.ಜಾನ್ ಅವರ ಅಭಿಪ್ರಾಯ.

ಊಟ ಎಷ್ಟು ಮುಖ್ಯವೋ ವ್ಯಾಯಾಮವೂ ಅಷ್ಟೇ ಮುಖ್ಯ:
ಪ್ರತಿದಿನ ವ್ಯಾಯಾಮ ಮಾಡಬೇಕು, ನಡಿಗೆ, ಈಜು ಅಥವಾ ಸೈಕ್ಲಿಂಗ್ನಂತಹ ದೈಹಿಕ ಚಟುವಟಿಕೆಯನ್ನು ಪಾಲಿಸುವುದರಿಂದ ಹೃದಯದ ಆರೋಗ್ಯ, ಸ್ನಾಯು ಶಕ್ತಿ ಹಾಗೂ ಮಾನಸಿಕ ಯೋಗಕ್ಷೇಮ ಮನುಷ್ಯನ ದೀರ್ಘಾಯುಷ್ಯಕ್ಕೆ ಅಗತ್ಯವಾದವು. ಪ್ರತಿದಿನ ಕನಿಷ್ಠ 10 ನಿಮಿಷವಾದರೂ ವ್ಯಾಯಮ ಮಾಡಲೇ ಬೇಕು ಎಂದು ಡಾ. ಜಾನ್ ಸೂಚಿಸುತ್ತಾರೆ.
ಸಿಕ್ಕಿದೆಲ್ಲಾ ತಿನ್ನುವುದು ತೂಕ ಹೆಚ್ಚಿಸಿಕೊಳ್ಳುವುದು ಒಳ್ಳೆಯದಲ್ಲಾ:
ಪ್ರಸ್ತುತ ಬಾಧಿಸುತ್ತಿರುವ ಅಂಶವೆಂದರೆ ಅಧಿಕ ತೂಕ. ಜಾನ್ ಅವರು ಬೆಳಿಗ್ಗೆ 6:30ಕ್ಕೆ ಉಪಾಹರ ಸೇವೆಸಿದರೆ, ಮಧ್ಯಾಹ್ನ 12:30ಕ್ಕೆ ಊಟ ಮಾಡುತ್ತಾರಂತೆ. ಅದರ ನಂತರ ಮತ್ತೇನನ್ನು ಸೇವಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸಸ್ಯಹಾರಗಳಾದ ಹಣ್ಣು, ತರಕಾರಿ, ಕಾಳುಗಳಿಲ್ಲಿ ಹೇರಳ ಪೌಷ್ಠಿಕಾಂಶಗಳಿದ್ದು, ಆಹಾರಕ್ಕೆ ಇವು ಮುಖ್ಯ ಎಂದು ಡಾ.ಜಾನ್ ಹೇಳಿದ್ದಾರೆ.
ಸಕ್ಕರೆ ಸಿಹಿ ಆರೋಗ್ಯಕ್ಕೆ ಕಹಿ:
ಆರೋಗ್ಯ ಕುಂಠಿತಗೊಳಿಸಿ, ಆಯುಷ್ಯ ಕಡಿತಗೊಳಿಸುವ ಮತ್ತೊಂದು ಅಂಶ ಸಿಹಿಯಾದ ಸಕ್ಕರೆ. ಬೊಜ್ಜು, ಮಧುಮೇಹ, ಹೃದ್ರೋಗ ಹಾಗೂ ಚಯಾಪಚಯ ಅಸ್ವಸ್ಥತೆಗೆ ಈ ಸಕ್ಕರೆಯೇ ಕಾರಣ. ಸಂಸ್ಕರಿಸಿದ ಆಹಾರದಲ್ಲಿನ ಸಕ್ಕರೆ ಪ್ರಮಾಣವು ಇನ್ಸುಲಿನ್ ಪ್ರತಿರೋಧಕವಾಗಿ ಕಾರ್ಯನಿರ್ವಹಿಸುತ್ತವೆಯಂತೆ. ಇದು ಟೈಪ್ 2 ಸಕ್ಕರೆ ಖಾಯಿಲೆಗೆ ಮೂಲ ಕಾರಣ. ಇನ್ನು ಮುಂದೆ ಸಕ್ಕರೆ ಸೇವನೆಗೂ ಮುನ್ನ ಆಲೋಚಿಸಿ.
ನಾನ್ವೆಜ್ ಪ್ರಿಯರೇ ಇಲ್ಲಿ ಕೇಳಿ….:
ಮಾಂಸಕ್ಕಿಂತ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬುದು ಡಾ.ಜಾನ್ ಅಭಿಪ್ರಾಯ. ಮಾಂಸದಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ಹಾಗೂ ಕೊಲೆಸ್ಟ್ರಾಲ್ಗಳು ಹೃದಯದ ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತವೆಯಂತೆ. ಹಾಗೆಯೇ, ಸಂಸ್ಕರಿಸಿದ ಮಾಂಸಗಳು ಕೊಲೆಸ್ಟ್ರಾಲ್ ಕ್ಯಾನ್ಸರ್ಗೆ ಸಂಬಂಧಿಸಿದ ಅಂಶಗಳನ್ನು ಹೊಂದಿರುತ್ತವೆ. ವೆಜ್ಗಿಂತ ನಾನ್ವೆಜ್ ಹೆಚ್ಚು ಇಷ್ಟವೆಂದು ಇಂದು ಮಾಡಿದ್ದನ್ನು 2-3 ದಿನಗಳವರೆಗೂ ಸಂಸ್ಕರಿಸಿಟ್ಟು ತಿನ್ನುವ ನಾನ್ವೆಜ್ ಪ್ರಿಯರೇ ತಿನ್ನುವ ಮುನ್ನ ಯೋಚಿಸಿ.
ಒಟ್ಟಾರೆ, ಹಣೆ ಬರಹವೆಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾದದ್ದು ಆರೋಗ್ಯವಂತರಾಗಿ ದೀರ್ಘಾಯುಷ್ಯವನ್ನು ಹೊಂದುವುದು. ಉತ್ತಮ ಆರೋಗ್ಯಾಭ್ಯಾಸ, ಸಮತೋಲಿತ ಜೀವನ ಹಾಗೂ ಸಕಾರಾತ್ಮಕ ಮನಸ್ಥಿತ ಮನುಷ್ಯರನ್ನು ದೀರ್ಘಾವಧಿಯವರೆಗೂ ಜೀವಿಸಲು ಪೂರಕವಾಗಿರುತ್ತದೆ ಎಂಬುದು ಡಾ.ಜಾನ್ ಅವರ ಮಾತಿನ ಸಾರವಾಗಿದೆ.