
ರಾಜ್ಯದಲ್ಲಿ ವಿವಿಧ ಇಲಾಖೆಗಳ ಬಗ್ಗೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ. ವಿವಿಧ ಖಾತೆಗಳನ್ನು ಹೊಂದಿರುವ ರಾಜ್ಯ ಸರ್ಕಾರದ ಸಚಿವರ ಮೇಲೂ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಸದ್ದು ಮಾಡುತ್ತಿವೆ. ಇದೀಗ ಎಣ್ಣೆಪ್ರಿಯರ ನೆಚ್ಚಿನ ಅಬಕಾರಿ ಇಲಾಖೆಯಲ್ಲೂ ಭಾರಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿರೋ ಮದ್ಯದಂಗಡಿ ಮಾಲೀಕರೇ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಅಬಕಾರಿ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಇದಕ್ಕೆ ಕಾರಣವಾಗಿರುವ ಅಬಕಾರಿ ಸಚಿವರನ್ನೇ ಮೊದಲು ಬದಲಾಯಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ನವೆಂಬರ್ 20ರಿಂದ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಮಾಲೀಕರು ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.
ಅಬಕಾರಿ ಸಚಿವರ ಮೇಲೆಯೇ ಮದ್ಯದಂಗಡಿ ಮಾಲೀಕರು ಗಂಭೀರ ಆರೋಪ ಮಾಡಿದ್ದು, ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವಂತೆ ಬಿಗಿಯಾದ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಸರ್ಕಾರ ಇದನ್ನು ಪುರಸ್ಕರಿಸದೇ ಇದ್ದರೆ, ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್ ಆಗುವ ಸಾಧ್ಯತೆ ಇದ್ದು, ಇದು ಎಣ್ಣೆ ಪ್ರಿಯರಿಗೆ ಆಘಾತ ತರಿಸುವ ಸುದ್ದಿ ಎನ್ನಲಾಗಿದೆ.