ರಾಜ್ಯ ಕಾಂಗ್ರೆಸ್ ನಲ್ಲೀಗ ನಾಯಕತ್ವ ಬದಲಾವಣೆ ವಿಚಾರ ತೀವ್ರ ಸದ್ದು ಮಾಡ್ತಿದೆ. ಒಂದು ಬಾರಿ ಸಿಎಂ ಆಗಬೇಕೆಂಬ ಡಿಕೆ ಶಿವಕುಮಾರ್ ಆಸೆ ಕೇವಲ ಕನಸಾಗಿಯೇ ಉಳಿಯುತ್ತಾ ಅನ್ನೋ ಅನುಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏನಾದ್ರೂ ಮಾಡಿ ಸಿಎಂ ಸ್ಥಾನ ಪಡೆಯಬೇಕು ಅಂತ ಆಗಿಂದಾಗ್ಲೇ ಒಂದೊಂದೇ ಹೇಳಿಕೆಗಳನ್ನ ಡಿಸಿಎಂ ಡಿಕೆ ಶಿವಕುಮಾರ್ ಕೊಡುತ್ತಲೇ ಇದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಿಎಂ ಪಟ್ಟ ಇವರಿಗೆ ಸಿಗಬಾರದು ಅಂತ ಸಿದ್ದರಾಮಯ್ಯ ಆಪ್ತ ಸಚಿವರುಗಳು ಕೂಡ ಪ್ರತಿವಾದ ರೀತಿಯಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಹೇಳಿಕೆಗಳು, ಕೌಂಟರ್ ಮಾತುಗಳು ನಿಲ್ತಾ ಇಲ್ಲ. ಹೈ ಕಮಾಂಡ್ ಸೂಚನೆ ಬಳಿಕವೂ ಕೂಡ ಇವೆಲ್ಲವೂ ಮುಂದುವರೆದಿವೆ. ಒಂದು ರೀತಿ ಇದಕ್ಕೆಲ್ಲಾ ಡಿಕೆ ಶಿವಕುಮಾರ್ ಕಾರಣ ಅಂದರೆ ತಪ್ಪಾಗಲ್ಲ. ಆಗಿಂದಾಗ್ಲೇ ಸಿಎಂ ಸ್ಥಾನದ ಬಗ್ಗೆ ಒಂದೊಂದೆ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇದನ್ನ ಸಹಿಸದ ಸಚಿವರುಗಳು ಅವರಿಗೆ ಕೌಂಟರ್ ಹೇಳಿಕೆಗಳನ್ನ ನೀಡುತ್ತಿದ್ದಾರೆ.

ಯಾವಾಗ ಸತೀಶ್ ಜಾರಕಿಹೊಳಿ ನಾನು ಸಿಎಂ ಆಕಾಂಕ್ಷಿ ಅಂತ ಹೇಳಿಕೆ ನೀಡಿದರೋ ಅಂದಿನಿಂದ ಸತೀಶ್ ಜಾರಕಿಹೊಳಿ ಮೇಲೆ ಡಿಕೆ ಶಿವಕುಮಾರ್ ಕೆಂಡವಾಗಿದ್ದರು. ಆಗ್ಗಾಗ್ಗೆ ಅವರ ಮೇಲೆ ಸಂದರ್ಭ ಸಿಕ್ಕಾಗಲೆಲ್ಲಾ ತಿರುಗೇಟು ನೀಡುತ್ತಲೇ ಇದ್ದಾರೆ. ಇತ್ತೀಚೆಗೂ ಕೂಡ ಸಿಎಂ ಸ್ಥಾನದ ಹೇಳಿಕೆಯನ್ನ ನೀಡಿದ್ದರು. ಈ ಹೇಳಿಕೆಯನ್ನ ನೇರವಾಗಿ ಸತೀಶ್ ಜಾರಕಿಹೊಳಿಗೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ನೌಕರರ ಸಂಘದ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಿದ್ದರು. ಈ ವೇಳೆ ಒಪಿಎಸ್ ವಿಚಾರವಾಗಿ ಮಾತನಾಡುತ್ತಾ ರಾಜಕೀಯ ತಿರುವು ಪಡೆಯುವಂತ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಅರ್ಥದ ಜೊತೆಗೆ ಅನೇಕರು ನಾನಾ ಅರ್ಥದಲ್ಲಿ ಮಾತನಾಡುವಂತೆ ಆಗಿದೆ. ಈ ಹೇಳಿಕೆ ಸಾಕಷ್ಟು ತಿರುವು ಪಡೆಯುತ್ತಿದೆ.

ಮುಂದಿನ ಚುನಾವಣೆ ನನ್ನದೇ ನಾಯಕತ್ವ ಅಂತಾ ಡಿ.ಕೆ ಶಿವಕುಮಾರ್ ಬಿಟ್ಟಿರೋ ಬಾಣ, ರಾಜ್ಯ ರಾಜಕಾರಣ ಅಷ್ಟೆ ಅಲ್ಲ ಕೇಂದ್ರದಲ್ಲೂ ಅಲ್ಲೋಲ ಕಲ್ಲೋಲ ಉಂಟು ಮಾಡ್ತಿದೆ. ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿಯನ್ನೇ ಟಾರ್ಗೆಟ್ ಮಾಡಿ ಈ ಮಾತನ್ನ ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ. 2028 ಕ್ಕೆ ಸಿಎಂ ಸ್ಥಾನಕ್ಕೆ ನಾನು ಆಕಾಂಕ್ಷಿ ಅಂತಿದ್ದ ಸಾಹುಕಾರ್ ವಿರುದ್ದ ಡಿಕೆ ಶಿವಕುಮಾರ್ ನೇರವಾಗಿ ಸೆಡ್ಡು ಹೊಡೆದಂತಿದೆ.

ಮುಂದಿನ ಎಲೆಕ್ಷನ್ ನನ್ನ ನಾಯಕತ್ವದಲ್ಲೇ ನಡೆಯುತ್ತೆ. ಇನ್ನೂ 8-10 ವರ್ಷ ನಾನು ಗಟ್ಟಿಯಾಗಿರುತ್ತೇನೆ ಅಂತಾ ಡಿ.ಕೆ ಶಿವಕುಮಾರ್ ಸ್ಪೋಟಕ ಮಾತುಗಳನ್ನಾಡಿದ್ದಾರೆ. ಈ ಹೇಳಿಕೆಯನ್ನ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿಯವ್ರನ್ನೇ ಟಾರ್ಗೆಟ್ ಮಾಡಿ ಹೇಳಿದಂತಿದೆ. ಈಗ ಸಿಎಂ ಸ್ಥಾನ ಖಾಲಿ ಇಲ್ಲ. 2028ಕ್ಕೆ ಕ್ಲೈಮ್ ಮಾಡ್ತೀನಿ ಅಂತಾ ಪದೇ ಪದೇ ಸತೀಶ್ ಜಾರಕಿಹೊಳಿ ಹೇಳ್ತಿದ್ರು. ಆದ್ರೆ ಈಗ ನನ್ನ ನೇತೃತ್ವದಲ್ಲೇ ಮುಂದಿನ ಎಲೆಕ್ಷನ್ ನಡೆಯುತ್ತೆ ಅಂತಾ ಡಿ.ಕೆ ಶಿವಕುಮಾರ್ ಸಿಡಿದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ನಂತ್ರ ನನ್ನದೇ ನಾಯಕತ್ವ ಇರುತ್ತೆ. ನಾನೇ ಸಿಎಂ ಆಗೋದು ಅನ್ನೋ ಸಂದೇಶವನ್ನ ವಿರೋಧಿ ಬಣಕ್ಕೆ ಡಿ.ಕೆ ಶಿವಕುಮಾರ್ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಬಹಿರಂಗ ಹೇಳಿಕೆ ಕೊಡುವವರ ಮುಂದೆ ನೇರವಾಗಿಯೇ ಅಖಾಡಕ್ಕೆ ಇಳಿದು ಮಾತಿನ ಸಮರ ಮುಂದುವರೆಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಜೊತೆ ಡಿ.ಕೆ ಶಿವಕುಮಾರ್ ಉತ್ತಮ ಒಡನಾಟ ಹೊಂದಿರೋದ್ರಿಂದ ಸಿಎಂ ಹಾಗೂ ಆಪ್ತರ ಬಗ್ಗೆ ಆಗಿಂದಾಗ್ಗೆ ರಿಪೋರ್ಟ್ ತಲುಪಿಸುತ್ತಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ದ ಮಾತಾಡ್ತಿದ್ದ ಕೆ.ಎನ್ ರಾಜಣ್ಣಗೆ ಖರ್ಗೆಯಿಂದ ವಾರ್ನ್ ಮಾಡಿಸಿಣ ಬಾಯಿ ಮುಚ್ಚಿಸಿದ್ದಾರೆ. ಸತೀಶ್ ಜಾರಕಿಹೊಳಿಗೂ ಮೂಗುದಾರ ಹಾಕಿಸಿದ್ದಾರೆ.
ಇಷ್ಟು ದಿನ ಯಾರು ಏನೇ ಹೇಳಿಕೆ ಕೊಟ್ಟರು ಸೈಲೆಂಟ್ ಆಗಿಯೇ ದಾಳ ಉರುಳಿಸುತ್ತಿದ್ದ ಡಿ.ಕೆ ಶಿವಕುಮಾರ್ ಈಗ ವೈಲೆಂಟ್ ಆಗಿದ್ದಾರೆ. ಅವರ ಬಹಿರಂಗ ಹೇಳಿಕೆಗಳಿಗೆ ತಾವೂ ಬಹಿರಂಗವಾಗಿಯೇ ತಿರುಗೇಟನ್ನು ನೀಡಬೇಕು ಆಗ ಮಾತ್ರ ಇವರನ್ನ ದಾರಿಗೆ ತರಬಹುದು ಅನ್ನೋದು ಡಿಕೆ ತಂತ್ರ. ಹೈ ಕಮಾಂಡ್ ಮೂಲಕ ಸೂಚನೆ ನೀಡಿಸಿದ್ರೆ, ಅನೇಕರ ಕೆಂಗಣ್ಣಿಗೆ ಕಾರಣ ಆಗಬಹುದು ಅದು ಬೇಡ, ನಾನೇ ನೇರವಾಗಿ ಅಖಾಡಕ್ಕೆ ಇಳಿದು ಬಿಡೋಣ ಅಂತ ಸಿದ್ದು ಬಣದ ವಿರುದ್ದ ಹೊಸ ಹೊಸ ದಾಳ ಉರುಳಿಸ್ತಿದ್ದಾರೆ.