ವರನಟ ಡಾ. ರಾಜ್ ಕುಮಾರ್ ಅವರ ಬಗ್ಗೆ ನಾವ್ಯಾರು ಹೊಸದಾಗಿ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ಕನ್ನಡ ಅಂದ್ರೆ ಡಾ. ರಾಜ್ ಕುಮಾರ್ ಎನ್ನುವಷ್ಟರ ಮಟ್ಟಿಗೆ ಅವರ ಕೊಡುಗೆ ಕನ್ನಡ ಕರ್ನಾಟಕಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ ಇದೆ. ಅಣ್ಣಾವ್ರು ಅಂದ್ರೆ ಇಡೀ ಭಾರತ ಚಿತ್ರರಂಗಕ್ಕೆ ಅಷ್ಟು ಗೌರವ. ಅವರ ಸಿನಿಮಾಗಳು ಎಂದರೆ ಪ್ರತಿಯೊಬ್ಬರು ಕೂಡ ಬಹಳ ಆಸಕ್ತಿಯಿಂದ ಮತ್ತು ಪ್ರೀತಿಯಿಂದ ನೋಡುತ್ತಿದ್ದರು. ಕನ್ನಡಕ್ಕಾಗಿಯೇ ಬಾಳಿ ಬದುಕಿದ ಅಣ್ಣಾವ್ರು ಒಂದೇ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಯಾವುದು ಗೊತ್ತಾ?

ಡಾ. ರಾಜ್ ಕುಮಾರ್ ಅವರು ರಂಗಭೂಮಿಯಲ್ಲಿ ನಿರತರಾಗಿದ್ದವರು, ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಾ ನಂತರ ಸಿನಿಮಾ ರಂಗಕ್ಕೆ ಬಂದವರು. ರಾಜಣ್ಣನವರು ನಟಿಸಿದ ಮೊದಲ ಸಿನಿಮಾ ಬೇಡರ ಕಣ್ಣಪ್ಪ, ಈ ಸಿನಿಮಾ ತೆರೆಕಂಡಿದ್ದು 1954 ರಲ್ಲಿ. ಈ ಸಿನಿಮಾದಲ್ಲಿ ಅಣ್ಣಾವ್ರಿಗೆ ಪಂಡರೀಬಾಯಿ ಅವರು ನಾಯಕಿಯಾಗಿದ್ದರು. ಕನ್ನಡದ ಸರ್ವಕಾಲಕ್ಕೂ ಶ್ರೇಷ್ಠ ಎನ್ನಿಸುವ ಸಿನಿಮಾಗಳಲ್ಲಿ ಬೇಡರ ಕಣ್ಣಪ್ಪ ಕೂಡ ಒಂದು.
ಈ ಸಿನಿಮಾ ಸೂಪರ್ ಹಿಟ್ ಆಗಿ ಡಾ. ರಾಜ್ ಕುಮಾರ್ ಅವರಿಗೆ ಒಳ್ಳೆಯ ಹೆಸರು ಮತ್ತು ಅವಕಾಶಗಳು ಬರುವುದಕ್ಕೆ ಶುರುವಾದವು. ಅಣ್ಣಾವ್ರ ಈ ಸಿನಿಮಾವನ್ನು ತೆಲುಗು ನಿರ್ಮಾಪಕರು ಮತ್ತು ನಿರ್ದೇಶಕರು ನೋಡಿ, ಬೇಡರ ಕಣ್ಣಪ್ಪ ಸಿನಿಮಾವನ್ನು ತೆಲುಗಿನಲ್ಲಿ ಮಾಡಲೇಬೇಕು ಎಂದು ನಿರ್ಧಾರ ಮಾಡಿದರಂತೆ. ಆ ವೇಳೆ ತೆಲುಗಿನಲ್ಲಿ ಈ ಪಾತ್ರಕ್ಕೆ ಯಾರು ಸೂಕ್ತ ಎಂದು ಹುಡುಕುವಷ್ಟು ಸಮಯವಿಲ್ಲದ ಕಾರಣ, ಡಾ. ರಾಜ್ ಕುಮಾರ್ ಅವರನ್ನೇ ನಾಯಕನನ್ನಾಗಿ ಹಾಕಿಕೊಳ್ಳಬೇಕು ಎಂದು ನಿರ್ಧಾರ ಆಯಿತಂತೆ.

ಅಂತೆಯೇ ಕನ್ನಡದ ಬೇಡರ ಕಣ್ಣಪ್ಪ, ತೆಲುಗಿಗೆ ಕಾಳಹಸ್ತಿ ಮಹಾತ್ಯಂ ಹೆಸರಿನಲ್ಲಿ ರಿಮೇಕ್ ಆಯಿತು. ಡಾ. ರಾಜ್ ಕುಮಾರ್ ಅವರು ನಾಯಕನಾಗಿ ನಟಿಸಿದರು, ಅವರಿಗೆ ನಾಯಕಿಯಾಗಿ ಮಾಲತಿ ಅವರು ನಟಿಸಿದರು. ಈ ಸಿನಿಮಾವನ್ನು ಹೆಚ್. ಎಲ್. ಎನ್ ಸಿಂಹ ಅವರು ನಿರ್ದೇಶನ ಮಾಡಿದರು, ಗುಬ್ಬಿ ವೀರಣ್ಣನವರೇ ತೆಲುಗಿನಲ್ಲಿ ನಿರ್ಮಾಣ ಮಾಡಿದರು. ತೆಲುಗಿನಲ್ಲಿಯೂ ಈ ಸಿನಿಮಾ ಸೂಪರ್ ಹಿಟ್ ಆಗಿ, ಅಣ್ಣಾವ್ರಿಗೆ ಅಲ್ಲಿ ಕೂಡ ಬೇಡಿಕೆ ಹೆಚ್ಚಾಯಿತು. ತೆಲುಗು ಹಾಗೂ ತಮಿಳಿನಿಂದ ಹೆಚ್ಚು ಅವಕಾಶಗಳು ಬರುವುದಕ್ಕೆ ಶುರುವಾದವು.
ಅಣ್ಣಾವ್ರು ಈ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ. ಹಾಗೆಯೇ ಈ ಒಂದು ಸಿನಿಮಾ ಬಳಿಕ ಡಾ. ರಾಜ್ ಕುಮಾರ್ ಅವರು ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿಬಿಟ್ಟರು. ಅದೇ ರೀತಿ ನಡೆದುಕೊಂಡರು, ಕಾಳಹಸ್ತಿ ಮಹಾತ್ಯಂ ನಂತರ ಇನ್ಯಾವುದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲಿಲ್ಲ. ಕನ್ನಡಕ್ಕಾಗಿಯೇ ತಮ್ಮನ್ನು ತಾವು ಮೀಸಲಾಗಿರಿಸಿಕೊಂಡರು. ಈ ಕಾರಣಕ್ಕಾಗಿಯೇ ಕರ್ನಾಟಕ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಡಾ. ರಾಜ್ ಕುಮಾರ್