ರಸ್ತೆ ಮಾರ್ಗದ ಮೂಲಕ ಎಲ್ಲಿಗಾದರೂ ಹೋಗ ಬೇಕೆಂದರೆ ಸಾಮಾನ್ಯವಾಗಿ ಆಟೋ, ಬಸ್, ಕಾರು ಅಥವಾ ದ್ವಿಚಕ್ರ ವಾಹನವನ್ನು ಬಳಸುವುದುಂಟು. ಹಾಗೆಯೇ, ರಸ್ತೆ ಮಧ್ಯದಲ್ಲಿ ರಸ್ತೆ ದಟ್ಟಣೆ ನಡುವೆ ಸಿಕ್ಕಿ ಹಾಕಿಕೊಂಡು ಕೈ-ಕೈ ಹಿಸುಕಿಕೊಳ್ಳುವುದೂ ಉಂಟು. ಆದರೆ, ಇಲ್ಲೊಬ್ಬ ಯುವಕ ರಸ್ತೆ ದಟ್ಟಣೆ ಕಿರಿಕಿರಿಯಿಂದ ಪಾರಾಗಲು ಪ್ಯಾರಾಗ್ಲೈಡ್ ಬಳಸಿ ಕಾಲೇಜು ತಲುಪಿರುವ ವೀಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆ ಯುವಕ ಯಾರು? ಈ ಘಟನೆ ನಡೆದಿರುವುದಾದರೂ ಎಲ್ಲಿ ಎಂಬುದರ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರದ ವಾಯ್ ತಾಲ್ಲೂಕಿನ ಪಸರಾನಿ ಗ್ರಾಮದ ವಿದ್ಯಾರ್ಥಿ ಸಮರ್ಥ್ ಮಹಾಂಗಡೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ವಾಯು ಮಾರ್ಗದ ಮೂಲಕ ಪ್ಯಾರಾಗ್ಲೈಡ್ ಬಳಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಪರೀಕ್ಷೆಗೆ ೧೫-೨೦ ನಿಮಿಷ ಮಾತ್ರ ಸಮಯವಕಾಶವಿರುವ ಹಿನ್ನೆಲೆ ಪ್ಯಾರಾಗ್ಲೈಡ್ ನ ಮೊರೆ ಹೋಗಿದ್ದ ಸಮರ್ಥ್, ರಸ್ತೆ ದಟ್ಟಣೆಯಲ್ಲಿ ಸಿಲುಕುವುದರಿಂದ ತಪ್ಪಿಸಿಕೊಂಡು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾರೆ.
ಕಾಲೇಜು ಬ್ಯಾಗನ್ನು ಧರಿಸಿ ಪ್ಯಾರಾಗ್ಲೈಡ್ನ ಮೂಲಕ ಹಾರಿ ಬಂದು ಪರೀಕ್ಷಾ ಕೇಂದ್ರದಲ್ಲಿ ಇಳಿದಿರುವ ಸಮರ್ಥ್ ಮಹಾಂಗಡೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ನೋಟ ಸೆಳೆಯುತ್ತಿದೆ. ಬಿ.ಕಾಂನ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು, ನೈಸರ್ಗಿಕ ವಿಪತ್ತು ನಿರ್ವಹಣೆ ವಿಷಯದ ಕುರಿತ ಪರೀಕ್ಷೆಗೆ ತೆರಳಲು ತಡವಾದ ಕಾರಣ ೧೨ ಕಿ.ಮೀ. ದೂರವಿರುವ ಕಿಸಾನ್ವೀರ್ ಕಾಲೇಜಿಗೆ ತಲುಪಲು ತಾವಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಹ್ಯಾರಿಸನ್ ಫೊಲಿ ಎಂಬ ಪ್ಯಾರಾಗ್ಲೈಡ್ ಸಂಸ್ಥೆಯ ನೆರವು ಪಡೆದುಕೊಂಡಿದ್ದಾರೆ.

ಹ್ಯಾರಿಸನ್ ಫೋಲಿ ಸಂಸ್ಥೆಯ ಸಮೀಪವಿರುವ ಕಬ್ಬಿನ ಹಾಲು ತಯಾರಿಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಮರ್ಥ್ ಅವರಿಗೆ ೨.೧೫ಕ್ಕೆ ಪರೀಕ್ಷೆ ನಿಗದಿಯಾಗಿದ್ದು, ಕೇವಲ ೧೫-೨೦ ನಿಮಿಷ ಮಾತ್ರ ಸಮಯಾವಕಾಶವಿರುವುದು ಅರಿವಿಗೆ ಬಂದಿದೆ. ರಸ್ತೆ ಮಾರ್ಗದ ಮೂಲಕ ಕಾಲೇಜು ತಲುಪವಷ್ಟರಲ್ಲಿ ಪರೀಕ್ಷಾ ಸಮಯ ಪ್ರಾರಂಭವಾಗಿರುತ್ತದೆ. ಹಾಗಾಗಿ, ಪ್ಯಾರಾಗ್ಲೈಡಿಂಗ್ ತಜ್ಞ ಗೋವಿಂದ ಯೆವಾಲೆ ಅವರ ಸಹಾಯದಿಂದ, ಸುರಕ್ಷತಾ ಕ್ರಮಕೈಗೊಂಡು ಪ್ಯಾರಾಗ್ಲೈಡ್ ಏರಿ, ಕಾಲೇಜು ತಲುಪಿದ್ದಾರೆ. ಮತ್ತೊಂದೆಡೆ ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಸಮರ್ಥ್ನ ಸ್ನೇಹಿತರು ಇವರ ಪ್ರವೇಶ ಪತ್ರಿಕೆ ಪಡೆದು ಇವರಿಗಾಗಿ ಕಾಯುತ್ತಿದ್ದರಂತೆ. ಈ ವೇಳೆ ಪ್ಯಾರಾಗ್ಲೈಡ್ ಮೂಲಕ ಪರೀಕ್ಷಾ ಕೇಂದ್ರ ಪ್ರವೇಶಿಸಿದ ಸಮರ್ಥ್ ಅವರನ್ನು ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ.
ಒಟ್ಟಾರೆ, ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಭಾಗ ಎಂಬುದನ್ನು ಮನಗಂಡಿದ್ದ ಸಮರ್ಥ್ ಮಹಾಂಗಡೆ, ಅದನ್ನು ತಪ್ಪಿಸಿಕೊಳ್ಳಲು ಬಯಸದೆ ಇಂತಹದೊಂದು ಸಾಹಸಕ್ಕೆ ಕೈ ಹಾಕಿ ನೋಡುಗರನ್ನು ನಿಬ್ಬೆರಗಾಗಿಸಿದ್ದಾರೆ.