ಇಡೀ ಭಾರತವೇ ಹೆಮ್ಮೆ ಪಟ್ಟು ಜಗತ್ತಿನ ಪ್ರಮುಖ ದೇಶಗಳೆಲ್ಲ ಭಾರತದತ್ತ ಮುಖ ಮಾಡುವಂತೆ ಮಾಡಿದ್ದು ಆಗಸ್ಟ್ 23. ಅಂದಿನ ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಈಗ ಇಡೀ ವಿಶ್ವವೇ ಅರಿತಿದೆ. ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ. ಈ ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಇಸ್ರೋ ಮುಖ್ಯಸ್ಥರಿಗೆ ವಿಮಾನವೊಂದರಲ್ಲಿ ಅದ್ದೂರಿ ಸ್ವಾಗತ ದೊರೆತಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಮುನ್ನಡೆಸಿದ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರನ್ನು ಇಂಡಿಗೋ ಫ್ಲೈಟ್ ಗಗನಸಖಿ ಅದ್ಧೂರಿಯಾಗಿ ಸ್ವಾಗತಿಸಿ, ‘ಇಂದು ನಮ್ಮ ವಿಮಾನವನ್ನು ಹತ್ತಿದ ಇಸ್ರೋ ಅಧ್ಯಕ್ಷರಾದ ಶ್ರೀ ಎಸ್. ಸೋಮನಾಥ್ ಅವರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಸೋಮನಾಥ್ ಮತ್ತು ಅವರ ತಂಡಕ್ಕೆ ಒಂದು ದೊಡ್ಡ ಚಪ್ಪಾಳೆ ಬರಬೇಕು. ನೀವು ನಮ್ಮ ವಿಮಾನದಲ್ಲಿರುವುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು’’ ಎಂದು ಗಗನಸಖಿ ಹೇಳಿದ್ದಾರೆ.
ಸೋಮನಾಥನ್ ಅವರನ್ನು ಅಭಿನಂದಿಸಿದ ವಿಡಿಯೋವನ್ನು ಗಗನಸಖಿ ಪೂಜಾ ಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅದೆಷ್ಟೋ ನೆಟ್ಟಿಗರು, ‘ನಿಜವಾದ ನಾಯಕನಿಗೆ ಸಿಕ್ಕ ಗೌರವ ಇದು, ಇಸ್ರೋವನ್ನು ಅಭಿನಂದಿಸಿದ್ದಕ್ಕಾಗಿ ಧನ್ಯವಾದಗಳು’ ಎಂದೆಲ್ಲ ಕಮೆಂಟ್ ಹಾಕಿದ್ದಾರೆ. ಸದ್ಯ, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.